Advertisement

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

12:37 AM May 08, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದ ವರ್ತನೆ ಮೇಲೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯ ಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧವೂ ಹರಿಹಾಯ್ದಿರುವ ಎಚ್‌ಡಿಕೆ ಯವರು ಪೆನ್‌ಡ್ರೈವ್‌ ಬಿಡುಗಡೆ, ಮಹಿಳೆಯರ ಮಾನ ಹರಣದ ಆರೋಪ ಎದುರಿಸುತ್ತಿರುವ ಡಿಸಿಎಂ ಶಿವಕುಮಾರ್‌ ಅವರನ್ನು ಸಚಿವ ಸಂಪುಟದಿಂದ ಅಮಾನತು ಪಡಿಸುವಂತೆ ಒತ್ತಾಯಿಸಿದ್ದಾರೆ. ರಾಹುಲ್‌ ಗಾಂಧಿ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ರಾಜ್ಯ ಸರಕಾರ ಮತ್ತು ಎಸ್‌ಐಟಿ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಮಂಗಳವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸಿಗರಿಗೆ ಪ್ರಚಾರ ಬೇಕು, ಅಧಿಕಾರ ಬೇಕು. ಕೇಂದ್ರ ದಲ್ಲಿ ಪ್ರಧಾನಿ ಮೋದಿ ಅವರನ್ನು ಕೆಳಗಿಳಿಸ ಬೇಕು. ಅದಕ್ಕಾಗಿ ಅಪಪ್ರಚಾರ ಮಾಡ ಬೇಕು ಎಂದೇ ಈ ಪ್ರಕರಣವನ್ನು ಬೃಹದೀ ಕರಿಸ ಲಾಗಿದೆ. ಈ ಸರಕಾರ ಯಾವ ಮಹಿಳೆಯರಿಗೂ ರಕ್ಷಣೆ ಕೊಡುವುದಿಲ್ಲ. ಇವರಿಗೆ ನೈತಿಕತೆ ಇದ್ದರೆ ಡಿಕೆಶಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ ಎಂದು ಸವಾಲು ಹಾಕಿದರು.

25 ಸಾವಿರ ಪೆನ್‌ಡ್ರೈವ್‌ ಬಿಡುಗಡೆ
ಈ ಪ್ರಕರಣದಲ್ಲಿ ನನ್ನ ಸಂಬಂಧಿಕರೇ ಇರಲಿ, ರಕ್ಷಿಸುವ ಪ್ರಶ್ನೆ ಇಲ್ಲ. ಇದರಲ್ಲಿ ಪ್ರಜ್ವಲ್‌ ರೇವಣ್ಣ ಪಾತ್ರ ಇದೆಯೇ ಇಲ್ಲವೇ ಎಂಬುದನ್ನು ತನಿಖಾಧಿಕಾರಿಗಳು ಹೇಳಬೇಕು. ಆತನ ತಪ್ಪಿದ್ದರೆ ಆತನನ್ನು ಕರೆತರುವುದು ರಾಜ್ಯ ಸರಕಾರದ ಜವಾಬ್ದಾರಿ. ಆದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದ ಪೆನ್‌ಡ್ರೈವನ್ನು ಹೊರತಂದವರು ಯಾರು? ಇದರಲ್ಲಿ ಡಿಕೆಶಿ ಎಂಥ ನಿಪುಣರು ಎಂಬುದು ಅವರ ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಅದನ್ನು ಪೊಲೀಸ್‌ ದಾಖಲೆಗಳೇ ಹೇಳುತ್ತವೆ ಎಂದು ಎಚ್‌ಡಿಕೆ ಕಿಡಿಕಾರಿದರು.

Advertisement

ಚುನಾವಣೆಗೆ ನಾಲ್ಕೈದು ದಿನ ಇದೆ ಎನ್ನುವಾಗ ಪೆನ್‌ಡ್ರೈವ್‌ ಬಿಡುಗಡೆ ಆಗಿದೆ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಒಟ್ಟು 25 ಸಾವಿರ ಪೆನ್‌ಡ್ರೈವ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳನ್ನು ಹೆದರಿಸಿ ಬಿಡುಗಡೆ ಮಾಡಿದ್ದಾರೆ. ಇದು ರಾಜ್ಯದಲ್ಲಿ ನಡೆದಿರುವ ಅತ್ಯಂತ ಕೆಟ್ಟ ಬೆಳವಣಿಗೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕಿದ್ದವರ ಬದುಕಿಗೆ ಧಕ್ಕೆ ಉಂಟಾಗಿದೆ ಎಂಬುದು ನೋವಿನ ಸಂಗತಿ ಎಂದರು.

ಎಚ್‌ಡಿಕೆ ವಾದವೇನು?
-ಎ. 21ರಂದೇ ಕಾಂಗ್ರೆಸ್‌ ನಾಯಕ ನವೀನ್‌ ಗೌಡ, ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಬಿಡುಗಡೆಯಾಗಲಿದೆ ಎಂದಿದ್ದರು. ಹಾಗೆಯೇ ಆಗಿದೆ. ಅದರ ವಿರುದ್ಧ ಪೂರ್ಣಚಂದ್ರ ನೀಡಿದ ದೂರಿನ ತನಿಖೆ ಏಕೆ ಆಗುತ್ತಿಲ್ಲ?
-ಎ. 21ರಂದು ವೀಡಿಯೋ ಬಿಡುಗಡೆ ಆಗಿದೆ. ಅದರಲ್ಲಿದ್ದ ಮಹಿಳೆಯೊಬ್ಬರು ಈಗ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ಕೊಟ್ಟಿದ್ದಾರೆ. ಅದೇ ಹೆಣ್ಣುಮಗಳು ಎ. 22ರಂದು ಚುನಾವಣ ಪ್ರಚಾರ ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಜತೆಗೇ ಇದ್ದದ್ದು ಹೇಗೆ?
-ಸಿಎಂ, ಡಿಜಿ-ಐಜಿಗೆ ಎ.25ರಂದು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬರೆದ ಪತ್ರದಲ್ಲಿ ನಿರ್ದಿಷ್ಟ ಪ್ರಭಾವಿ ರಾಜಕಾರಣಿಯ ಹೆಸರು ಉಲ್ಲೇಖಿಸಿರಲಿಲ್ಲ. ಆದರೆ ಎ. 27ರಂದು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು ಪ್ರಜ್ವಲ್‌ ಹೆಸರನ್ನು ಹೇಗೆ ಪ್ರಸ್ತಾವಿಸಿದರು?
-ಕಾರ್ತಿಕ್‌ ಎಲ್ಲಿದ್ದಾನೆ? ಪ್ರಜ್ವಲ್‌, ರೇವಣ್ಣಗಾಗಿ ರೆಡ್‌, ಬ್ಲೂ ಕಾರ್ನರ್‌, ಲುಕ್‌ಔಟ್‌ ನೋಟಿಸ್‌ ಹೊರಡಿಸುವ ಪೊಲೀಸರು ಕಾರ್ತಿಕ್‌ನನ್ನು ಕರೆತರಲು ಯಾವ ನೋಟಿಸ್‌ ಹೊರಡಿಸಿದ್ದೀರಿ?

ಸರಕಾರ-ಎಸ್‌ಐಟಿಗೆ ಎಚ್‌ಡಿಕೆ ಪ್ರಶ್ನೆಗಳು
– ಎ. 21ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಜ್ವಲ್‌ ರೇವಣ್ಣ ವೀಡಿಯೋ ಬಿಡುಗಡೆ ಎಂದು ನವೀನ್‌ ಗೌಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ. ಅದರಂತೆ ಎ. 21ರಂದು ಪೆನ್‌ಡ್ರೈವ್‌ ಹಂಚಿಕೆಯಾಗಿದೆ. ಇದನ್ನರಿತ ಹಾಸನ ಜೆಡಿಎಸ್‌ ಅಭ್ಯರ್ಥಿಯ ಚುನಾವಣ ಏಜೆಂಟ್‌ ಪೂರ್ಣಚಂದ್ರ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಅದರಲ್ಲಿ ನವೀನ್‌ ಗೌಡ, ಕಾರ್ತಿಕ್‌ ಗೌಡ, ಚೇತನ್‌, ಪುಟ್ಟ ಅಲಿಯಾಸ್‌ ಪುಟ್ಟರಾಜು ಎನ್ನುವವರ ಹೆಸರು ಉಲ್ಲೇಖಿಸಿದ್ದರು. ಇದುವರೆಗೆ ಇವರ ವಿರುದ್ಧ ಕ್ರಮ ಏಕೆ ಆಗಿಲ್ಲ?
– ಎ. 21ರಂದು ವೀಡಿಯೋ ಬಿಡುಗಡೆ ಆಗಿದೆ. ಅದರಲ್ಲಿದ್ದ ಮಹಿಳೆಯೊಬ್ಬರು ಈಗ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ಕೊಟ್ಟಿದ್ದಾರೆ. ಅದೇ ಹೆಣ್ಣುಮಗಳು ಎ. 22ರಂದು ಚುನಾವಣ ಪ್ರಚಾರ ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಜತೆಗೇ ಇದ್ದದ್ದು ಹೇಗೆ? ಆಕೆಯನ್ನು ಗನ್‌ಪಾಯಿಂಟ್‌ನಲ್ಲಿ ಹೆದರಿಸಿ ಅತ್ಯಾಚಾರ ಮಾಡಿದ್ದರೆ ಪ್ರಜ್ವಲ್‌ ಪರ ಚುನಾವಣ ಪ್ರಚಾರ ಸಭೆಗೆ ಬರುತ್ತಿದ್ದರೇ?
– ಪೆನ್‌ಡ್ರೈವ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳ ಹೆಸರಿದೆ. ತನಿಖೆ ನಡೆಸಿ ಎಂದು ಸಿಎಂ ಮತ್ತು ಡಿಜಿ-ಐಜಿಗೆ ಎ. 25ರಂದು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದರು. ಅದರಲ್ಲಿ ಪ್ರಭಾವಿ ರಾಜಕಾರಣಿ ಯಾರು ಎಂದು ಉಲ್ಲೇಖೀಸಿರಲಿಲ್ಲ. ಆದರೆ ಎ. 27ರಂದು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ವಕೀಲರೂ ಆಗಿ ಪ್ರಜ್ವಲ್‌ ಹೆಸರನ್ನುಹೇಗೆ ಪ್ರಸ್ತಾವಿಸಿದರು? ದೂರು ಬರುವ ಮೊದಲೇ ಎ. 28ರಂದೇ ಎಸ್‌ಐಟಿ ರಚಿಸಿದ್ದು ಹೇಗೆ?
– ಶುಭಾ ಎನ್ನುವವರ ಹೆಸರಿನಲ್ಲಿ ಎ. 29ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಿದ್ಧವಾದ ದೂರು ಹೊಳೆನರಸೀಪುರ ಠಾಣೆಗೆ ಹೋಗಿ ಅಲ್ಲಿಂದ ಎಸ್‌ಐಟಿಗೆ ವರ್ಗಾವಣೆ ಆಗಿದೆ. ಪೆನ್‌ಡ್ರೈವ್‌ ಬಿಡುಗಡೆಯಾಗಬಾರದೆಂದು ತಡೆ ತಂದ ಪ್ರಕರಣವಾಗಲೀ, ಆ ಪ್ರಕರಣದಲ್ಲಿ ನಿರೀಕ್ಷಣ ಜಾಮೀನು ಕೋರಿದ್ದ ನವೀನ್‌ ಗೌಡ ಮತ್ತಿತರರ ಪ್ರಕರಣವಾಗಲೀ ಎಸ್‌ಐಟಿಗೆ ಏಕೆ ವರ್ಗಾವಣೆ ಆಗಿಲ್ಲ? ಇದರ ತನಿಖೆ ಏಕೆ ನಡೆಯುತ್ತಿಲ್ಲ?
-ರೇವಣ್ಣ ಅವರ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸರಕಾರಿ ವಕೀಲರು ಅಪಹರಣಕ್ಕೆ ಒಳಗಾದಾಕೆ ಬದುಕಿದ್ದಾಳ್ಳೋ ಸತ್ತಿದ್ದಾಳ್ಳೋಮಾಹಿತಿ ಇಲ್ಲ ಎಂದಿದ್ದರು. ಈಗ ಆಕೆ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಸಿಕ್ಕಿದ್ದು ಹೇಗೆ? ಬಸವನಗುಡಿಯ ರೇವಣ್ಣ ಮನೆಯಲ್ಲಿ ಆಕೆಯ ಸಮ್ಮುಖದಲ್ಲಿ ಮಹಜರು ಮಾಡಿದ ಪೊಲೀಸರು ಕಾಳೇನಹಳ್ಳಿಯ ತೋಟದ ಮನೆಯಲ್ಲೇಕೆ ಮಹಜರು ಮಾಡಿಲ್ಲ? ಎರಡು ದಿನ ಆದರೂ ಆಕೆಯನ್ನೇಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ?
– ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಎಲ್ಲಿದ್ದಾನೆ?ಪ್ರಜ್ವಲ್‌ ಮತ್ತು ರೇವಣ್ಣಗಾಗಿ ರೆಡ್‌, ಬ್ಲೂ ಕಾರ್ನರ್‌, ಲುಕ್‌ಔಟ್‌ ನೋಟಿಸ್‌ ಕೊಡುವ ಪೊಲೀಸರು ಕಾರ್ತಿಕ್‌ನನ್ನು ಕರೆತರುವ ಯಾವ ಬಣ್ಣದ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದೀರಿ? ಇದುವರೆಗೆ ಆತನನನ್ನು ಏಕೆ ಬಂಧಿಸಿ ವಿಚಾರಣೆ ಮಾಡಿಲ್ಲ?
– ವಕೀಲ ದೇವರಾಜೇಗೌಡರನ್ನು ಎರಡು ಬಾರಿ ಅನಧಿಕೃತವಾಗಿ ವಿಚಾರಣೆ ಮಾಡುವಂಥದ್ದೇನಿತ್ತು? ಅಧಿಕೃತವಾಗಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಏಕೆ ಕರೆಯುತ್ತಿಲ್ಲ?
– 400 ಮಹಿಳೆಯರ ಮೇಲೆ ಅತ್ಯಾಚಾರ, 16 ವರ್ಷದ ಮಕ್ಕಳನ್ನೂ ಬಿಟ್ಟಿಲ್ಲ ಎಂದೆಲ್ಲ ರಾಹುಲ್‌ ಗಾಂಧಿ ಯಾವ ಆಧಾರದ ಮೇಲೆ ಹೇಳಿಕೆ ಕೊಟ್ಟರು? ಎಸ್‌ಐಟಿ ಮುಖ್ಯಸ್ಥರು ರಾಹುಲ್‌ಗೇಕೆ ನೋಟಿಸ್‌ ನೀಡಿ ಕರೆದಿಲ್ಲ?
– ಶಿಶುಪಾಲನ ಕತೆ ಹೇಳಿದ ಹಾಸನ ಜಿಲ್ಲಾಧಿಕಾರಿ, ಆಕೆಯ ಪತಿ ಕೋಲಾರದಲ್ಲಿ ಏನೇನು ಮಾಡಿದ್ದಾರೆಂಬುದು ಗೊತ್ತಿದೆ, ದಾಖಲೆಗಳಿವೆ. ಅವರು, ಎಸ್‌ಪಿ ಸೇರಿ ಸಹಾಯವಾಣಿ ಮಾಡಿದ್ದಾರಲ್ಲ? ಅದಕ್ಕೆ 2,900 ಸಂತ್ರಸ್ತೆಯರಲ್ಲಿ ಎಷ್ಟು ಜನ ಬಂದು ದೂರು ಕೊಟ್ಟಿದ್ದಾರೆ? ಸಂತ್ರಸ್ತೆಯರಿಗೆ ಹುಡುಕಾಟ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಯಾರ್ಯಾರನ್ನು ಬೆದರಿಸಿ ಕರೆತಂದು ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ?
– ರೇವಣ್ಣ, ಪ್ರಜ್ವಲ್‌ನನ್ನು ಗುರಿಯಾಗಿಸಿ ಮಾತ್ರ ತನಿಖೆ ನಡೆಯುತ್ತಿದೆಯೇ? ಉಳಿದ ಆಯಾಮಗಳ ತನಿಖೆ ಏನಾಗಿದೆ? ಎಸ್‌ಐಟಿಯ ಹೇಳಿಕೆಗೆ ರೇವಣ್ಣ ಸಹಿ ಮಾಡಬೇಕಿತ್ತೇ? ಕುಮಾರಸ್ವಾಮಿ ಸೇರಿ ಜೆಡಿಎಸ್‌ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಸಿಎಂ ಯಾವ ಧೈರ್ಯದಲ್ಲಿ ಹೇಳಿದರು?
– ಇದು ಸ್ಪೆಷಲ್‌ ಇನ್ವೆಸ್ಟಿಗೇಶನ್‌ ಟೀಮೋ? ಸಿದ್ದರಾಮಯ್ಯ ಇನ್ವೆಸ್ಟಿಗೇಶನ್‌ ಟೀಮೋ? ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಮೋ? ಎಸ್‌ಐಟಿ ಅಧಿಕಾರಿಗಳು ಪದೇ ಪದೆ ಸಿಎಂ, ಡಿಸಿಎಂ ಜತೆಗೆ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವುದು ಏಕೆ? ಅಲ್ಲಿ ಅವರು ಏನೇನು ನಿರ್ದೇಶನಗಳನ್ನು ಕೊಡುತ್ತಿದ್ದಾರೆ?

ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ನೆಲದ ಕಾನೂನಿನಡಿ ಕಠಿನ ಶಿಕ್ಷೆ ಆಗಬೇಕು. ಇದರಲ್ಲಿ ನಾನು ರಾಜಿ ಆಗುವುದಿಲ್ಲ. ಇದರಲ್ಲಿ ಪ್ರಜ್ವಲ್‌ ರೇವಣ್ಣ ಪಾತ್ರ ಇದೆಯೇ, ಇಲ್ಲವೇ ಎಂಬುದನ್ನು ತನಿಖಾಧಿಕಾರಿಗಳು ಹೇಳಬೇಕು. ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಅಥವಾ ಸುಪ್ರೀಂ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು.
-ಎಚ್‌.ಡಿ. ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next