ಇನ್ಸ್‌ಪೆಕ್ಟರ್ ವಿಕ್ರಂ…! ಈ ಹೆಸರು ಕೇಳಿದಾಕ್ಷಣ ನೆನಪಾಗೋದೇ ಶಿವರಾಜಕುಮಾರ್. ಹೌದು, ಇದು ಶಿವರಾಜಕುಮಾರ್ ಅಭಿನಯಿಸಿದ ಚಿತ್ರ. ಈಗೇಕೆ ಆ ಚಿತ್ರದ ಬಗ್ಗೆ ಪೀಠಿಕೆ ಅಂತೀರಾ? ವಿಷಯ ಇದೆ. ಈಗಾಗಲೇ ಕನ್ನಡದಲ್ಲಿ ಮರುಶೀರ್ಷಿಕೆಗಳು ಬರುತ್ತಿರುವುದು ಎಲ್ಲರಿಗೂ ಗೊತ್ತು. ಸಾಕಷ್ಟು ಹೊಸಬರು, ಹಳಬರು ಹಳೆಯ ಶೀರ್ಷಿಕೆಗಳನ್ನು ಬಳಸಿ ಚಿತ್ರ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಆ ಸಾಲಿಗೆ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರವೂ ಸೇರಿದೆ.
ಶಿವರಾಜಕುಮಾರ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಹೊಸ ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಜ್ವಲ್ ದೇವರಾಜ್ ಈ ಚಿತ್ರದ ಹೀರೋ ಎಂಬುದೇ ಈ ಹೊತ್ತಿನ ವಿಶೇಷ. ಇನ್ನೊಂದು ವಿಶೇಷವೆಂದರೆ, ಇದು ಪ್ರಜ್ವಲ್ ದೇವರಾಜ್ ಅಭಿನಯದ 30 ನೇ ಸಿನಿಮಾ ಎಂಬುದು. ಈ ಚಿತ್ರವನ್ನು ರಮೇಶ್ ಅರವಿಂದ್ ಅಭಿನಯಿಸಿದ್ದ “ಪುಷ್ಪಕ ವಿಮಾನ’ ಚಿತ್ರವನ್ನು ನಿರ್ಮಿಸಿದ್ದ ವಿಖ್ಯಾತ್ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು, ಈ ಚಿತ್ರದ ಮೂಲಕ ನರಸಿಂಹ ಅವರು ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ನರಸಿಂಹ ಅವರು “ಪುಷ್ಪಕ ವಿಮಾನ’ ಹಾಗು “ರಣವಿಕ್ರಮ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಅನುಭವದ ಮೇಲೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿ “ಇನ್ಸ್‌ಪೆಕ್ಟರ್ ವಿಕ್ರಂ’ ಎಂಬ ಹೆಸರು ಕೇಳಿದಾಕ್ಷಣ, ನೆನಪಿಗೆ ಬರೋದೇ, ಪೊಲೀಸ್ ಅಧಿಕಾರಿ ಪಾತ್ರ.
ಪ್ರಜ್ವಲ್ ದೇವರಾಜ್ ಅವರಿಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತುಂಬಾ ಸ್ಟೈಲಿಶ್ ಪಾತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಕ್ಲಾಸ್ ಜೊತೆಗೆ ಮಾಸ್ ಎಲಿಮೆಂಟ್ಸ್ ಇಟ್ಟುಕೊಂಡು ಈ ಚಿತ್ರವನ್ನು ಮಾಡುತ್ತಿದ್ದಾರೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಹೆಣೆದು, ಎಲ್ಲಾ ವರ್ಗದವರಿಗೂ ಸೀಮಿತವಾಗುವಂತಹ ಚಿತ್ರ ಕೊಡುವ ಪ್ರಯತ್ನ ನಮ್ಮದು. “ಪುಷ್ಪಕ ವಿಮಾನ’ ನಂತರ ಸಾಕಷ್ಟು ಕಥೆ ಕೇಳಿದ್ದೆ.
ಆದರೆ, ಅಷ್ಟೊಂದು ಚೆನ್ನಾಗಿರಲಿಲ್ಲ. ಈಗ “ಇನ್ಸ್‌ಪೆಕ್ಟರ್ ವಿಕ್ರಂ’ ಫನ್ ಬೇಸ್ಡ್ ಆ್ಯಕ್ಷನ್ ಚಿತ್ರ ಇಷ್ಟವಾಗಿ ಶುರುಮಾಡುತ್ತಿರುವುದಾಗಿ ಹೇಳುತ್ತಾರೆ ನಿರ್ಮಾಪಕ ವಿಖ್ಯಾತ್. ಇದೊಂಥರಾ “ದಬಾಂಗ್’ ಶೈಲಿಯ ಚಿತ್ರ. ಇಡೀ ಚಿತ್ರದಲ್ಲಿ ಹಾಸ್ಯವೇ ಮೇಳೈಸಲಿದೆ. ಫನ್ನಿ ಕಾಪ್ ಕಥೆ ಇದಾಗಿದ್ದು, ಪ್ರಜ್ವಲ್ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಆಯ್ಕೆಯಾಗಿಲ್ಲ.
ಸದ್ಯಕ್ಕೆ ಮೂವರು ನಾಯಕಿಯರ ಜೊತೆ ಮಾತುಕತೆ ನಡೆಯುತ್ತಿದೆ. ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ಇತರೆಡೆ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. “ಮಫ್ತಿ’ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ನವೀನ್‌ಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಚರಣ್‌ರಾಜ್ ಸಂಗೀತವಿದೆ. ಜನವರಿ 27 ರಿಂದ ಚಿತ್ರೀಕರಣ ಶುರುವಾಗಲಿದೆ ಎಂದು ವಿವರಿಸುತ್ತಾರೆ ವಿಖ್ಯಾತ್.