ಪ್ರಜ್ವಲ್ ದೇವರಾಜ್ ಅಭಿನಯದ “ವೀರಂ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ವೀರಂ’ ಸಿನಿಮಾದ ಟೀಸರ್, ಹಾಡುಗಳು ಮತ್ತು ಟ್ರೇಲರ್ ಎಲ್ಲದಕ್ಕೂ ಉತ್ತಮ ಪ್ರತಿಕ್ರಿಯೆ ಸಿಗು ¤ದ್ದು,
ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ಚಿತ್ರತಂಡದ ಒಕ್ಕೊರಲ ಮಾತು.
“ವೀರಂ’ ಬಿಡುಗಡೆಗೂ ಮುನ್ನ ಸಿನಿಮಾದ ಬಗ್ಗೆ ಮಾತನಾಡಿರುವ ನಾಯಕ ನಟ ಪ್ರಜ್ವಲ್, “ನಾನು ಮೊದಲಿನಿಂದಲೂ ಸಾಹಸಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಒಬ್ಬ ಅಭಿಮಾನಿಯಾಗಿ ಅವರ ಸಿನಿಮಾಗಳನ್ನು ತುಂಬಾ ಎಂಜಾಯ್ ಮಾಡುತ್ತಿದ್ದೆ. ಅವರು ಮಾಡಿರುವ ಪಾತ್ರಗಳನ್ನು ಅಭಿಮಾನಿಯಾಗಿ ನೋಡಿ ಖುಷಿಡುತ್ತಿದ್ದೆ. ಅಂಥದ್ದೇ ಪಾತ್ರ “ವೀರಂ’ ಸಿನಿಮಾದಲ್ಲೂ ನನಗೆ ಸಿಕ್ಕಿದೆ. ಒಬ್ಬ ಮಧ್ಯಮ ಕುಟುಂಬದ ಹುಡುಗನಾಗಿ, ವಿಷ್ಣುವರ್ಧನ್ ಅಭಿಮಾನಿಯಾಗಿ “ವೀರಂ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಕೋಪದ, ಅನ್ಯಾಯದ ವಿರುದ್ದ ಸಿಡಿದು ನಿಲ್ಲುವಂಥ, ಆ್ಯಕ್ಷನ್ ಇಮೇಜ್ ನ ಪಾತ್ರವಿದು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ನಾಯಕ ನಟ ಪ್ರಜ್ವಲ್ ದೇವರಾಜ್.
ಈಗಾಗಲೇ ಬಿಡುಗಡೆಯಾಗಿರುವ “ವೀರಂ’ ಸಿನಿಮಾದ ಫಸ್ಟ್ ಲುಕ್, ಟೀಸರ್ ಮತ್ತು ಟ್ರೇಲರ್ ಎಲ್ಲದರಲ್ಲೂ ಆ್ಯಕ್ಷನ್ ಅಬ್ಬರ ಎದ್ದು ಕಾಣುತ್ತಿದೆ. ಈ ಬಗ್ಗೆಯೂ ಮಾತನಾಡುವ ಪ್ರಜ್ವಲ್, “ಸಿನಿಮಾದ ಟೈಟಲ್ ಹೇಳುವಂತೆ, “ವೀರಂ’ ಸಿನಿಮಾದಲ್ಲಿ ಸಾಮಾನ್ಯ ಹುಡುಗನೊಬ್ಬನ ವೀರಾವೇಶವಿದೆ. ಇದೊಂದು ಆ್ಯಕ್ಷನ್ ಸಬ್ಜೆಕ್ಟ್ ಆಗಿರುವುದರಿಂದ, ಭರ್ಜರಿ ಆ್ಯಕ್ಷನ್‌ಗಳಿರುವುದಂತೂ ನಿಜ. ಹಾಗಂತ, ಇಡೀ ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಆ್ಯಕ್ಷನ್ ಇದೆ. ಅದರ ಜೊತೆಗೆ ಫ್ಯಾಮಿಲಿ, ಸೆಂಟಿಮೆಂಟ್, ಲವ್. ಫ್ರೆಂಡ್‌ಶಿಪ್, ಕಾಮಿಡಿ, ಎಮೋಶನ್ಸ್ ಎಲ್ಲವೂ ಇದೆ. ಒಟ್ಟಾರೆ ಹೇಳುವುದಾದರೆ, “ವೀರಂ’ ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇರುವಂಥ ಪಾತ್ರ’ ಎನ್ನುತ್ತಾರೆ.
“ಇಡೀ ಚಿತ್ರತಂಡ ಸಾಕಷ್ಟು ಶ್ರಮವಹಿಸಿ ಈ ಸಿನಿಮಾ ಮಾಡಿದೆ. ನಿರ್ದೇಶಕ ಖದರ್ ಕುಮಾರ್, ನಿರ್ಮಾಪಕ ಶಶಿಧರ್ ಸಿನಿಮಾವನ್ನು ಪ್ರತಿ ಹಂತದಲ್ಲೂ ಚೆನ್ನಾಗಿ ಬರುವಂತೆ ಮಾಡಿದ್ದಾರೆ. ದೊಡ್ಡ ಕಲಾವಿದರ ತಾರಾಗಣ ಸಿನಿಮಾದಲ್ಲಿದ್ದು, ಪ್ರತಿಯೊಬ್ಬರು ತಮ್ಮ ಪಾತ್ರದಲ್ಲಿ ಚೆನ್ನಾಗಿ ಕಾಣುತ್ತಾರೆ. ಮಾಸ್, ಕ್ಲಾಸ್ ಹೀಗೆ ಎಲ್ಲ ವರ್ಗದ ಆಡಿಯನ್ಸ್‌ಗೂ ಕೂಡ ನೋಡಿ ಎಂಜಾಯ್ ಮಾಡುವಂಥ ಸಿನಿಮಾ “ವೀರಂ’. ಸಿನಿಮಾದ ಬಿಡುಗಡೆಯನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ನಿರೀಕ್ಷೆಯ ಮಾತನಾಡುತ್ತಾರೆ ಪ್ರಜ್ವಲ್ ದೇವರಾಜ್.
“ವೀರಂ’ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ನಟ ಶ್ರೀನಗರ ಕಿಟ್ಟಿ ನಾಯಕನ ಅಣ್ಣನಾಗಿ, ಶಿಷ್ಯ ದೀಪಕ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟಿ ಶ್ರುತಿ, ಅಚ್ಯುತ ಕುಮಾರ್, ಬಲರಾಜವಾಡಿ, ಗಿರೀಶ್ ಶಿವಣ್ಣ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಶಶಿಧರ್ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ಶಶಿಧರ್ ನಿರ್ಮಿಸಿರುವ “ವೀರಂ’ ಸಿನಿಮಾಕ್ಕೆ ಖದರ್ ಕುಮಾರ್ ನಿರ್ದೇಶನವಿದೆ. ಅಂದಹಾಗೆ, “ವೀರಂ’ ಇಂದು ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ
ಜಿ. ಎಸ್. ಕಾರ್ತಿಕ ಸುಧನ್