Advertisement

Prajwal Revanna ವೀಡಿಯೋ ಹೇಳಿಕೆ ನೀಡಲು ಸಂತ್ರಸ್ತೆಯರ ಹಿಂದೇಟು?

12:42 AM May 02, 2024 | Team Udayavani |

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪ್ರಜ್ವಲ್‌ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತೆಯರು, ಮಾನಕ್ಕೆ ಅಂಜಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗು ತ್ತಿದೆ. ಇದರಿಂದ ಸಾಕ್ಷ್ಯ ಕಲೆ ಹಾಕುವುದೇ ಎಸ್‌ಐಟಿಗೆ ತಲೆ ನೋವಾ ಗಿದೆ. ಈವರೆಗೆ ದೂರು ದಾರ ಮಹಿಳೆ ಮತ್ತು ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಮಾತ್ರ ಹೇಳಿಕೆ ನೀಡಿದ್ದಾರೆ.

Advertisement

ಲೈಂಗಿಕ ದೌರ್ಜನ್ಯ ಪ್ರಕರಣ ಮುನ್ನೆಲೆಗೆ ಬಂದ ಬೆನ್ನಲ್ಲೇ, ವೀಡಿಯೋದಲ್ಲಿರುವ ಸಂತ್ರಸ್ತೆಯರು ಎಸ್‌ಐಟಿ ಮುಂದೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪೆನ್‌ಡ್ರೈವ್‌ ಅನ್ನು ಕೂಲಂಕಷ ವಾಗಿ ಪರಿಶೀಲಿಸುತ್ತಿರುವ ಎಸ್‌ಐಟಿ ತಂಡವು, ವೀಡಿಯೋದಲ್ಲಿ ಸಿಲುಕಿದ್ದಾರೆ ಎನ್ನಲಾದ ಕೆಲವು ಮಹಿಳೆಯರನ್ನು ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ.

ಅವರನ್ನು ಸಂಪರ್ಕಿಸಲು ಎಸ್‌ಐಟಿ ಪ್ರಯತ್ನಿಸಿದೆ. ಆದರೆ ಮಹಿಳೆಯರು ಮಾತ್ರ ಇದಕ್ಕೂ, ನಮಗೂ ಸಂಬಂಧವಿಲ್ಲ ಎಂದು ಹೇಳಿ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ತನಿಖಾ ದೃಷ್ಟಿಯಿಂದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಎಸ್‌ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸಾಕ್ಷ್ಯ ಕಲೆ ಹಾಕುವುದೇ ತಲೆನೋವು
ಪೆನ್‌ ಡ್ರೈವ್‌ ಸಂತ್ರಸ್ತೆಯರ ವಿವರ ಕಲೆ ಹಾಕಿರುವ ಎಸ್‌ಐಟಿ ತನಿಖಾ ತಂಡದ ಮಹಿಳಾ ಸಿಬಂದಿಯು ಅವರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ಪ್ರಯತ್ನಿಸಿದಾಗ, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ಕೇಳಬೇಡಿ. ನಾವು ದೂರು ಕೊಡಲಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಹೇಳುತ್ತಿದ್ದಾರೆ. ಅವರನ್ನು ಎಸ್‌ಐಟಿ ಸಿಬಂದಿ ಸಮಾಧಾನಪಡಿಸಿ ಹೇಳಿಕೆ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ ಸಫ‌ಲವಾಗಿಲ್ಲ ಎನ್ನಲಾಗಿದೆ.

ಪ್ರಕರಣದಿಂದ ಸಂತ್ರಸ್ತೆಯರು ಮಾತ್ರವಲ್ಲದೆ, ಕೆಲವರ ಕುಟುಂಬಗಳು ಕೂಡ ಮುಜುಗರ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ಬಲವಾದ ಸಾಕ್ಷ್ಯ ಸಂಗ್ರಹಿಸುವುದೇ ಎಸ್‌ಐಟಿಗೆ ಸವಾಲಾಗಿದೆ. ಸದ್ಯ ದೂರು ನೀಡಿರುವ ಸಂತ್ರಸ್ತೆಯ ಮಾಹಿತಿ ಆಧರಿಸಿಯೇ ತನಿಖೆ ನಡೆಯುತ್ತಿದೆ.

Advertisement

ರಹಸ್ಯ ತನಿಖೆ
ಮತ್ತೊಂದೆಡೆ ಸಂತ್ರಸ್ತೆಯರ ಮೊಬೈಲ್‌ ನಂಬರ್‌ ಪಡೆದು ಅವರಿಗೆ ನೋಟಿಸ್‌ ಕಳುಹಿಸಿ ಗೌಪ್ಯವಾಗಿ ವಿಚಾರಣೆ ನಡೆಸಲು ಎಸ್‌ಐಟಿ ಚಿಂತನೆ ನಡೆಸಿದೆ. ಸಂತ್ರಸ್ತೆಯರ ಕುಟುಂಬದವರಿಗೂ ತಿಳಿಯದಂತೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಸಂತ್ರಸ್ತೆಯರ ವಿಚಾರ ಗೊತ್ತಾದರೆ ಕುಟುಂಬದಲ್ಲಿ ಬಿರುಕು, ಜಗಳ ಉಂಟಾಗುವ ಸಾಧ್ಯತೆಗಳಿರುವುದನ್ನು ಮನಗಂಡು ಎಸ್‌ಐಟಿ ಈ ಜಾಣ ನಡೆಯ ಮೂಲಕ ತನಿಖೆ ಮುಂದುವರಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ವೀಡಿಯೋದ ಮೂಲ ಪತ್ತೆಯೇ ದೊಡ್ಡ ಸವಾಲು
ಎಸ್‌ಐಟಿ ತನಿಖಾಧಿಕಾರಿಗಳ ಒಂದು ತಂಡವು ಪೆನ್‌ಡ್ರೈವ್‌ನಲ್ಲಿರುವ ವೀಡಿಯೋದ ಮೂಲ ಪತ್ತೆಹಚ್ಚಲು ಮುಂದಾಗಿದೆ. ಮೂಲ ಪತ್ತೆಯಾಗದಿದ್ದರೆ ಎಸ್‌ಐಟಿ ತನಿಖೆ ವಿಳಂಬವಾಗಲಿದೆ. ಪತ್ತೆಯಾಗಿರುವ ಪೆನ್‌ಡ್ರೈವ್‌ಗಳಿಗೆ ವೀಡಿಯೋ ಕಾಪಿ ಆಗಿರುವುದು ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವೀಡಿಯೋ ನಕಲಿಯೋ, ಅಸಲಿಯೋ ಎಂಬುದು ಎಫ್ಎಸ್‌ಎಲ್‌ ವರದಿಯಲ್ಲಿ ದೃಢಪಡಲಿದೆ. ವೀಡಿಯೋ ಅಸಲಿಯಾದರೆ ಅದರ ರೆಕಾರ್ಡಿಂಗ್‌ ಮೂಲ ಹುಡುಕಬೇಕಾಗುತ್ತದೆ.

ಮತ್ತೂಂದೆಡೆ ಮಂಗಳವಾರ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಪ್ರಜ್ವಲ್‌ ರೇವಣ್ಣನವರ ಮಾಜಿ ಕಾರು ಚಾಲಕ ಕಾರ್ತಿಕ್‌ನ ಮೊಬೈಲ್‌ ಅನ್ನು ಜಪ್ತಿ ಮಾಡಿ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಎಚ್‌ಡಿಕೆಗೆ ಗೊತ್ತಿತ್ತು
ಪೆನ್‌ಡ್ರೈವ್‌ ವಿಚಾರ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದದ್ದು ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ. ಅವರೀಗ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಮೇಲೆ ಆರೋಪ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
-ಡಿ.ಕೆ.ಸುರೇಶ್‌, ಕಾಂಗ್ರೆಸ್‌ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next