ರಾಯಚೂರು: ಜೆಡಿಎಸ್‌ನಲ್ಲಿ ಯಾವುದೇ ಸೂಟ್‌ಕೇಸ್ ಸಂಸ್ಕೃತಿ ಇಲ್ಲ. ಪ್ರಜ್ವಲ್ ರೇವಣ್ಣ ಹುಮ್ಮಸ್ಸಿನಲ್ಲಿ ಹೇಳಿಕೆ ನೀಡಿದ್ದು, ಅದಕ್ಕೆ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಹುಣಸೂರು ಕ್ಷೇತ್ರದ ಆಕಾಂಕ್ಷಿ ಎಂದು
ಹೇಳಿಕೊಂಡಿದ್ದಾರೆ. ದೇವೇಗೌಡರ ಆಶೀರ್ವಾದ ಬೇಕಿದೆ. ಎಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗಬೇಕು ಎಂಬ ವಿಚಾರ ವ್ಯಕ್ತಪಡಿಸಿದ್ದಾರೆ. ಆದರೆ, ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಯಾಕೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅಲ್ಲದೇ ಅವರು ಯಾವುದೇ ಕಾರಣಕ್ಕೂ ಪಕ್ಷ ಒಡೆಯಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೇ ಸ್ಪಷ್ಟನೆ ನೀಡುವರು. ಅದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.
ಜೆಡಿಎಸ್ ಕುಟುಂಬ ರಾಜಕಾರಣ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮಾತ್ರ ಸ್ಪ ರ್ಧಿಸುವರು. ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ 2018ರ ಚುನಾವಣೆ ಎದುರಿಸಲಿದ್ದೇವೆ. ಈ ಬಾರಿ ಕರ್ನಾಟಕಕ್ಕೆ ಕುಮಾರಣ್ಣ ಎಂಬ ಘೋಷವಾಕ್ಯದಡಿ ಯುವ ಕಾರ್ಯಕರ್ತರನ್ನು ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷಗಳ ನೆರವಿಲ್ಲದೇ ಸ್ವಂತ ಬಲದಿಂದಲೇ ಅಧಿಕಾರಕ್ಕೆ ಬರಲಿದೆ. ಅಕ್ಟೋಬರ್‌ನಲ್ಲಿ ಹಾವೇರಿಯಲ್ಲಿ ಪಕ್ಷದ ಬೃಹತ್ ಸಮಾವೇಶ, ಸೆಪ್ಟೆಂಬರ್‌ನಲ್ಲಿ ರೈತ ಸಮಾವೇಶ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ತಿಂಗಳು ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು. ಶಾಸಕ ಡಾ| ಶಿವರಾಜ ಪಾಟೀಲ, ಕಾರ್ಯಾಧ್ಯಕ್ಷ ಎನ್. ಶಿವಶಂಕರ,
ನಗರಸಭೆ ಸದಸ್ಯ ಪಿ. ಯಲ್ಲಪ್ಪ, ಯೂಸೂಫ್ ಖಾನ್ ಇದ್ದರು.
ಅಣ್ಣ ಕುಮಾರ ಬಂಗಾರಪ್ಪ ನನ್ನ ವಿರುದ್ಧವಾಗಿದ್ದಾರೆ. ಆದರೆ, ಕುಟುಂಬವೇ ಬೇರೆ ರಾಜಕೀಯವೇ ಬೇರೆ. ಜೆಡಿಎಸ್‌ನಲ್ಲೂ ಮುಂದೆ
ಎಲ್ಲ ಸರಿ ಹೋಗುತ್ತದೆ ಎಂಬ ವಿಶ್ವಾಸವಿದೆ. ಜೆಡಿಎಸ್‌ನ ತತ್ವ ಸಿದ್ಧಾಂತಗಳ ಮೆಚ್ಚಿ ಈ ಪಕ್ಷ ಸೇರಿದ್ದೇನೆ. ಬೇರೆ ಪಕ್ಷಗಳಿಗೆ ಸೇರಿದ್ದರೆ ಹೈಕಮಾಂಡ್ ಮನೆ ಕಾಯಬೇಕಿತ್ತು.
ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ಅಧ್ಯಕ್ಷ