ಹಾಸನ: ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜಕೀಯ ಬಿಟ್ಟು ಜನರ ಸೇವಕರಾಗಿ ಕೆಲಸ ಮಾಡಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಗೆ ಕೋವಿಡ್ 19 ಪ್ರವೇಶಿಸದಂತೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕ್ವಾಲಿಟಿ ಬಾರ್ ವಿಷಯವನ್ನಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ನಿಯಂತ್ರಣ ಕ್ರಮಗಳ ಸಭೆಯಲ್ಲಿ ಶಾಸಕ ಪ್ರೀತಂಗೌಡ ಅವರ ಮೇಲೆ ಏಕ ವಚನ ಪ್ರಯೋಗಿಸಿ ಹರಿ ಹಾಯ್ದಿರುವುದು ಖಂಡನೀಯವೆಂದರು.
ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ, ಮದ್ಯದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿ. ಕಾನೂನಿಗಿಂತಲೂ ಯಾರು ದೊಡ್ಡವರಲ್ಲ. ಅಪರಾಧ ಎಸಗಿದ್ದರೆ ಕ್ರಮ ಜರುಗುತ್ತದೆ. ಅದರೆ ಅಕ್ರಮ ಮದ್ಯ ಪ್ರಕರಣಗಳನ್ನು ಶಾಸಕ ಪ್ರೀತಂಗೌಡರಿಗೆ ತಳಕು ಹಾಕುವುದು ಸರಿಯಲ್ಲವೆಂದರು.
ಜಿಲ್ಲೆಯಲ್ಲಿ ಒಬ್ಬರೇ ಬಿಜೆಪಿ ಶಾಸಕರು ಇದ್ದಾರೆ ಎಂದು ಜೆಡಿಎಸ್-ಕಾಂಗ್ರೆಸ್ ಶಾಸಕರು, ಸಂಸದರು ಹರಿಹಾಯುವುದಾದರೆ ಶಾಸಕ ಪ್ರೀತಂ ಗೌಡರ ಬೆಂಬಲಕ್ಕೆ ಹಾಸನ ಜಿಲ್ಲೆಯ ಬಿಜೆಪಿಯ ಎಲ್ಲಾ ಕಾರ್ಯಕರ್ತರು ನಿಲ್ಲುತ್ತಾರೆ ಎಂದು ಎಚ್ಚರಿಸಿದರು.
ಲಾಕ್ ಡೌನ್ ವೇಳೆ ಯಾರೂ ಹಸಿನಿಂದ ನರಳಬಾರದು ಎಂಬ ಉದ್ದೇಶದಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣೆ ಮಾಡುತ್ತಿದ್ದು, ಪ್ರತಿನಿತ್ಯ ಜಿಲ್ಲಾದ್ಯಂತ 10 ಸಾವಿರ ಜನರಿಗೆ ಆಹಾರ, 2 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಹಂಚ ಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮು ಖ್ ವಿಜಯಕುಮಾರ್, ಮುಖಂಡರಾದ ಕೆ.ಪಿ.ವಿಜಯ್ ವಿಕ್ರಂ, ಲೋಹಿತ್ ಜಂಬರಡಿ, ಪ್ರವೀಣ್ ಇದ್ದರು.