Advertisement

ನ್ಯಾಯಾಲಯಕ್ಕೆ ಪ್ರಜ್ವಲ್‌ ರೇವಣ್ಣ ಅಗೌರವ: ಆರೋಪ

09:24 PM Sep 11, 2019 | Lakshmi GovindaRaju |

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ನೂರಾರು ಕೋಟಿ ರೂ.ಆಸ್ತಿಯ ಒಡೆಯರಾಗಿದ್ದು, ಲೋಕಸಭಾ ಚುನಾವಣೆಗೆ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತಾವು ರಾಜ್ಯ ಉತ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ನ್ಯಾಯಾಲಯವು ಎರಡು ಬಾರಿ ನೋಟಿಸ್‌ ನೀಡಿದರೂ ಸ್ವೀಕರಿಸದೇ ಯಾಲಯಕ್ಕೆ ಅಗೌರವ ತೋರಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಹಾಸನ ಜಿಲ್ಲಾ ನ್ಯಾಯಾಧೀಶರ ಮೂಲಕವೂ ನೀಡಿದ ನೋಟಿಸ್‌ನ್ನು ಪ್ರಜ್ವಲ್‌ ರೇವಣ್ಣ ಅವರು ಸ್ವೀಕರಿಸದೇ ನ್ಯಾಯಾಂಗಕ್ಕೆ ಅಗೌರವ ತೋರಿದ್ದಾರೆ. ಈಗ ಅಂತಿಮವಾತಿ ನ್ಯಾಯಾಲಯವು ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ನೋಟಿಸ್‌ ಜಾರಿ ಮಾಡಿ ಸೆ.30ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ಹೇಳಿದರು.

ನೂರಾರು ಕೋಟಿ ರೂ. ಒಡೆಯ: ನ್ಯಾಯಲಯವು ಜಾರಿಗೊಳಿಸಿದ ನೋಟೀಸನ್ನೂ ಸ್ವೀಕರಿಸದಷ್ಟು ಉಢಾಫೆ ಧೋರಣೆಯ ಪ್ರಜ್ವಲ್‌ ರೇವಣ್ಣ 28 ನೇ ವಯಸ್ಸಿಗೇ ನೂರಾರು ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯನಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧವೂ ಮುಂದಿನ ದಿನಗಳಲ್ಲಿ ಸಿಬಿಐ , ಐಟಿ, ಹಾಗೂ ಇಡಿ ತನಿಖೆಗಳು ನಡೆಯಬೇಕು ಎಂದು ಒತ್ತಾಯಿಸಿದರು.

ಪಡುವಲಹಿಪ್ಪೆ ಮತದಾನ ಕೇಂದ್ರದಲ್ಲಿ ಮತದಾನಕ್ಕೆ ಮುನ್ನ 18ನಿಮಿಷ ಹಾಗೂ ಮತದಾನದ ನಂತರ 8 ನಿಮಿಷಗಳ ಕಾಲ ಎಚ್‌ಡಿ.ರೇವಣ್ಣ ಅವರು ಮತಗಟ್ಟೆಯಲ್ಲಿದ್ದು ನಕಲಿ ಮತದಾನ ಮಾಡಿಸಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಪಡುವಲಹಿಪ್ಪೆ ಮತಗಟ್ಟೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಈ ಕ್ರಮ ಆಧರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ರಾಜ್ಯ ಚುನಾವಣಾ ಆಯೋಗವು ಮುಂದಿನ ಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸೂಚನೆ ನೀಡಿದೆ.

ಈ ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಚುನಾವಣಾ ಆಯೋಗದ ಸೂಚನಾ ಪತ್ರವನ್ನು ಮುಚ್ಚಿಟ್ಟಿದ್ದರೆಂದು ದೂರಿದರು. ಜಿಲ್ಲೆಯಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ಶಾಸಕ ಪ್ರೀತಂ ಜೆ.ಗೌಡ ಅವರು ರಕ್ಷಣೆ ಮಾಡಬಾರದು. ಇದರಿಂದ ಶಾಸಕರಿಗೇ ಕೆಟ್ಟ ಹೆಸರು ಬರುತ್ತದೆ. ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರ ಭ್ರಷ್ಟಾಚಾರದ ವಿರುದ್ಧವೂ ನಾನು ಹೋರಾಟ ಮಾಡಿದ್ದೆ ಎಂದು ಹೇಳಿದರು.

Advertisement

ರೇವಣ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರು ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸೂಚನೆ ನೀಡಿದೆ. ಅಕ್ರಮ ಮತದಾನಕ್ಕೆ ರೇವಣ್ಣ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ತಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಈ ಸಂಬಂಧ ಚುನಾವಣಾ ಆಯೋಗವು ಕ್ರಮ ಕೈಗೊಂಡಿದೆ ಎಂದು ವಕೀಲ ದೇವರಾಜೇಗೌಡ ಹೇಳಿದರು.

ಜಿಲ್ಲೆಯಲ್ಲಿ ಬೇರೂರಿ ಕುಳಿತಿದ್ದ ಅಧಿಕಾರಿಗಳು ಮಾಜಿ ಸಚಿವ ರೇವಣ್ಣ ಅವರ ಆಜ್ಞಾಪಾಲಕರಂತೆ ಕೆಲಸ ಮಾಡಿಕೊಂಡು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರ ರಕ್ಷಣೆಗೆ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರೂ ಸಹಕಾರ ನೀಡುತ್ತಿದ್ದಾರೆ. ಹಲವು ಭ್ರಷ್ಟ ಅಧಿಕಾರಿಗಳನ್ನು ಪ್ರೀತಂಗೌಡ ಅವರು ಉಳಿಸಿಕೊಳ್ಳುತ್ತಿದ್ದಾರೆ.
-ದೇವರಾಜೇಗೌಡ, ವಕೀಲ

Advertisement

Udayavani is now on Telegram. Click here to join our channel and stay updated with the latest news.

Next