Advertisement

Prajwal Revanna Case: ರಾಹುಲ್‌‌ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

03:22 PM Oct 21, 2024 | Team Udayavani |

ಬೆಂಗಳೂರು: ಉಚ್ಚಾಟಿತ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಎಂದು ಸಾರ್ವಜನಿಕವಾಗಿ ಸುಳ್ಳು ಹರಡಿದ ಕಾರಣ ಅವರ ವಿರುದ್ದ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯವು (Karnataka High Court) ವಜಾ ಮಾಡಿದೆ. ಅಲ್ಲದೆ ಅರ್ಜಿದಾರರಿಗೆ 25 ಸಾವಿರ ರೂ ದಂಡ ವಿಧಿಸಿದೆ.

Advertisement

ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್‌ನ ಉಚ್ಚಾಟಿತ ಸಂಸದ ಪ್ರಜ್ವಲ್‌ ರೇವಣ್ಣ ಅವರು 400 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಅವರ ವಿಡಿಯೋಗಳನ್ನು ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಹರಡಿದ ಆರೋಪದ ಮೇಲೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಆಲ್‌ ಇಂಡಿಯಾ ದಲಿತ ಆಕ್ಷನ್‌ ಕಮಿಟಿಯು ರಾಷ್ಟ್ರೀಯ ಅಧ್ಯಕ್ಷ ಚಿ ನಾ ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್‌ ಅವರಿಂದ ಜಿ ಆರ್‌ ಲಾ ಫರ್ಮ್‌ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾ.ಎನ್‌.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ. ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತ್ತು.

“ಅರ್ಜಿಯನ್ನು ವಜಾ ಮಾಡಲಾಗಿದೆ. ಅರ್ಜಿದಾರರು ₹25 ಸಾವಿರ ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿಸಬೇಕು” ಎಂದು ಪೀಠ ಆದೇಶಿಸಿದೆ.

“ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ರಾಹುಲ್‌ ಗಾಂಧಿ ಅವರು ಮತಕ್ಕಾಗಿ ಪ್ರಜ್ವಲ್‌ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ವಿಡಿಯೊ ಮಾಡಿಕೊಂಡಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತೀಯ ಮಹಿಳೆಯರ ಘನತೆಗೆ, ವಿಶೇಷವಾಗಿ ಹಾಸನದ ಮಹಿಳೆಯರ ಘನತೆಗೆ ಹಾನಿ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು” ಎಂದು ಅರ್ಜಿದಾರರ ಪರ ವಕೀಲ ಎಸ್‌ ಎಸ್‌ ರವಿಶಂಕರ್‌ ವಾದಿಸಿದ್ದರು.

Advertisement

“ರಾಹುಲ್‌ ಗಾಂಧಿ ಅವರು ಇಂತಹ ಉಡಾಫೆ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಮೋದಿ ಉಪನಾಮ ಹೊಂದಿದವರು ಕಳ್ಳರು ಎಂದಿದ್ದರು. ಇದರಿಂದ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ರಾಹುಲ್‌ ಅವರ ಪೌರತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ” ಎಂದು ಅವರು ಪೀಠದ ಗಮನಸೆಳೆದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ದಂಡ ವಿಧಿಸಿ ಅರ್ಜಿ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next