Advertisement

ಇನ್ನೂ ಬಾರದ ಪ್ರಜ್ವಲ್‌ ನಡೆ ನಿಗೂಢ; ಸಂತ್ರಸ್ತೆಯರ ಹೇಳಿಕೆ ದಾಖಲಿಸಿ ಎಸ್‌ಐಟಿ ತನಿಖೆ

11:43 PM May 26, 2024 | Team Udayavani |

ಬೆಂಗಳೂರು: ಎಸ್‌ಐಟಿ ಮುಂದೆ ಶರಣಾಗದಿದ್ದರೆ ಕುಟುಂಬದ ಕೋಪಕ್ಕೆ ಗುರಿಯಾಗುತ್ತೀಯಾ ಎಂಬ ತಾತನ ಎಚ್ಚರಿಕೆಗೂ ಬಗ್ಗದ, ಗೌರವ ಕೊಡುವುದಾದರೆ ವಾಪಸ್‌ ಬಾ ಎಂದಿದ್ದ ಚಿಕ್ಕಪ್ಪನ ಮನವಿಗೂ ಜಗ್ಗದ, ಎಸ್‌ಐಟಿ ತನಿಖೆಗೂ ಒಡ್ಡಿಕೊಳ್ಳದ ಸಂಸದ ಪ್ರಜ್ವಲ್‌ ರೇವಣ್ಣ ನಡೆ ನಿಗೂಢವಾಗಿದೆ.

Advertisement

ಆರಂಭದಲ್ಲಿ ಎಸ್‌ಐಟಿ ನೋಟಿಸ್‌ಗೆ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಪ್ರಜ್ವಲ್‌, ತನಗೆ ಕಾಲಾವಕಾಶ ಬೇಕು ಎಂಬ ಪೋಸ್ಟ್‌ ಮಾಡಿದ್ದೂ ಅಲ್ಲದೆ, ನ್ಯಾಯಾಲಯದಲ್ಲೂ ಅದೇ ಮೊರೆಯಿಟ್ಟಿದ್ದ. ಅನಂತರದ ದಿನಗಳಲ್ಲಿ ಹಲವು ಬಾರಿ ವಿಮಾನದ ಟಿಕೆಟ್‌ ಬುಕ್‌ ಮಾಡಿ, ರದ್ದುಪಡಿಸುವ ಮೂಲಕ ಎಲ್ಲರನ್ನೂ ಗೊಂದಲಕ್ಕೆ ದೂಡಿದ್ದ. ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೆ ಪ್ರಬಲ ಪ್ರಯತ್ನ ನಡೆಸುತ್ತಿರುವಾಗಲೇ ಸಿಎಂ ಕೂಡ ಪಿಎಂಗೆ ಪತ್ರ ಬರೆದಿದ್ದು, ಕೇಂದ್ರ ವಿದೇಶಾಂಗ ಇಲಾಖೆ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದೆಲ್ಲದರ ಬೆನ್ನಲ್ಲೇ ಪ್ರಜ್ವಲ್‌ ಚಲನವಲನಗಳು ನಿಗೂಢವಾಗಿದ್ದು, ಆತನ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಸ್‌ಐಟಿ ಅಧಿಕಾರಿಗಳು ಕಾನೂನು ಪ್ರಕಾರವೇ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದು ಮಾಡಿ ಕಟ್ಟಿ ಹಾಕಲು ಕಸರತ್ತು ನಡೆಸಿದರೂ, ಆ ಪ್ರಕ್ರಿಯೆ ನಡೆಸಲು ಇನ್ನೂ ಹಲವು ದಿನಗಳೇ ಉರುಳಬಹುದು ಎನ್ನಲಾಗುತ್ತಿದೆ. ಪ್ರಜ್ವಲ್‌ ರೇವಣ್ಣ ಜರ್ಮನಿಯಲ್ಲಿ ನಿಗೂಢವಾಗಿದ್ದುಕೊಂಡು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಪ್ರಜ್ವಲ್‌ ಮುಂದಿನ ಹಾದಿಯ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಒಂದು ಮೂಲಗಳ ಪ್ರಕಾರ, ಲೋಕಸಭಾ ಚುನಾವಣ ಫ‌ಲಿತಾಂಶ ಪ್ರಕಟಗೊಂಡ ಬಳಿಕ ವಿದೇಶದಿಂದ ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ, ಎಷ್ಟು ದಿನ ವಿದೇಶದಲ್ಲಿರಲು ಸಾಧ್ಯವೋ ಅಷ್ಟು ದಿನಗಳ ಕಾಲ ಅಲ್ಲೇ ದಿನದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸಂತ್ರಸ್ತೆಯರ ಹೇಳಿಕೆ
ದಾಖಲಿಸಿ ಎಸ್‌ಐಟಿ ತನಿಖೆ
ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ವೈರಲ್‌ ಆಗಿರುವ ವೀಡಿಯೋದ ಕೆಲವು ಸಂತ್ರಸ್ತೆಯರನ್ನು ಎಸ್‌ಐಟಿ ಸಂಪರ್ಕಿಸಿದರೂ, ಮಾನಕ್ಕೆ ಅಂಜಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಸುವುದೇ ಎಸ್‌ಐಟಿಗೆ ದೊಡ್ಡ ಸವಾಲಾಗಿದೆ. ಮಹಿಳೆಯರು ಮುಜುಗರಕ್ಕೆ ಒಳಗಾಗಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇವರ ಹೇಳಿಕೆ ಮೂಲಕ ಸಾಕ್ಷ್ಯ ಕಲೆ ಹಾಕುವುದೇ ಎಸ್‌ಐಟಿಗೆ ದೊಡ್ಡ ತಲೆನೋವಾಗಿದೆ. ಎಸ್‌ಐಟಿಯು ಆರೋಪಿ ಪ್ರಜ್ವಲ್‌ ರೇವಣ್ಣ ಬಗ್ಗೆ ವಿದೇಶಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದು, ಪ್ರಜ್ವಲ್‌ ವಿಚಾರಣೆ ನಡೆಸಿದರೆ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮತ್ತೂಂದೆಡೆ ವೀಡಿಯೋ ವೈರಲ್‌ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜ್ವಲ್‌ ಪ್ರಕರಣ ಸಿಬಿಐಗೆ ಕೊಡಿ: ಆಗ್ರಹ
ಕಲಬುರಗಿ: ರಾಜ್ಯವಲ್ಲದೇ, ದೇಶವನ್ನು ಕೂಡ ತಲ್ಲಣಗೊಳಿಸಿರುವ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವನ್ನು ಸಿಬಿಐಗೆ ನೀಡಲು ನಮ್ಮದೇನೂ ತಕರಾರು ಇಲ್ಲ. ಹಾಗಂತ ನಾವೇ ಆಗ್ರಹಿಸಿದರೂ, ರಾಜ್ಯ ಸರಕಾರ ಸುಮ್ಮನಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ನೀಡಿರುವ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದುಗೊಳಿಸುವಂತೆ ಕೋರುವುದರಿಂದ ಮತ್ತು ಪ್ರಧಾನಿಗೆ ಮುಖ್ಯಮಂತ್ರಿಗಳು ಪತ್ರ ಬರೆಯುವುದಕ್ಕೆ ನಮಗೇನೂ ಅಭ್ಯಂತರವಿಲ್ಲ. ಆದರೆ, ಪ್ರಜ್ವಲ್‌ ಪ್ರಕರಣ ಹೊರಬೀಳುತ್ತಿದ್ದಂತೆ ಅವರು ಹೊರ ದೇಶಕ್ಕೆ ಹಾರಿದರಲ್ಲ, ಆಗ ಸರಕಾರ ಏನು ಮಾಡುತ್ತಿತ್ತು. ಆವಾಗ ರಾಜ್ಯದ ಇಂಟೆಲಿಜೆನ್ಸಿ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next