ಇಂಡಿ: ತಾಲೂಕಿನ ರೈತರು ಸ್ವಾಭಿಮಾನದಿಂದ ಬದುಕಲು ನೀರು ಕೇಳುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದೇ ಪ್ರತಿಭಟನೆಗೆ ಅವಮಾನಿಸುತ್ತಿದ್ದಾರೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ 250 ಕೋಟಿ ರೂ. ಅನುದಾನ ನೀಡಿದ್ದರು. ಕಾರಣಾಂತರದಿಂದ ನಮ್ಮ ಸರ್ಕಾರ ಉರುಳಿತು. ಆದರೆ ಮುಂದಿನ ಸರ್ಕಾರಗಳು ಆ ಅನುದಾನ ಯೋಜನೆಗೆ ನೀಡದೇ ತಡೆಹಿಡಿದಿವೆ ಎಂದು ಆಪಾದಿಸಿದರು.
ಹೋರಾಟಗಾರರ ಮೇಲೆ ಕೇಸ್ ದಾಖಲಿಸಿ, ಹೋರಾಟ ಹಕ್ಕಿತ್ತುವ ಹುನ್ನಾರವೂ ಈ ಭಾಗದಲ್ಲಿ ನಡೆದಿದೆ. ನಾವು ಯಾವುದೇ ಕೇಸ್‌ಗೆ ಹೆದರಲ್ಲ. ಈಗ ಏನೂ ತಪ್ಪು ಮಾಡದವರ ಮೇಲೆ ಕೇಸ್ ದಾಖಲಿಸಿದ್ದು, ಕೇಸ್ ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಮ್ಮ ಸರ್ಕಾರ ರೈತಪರವಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ರೈತರ ಸಾಲ ಮನ್ನಾ ಮಾಡಿದ್ದನ್ನು ರೈತರು ಮರೆತಿಲ್ಲ. ಬಿಜೆಪಿ ಸರ್ಕಾರ ರೈತರಿಗೆ ಏನು ಕೊಡುಗೆ ನೀಡಿದೆ? ಎಂಬುದನ್ನು ಜನರ ಮುಂದಿಡಲಿ. ವರ್ಷಕ್ಕೆ ಎರಡು ಸಾವಿರ ರೂ.ನೀಡಿ ರೈತಪರ ಸರ್ಕಾರ ಎನ್ನುತ್ತಿರುವ ಬಿಜೆಪಿ ರಸಗೊಬ್ಬರ ದರ ಹೆಚ್ಚಿಸಿ ಆ ಎರಡು ಸಾವಿರ ಮರಳಿ ಪಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಮಹದಾಯಿ, ಮೇಕೆದಾಟು ಮತ್ತು ಕೃಷ್ಣಾ ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ನಾನು ಸದನದಲ್ಲಿ ಧ್ವನಿ ಎತ್ತುವೆ. ರಾಜ್ಯದ ಸಂಸದರೆಲ್ಲರೂ ಒಗ್ಗಟ್ಟಾಗಿ ಈ ಯೋಜನೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಆದರೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಎಲ್ಲ ಸಂಸದರು ಈ ಭಾಗದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಎಲ್ಲ ಸಂಸದರ ನಿಯೋಗ ಕೇಂದ್ರಕ್ಕೆ ತೆಗೆದುಕೊಂಡು ಹೋದರೆ ಅದಕ್ಕೆ ತಾವೂ ಬೆಂಬಲಿಸುವುದಾಗಿ ಹೇಳಿದ ಅವರು, ಮುಂದಿನ ವಾರದಲ್ಲಿ ಕುಮಾರಸ್ವಾಮಿಯವರ ಜೊತೆಗೆ ಇಂಡಿಗೆ ಬಂದು ಹೋರಾಟದ ಕುರಿತು ಎಲ್ಲ ರೈತರ ಜೊತೆಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಬಿ.ಡಿ. ಪಾಟೀಲ, ಮಲ್ಲಿಕಾರ್ಜನ ಯಂಡಿಗೇರಿ, ಮರೆಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಎಂ. ಬೇವನೂರ, ಸಿದ್ದು ಡಂಗಾ, ಬಸವರಾಜ ಹಂಜಗಿ, ಮಹ್ಮದ್ ಬಾಗವಾನ ಇತರರು ಇದ್ದರು.