Advertisement

ಪ್ರಜ್ವಲ್‌ ಸ್ಪರ್ಧೆ: ಗೌಡರ ಪರೀಕ್ಷೆ ತಂತ್ರ!

01:30 AM Jan 02, 2019 | |

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬದ 3ನೇ ತಲೆಮಾರಿನ ರಾಜಕಾರಣಕ್ಕೆ ಹಸಿರು ನಿಶಾನೆ ತೋರುವ ಅಧಿಕೃತ ಘೋಷಣೆಯನ್ನಷ್ಟೆ ಗೌಡರು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಜ್ವಲ್‌ ಸ್ಪರ್ಧೆಗಿಳಿಯುವ ಮುನ್ಸೂಚನೆಯನ್ನು ದೇವೇಗೌಡರು ನೀಡಿದ ತಕ್ಷಣವೇ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯ ಚಿತ್ರಣದ ವಿಶ್ಲೇಷಣೆ ರಾಜಕೀಯ ಮುಖಂಡರಲ್ಲಿ ಆರಂಭವಾಗಿದೆ. ಬಿಜೆಪಿಯ ಸಂಭವನೀಯ ಅಭ್ಯರ್ಥಿಯ ಬಗ್ಗೆಯೂ ಚರ್ಚೆಗಳು ಶುರುವಾಗಿದೆ.

Advertisement

ಮೈತ್ರಿಯ ಮೇಲೆ ನಿರ್ಧಾರ: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಸೀಟು ಹಂಚಿಕೆ ಸುಖಾಂತ್ಯವಾದರೆ ಪ್ರಜ್ವಲ್‌ ಸ್ಪರ್ಧೆಗಿಳಿಯುವುದು ಖಚಿತ. ಒಂದು ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಸೀಟು ಹಂಚಿಕೆಯಲ್ಲಿ ಕಿತ್ತಾಟ ಆರಂಭವಾಗಿ ಚುನಾವಣಾ ಮೈತ್ರಿ ಆಗದಿದ್ದರೆ ಹಾಸನ ಕ್ಷೇತ್ರದಿಂದ ದೇವೇಗೌಡರೇ ಸ್ಪರ್ಧೆಗಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳನ್ನು ಎದರಿಸುವುದು ಪ್ರಜ್ವಲ್‌ಗೆ ಪ್ರಯಾಸವಾಗಬಹುದು. ಪ್ರಜ್ವಲ್‌ ಸ್ಪರ್ಧೆಗಿಳಿದು ಹಿನ್ನಡೆ ಅನುಭವಿಸಿದರೆ ಯುವ ಮುಖಂಡನ ರಾಜಕೀಯ ಭವಿಷ್ಯ ಮಸುಕಾಗಬಹುದೆಂಬ ಲೆಕ್ಕಾಚಾರ ಮಾಡಿ ಅಂತಿಮವಾಗಿ ದೇವೇಗೌಡರೇ ಸ್ಪರ್ಧೆಗಿಳಿಯಬಹುದು. ಆಗ ದೇವೇಗೌಡರು ನಿರಾಯಾಸವಾಗಿ ಗೆಲ್ಲುವರು ಎಂಬುದು ಜೆಡಿಎಸ್‌ ಮುಖಂಡರ ಅಭಿಪ್ರಾಯ.

ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರ: ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಚುನಾವಣಾ ಮೈತ್ರಿಯಾಗದಿದ್ದರೆ ಸಾಕು. ಚುನಾವಣೆಯಲ್ಲಿ ಪ್ರಬಲ ಸ್ಪರ್ಧಿಯನ್ನು ದೇವೇಗೌಡ ರೆದುರು ಕಣಕ್ಕಿಳಿಸಿದರೆ
ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ವೇದಿಕೆ ಸಿಕ್ಕಂತಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಮುಖಂಡರದ್ದು. ಕಾಂಗ್ರೆಸ್‌
ಸ್ಪರ್ಧೆಗಿಳಿಯುವುದಾದಲ್ಲಿ ಮಾಜಿ ಸಚಿವ ಎ.ಮಂಜು ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅವರ ನಡುವೆ ಟಿಕೆಟ್‌ಗೆ ಸ್ಪರ್ಧೆ ಏರ್ಪಡುವುದು ಖಚಿತ.

ದೇವೇಗೌಡರದು ಪರೀಕ್ಷೆಯ ತಂತ್ರ: ಪ್ರಜ್ವಲ್‌ ಅವರನ್ನು ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿಸಲಾಗುವುದು ಎಂದು ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಕೆಲ ದಿನಗಳ ಹಿಂದೆ ಪ್ರಜ್ವಲ್‌ ಹಾಸನದಿಂದ ಸ್ಪರ್ಧಿಸಬಯಸಿದ್ದಾರೆಂದು ದೇವೇಗೌಡರು ಹೇಳಿದ ನಂತರ ಜೆಡಿಎಸ್‌ನ ಯುವ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿದೆ. ಹಾಸನ ಈಗ ಜೆಡಿಎಸ್‌ನ ಭದ್ರಕೋಟೆಯಾಗಿದೆ.
7 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಬಹುಪಾಲು ಸ್ಥಳೀಯ ಸಂಸ್ಥೆಗಳು ಜೆಡಿಎಸ್‌ ವಶದಲ್ಲಿವೆ.
ಎಚ್‌.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಪ್ರಜ್ವಲ್‌ ಗೆಲುವು ಸುಲಭ ಎಂಬುದು ಯುವ ಕಾರ್ಯಕರ್ತರ ನಂಬಿಕೆ.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಲೆಂದೇ ಗೌಡರು ಪ್ರಜ್ವಲ್‌ ಸ್ಪರ್ಧೆಯ ಸುದ್ದಿಯನ್ನು ಹರಿ ಬಿಟ್ಟಿದ್ದಾರೆ. ಆ ನಂತರದ ಬೆಳವಣಿಗೆ, ಪಕ್ಷದ ಮುಖಂಡರಿಂದ ಹೊರ ಬೀಳುವ ಅಭಿಪ್ರಾಯಗಳನ್ನು ಗಮನಿಸಿ ದೇವೇ ಗೌಡರು ಅಂತಿಮ ತೀರ್ಮಾನ ತೆಗೆದು ಕೊಳ್ಳುವವರು ಎಂದು ಜಿಲ್ಲೆಯ ಜೆಡಿಎಸ್‌ ಮುಖಂಡರು ಅಭಿಪ್ರಾಯಪಡುತ್ತಿದ್ದಾರೆ. ದೇವೇಗೌಡರೇ ಇನೊಮ್ಮೆ ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿಯಬೇಕು ಎಂಬುದು ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಳಗಿದ ಮುಖಂಡರ ಅಭಿಮತ

Advertisement

ಮಂಜು ಚಿತ್ತ ಬಿಜೆಪಿಯತ್ತ 
ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ – ಜೆಡಿಎಸ್‌ ನಡುವೆ ಚುನಾವಣಾ ಮೈತ್ರಿ ಏರ್ಪಡುವುದು ಖಚಿತ. ಜೆಡಿಎಸ್‌ ಈಗ ಕೇಳುತ್ತಿರುವ 12 ಸೀಟುಗಳ ಪೈಕಿ ನಾಲ್ಕೈದು ಸೀಟು ಕಡಿಮೆಯಾದರೂ ಜೆಡಿಎಸ್‌ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತದೆ ಎಂಬುದು ಕಾಂಗ್ರೆಸ್‌ ಮುಖಂಡರ ವಿಶ್ಲೇಷಣೆ. ಹಾಗಾಗಿ ಹಾಸನ ಲೋಕಸಭಾ ಕ್ಷೇತ್ರ ಜೆಡಿಎಸ್‌ ಪಾಲಿಗೆ ಹೋಗುವುದು ಖಚಿತ. ಆಗ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ – ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ. ಗ್ರೆಸ್‌ಗೆ
ಸ್ಪರ್ಧೆಯ ಅವಕಾಶ ಸಿಗದೆ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕಾದ ಅನಿವಾರ್ಯ ಸ್ಥಿತಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಗೆ ಬರಬಹುದು. ಅಂತಹ ಸಂದರ್ಭ ಎದುರಾದಾರೆ ದೇವೇಗೌಡರ ಕುಟುಂಬದ ರಾಜಕೀಯ ವೈರಿ ಎಂದೇ ಬಿಂಬಿತವಾಗಿರುವ ಮಾಜಿ
ಸಚಿವ ಎ.ಮಂಜು ಅವರು ಕಾಂಗ್ರೆಸ್‌ನಲ್ಲಿದ್ದುಕೊಂಡು ಜೆಡಿಎಸ್‌ ಅಭ್ಯರ್ಥಿ ಗೆಲ್ಲುವುದನ್ನು ಸಹಿಸಲಾರರು. ಅವರು ಬಿಜೆಪಿಗೆ ಪಕ್ಷಾಂತರ ಮಾಡಿಯಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ರಾಜಕೀಯ ಅಸ್ತಿತ್ವ ಕಾಯ್ದುಕೊಳ್ಳಲಿದ್ದಾರೆ ಎಂಬುದು
ಎ.ಮಂಜು ಅವರ ಬೆಂಬಲಿಗರ ಬಲವಾದ ನಂಬಿಕೆ. ಬಿಜೆಪಿಯಲ್ಲಿ ಈಗ ದೇವೇಗೌಡರೆದರು ಸೆಣೆಸುವ ಪ್ರಬಲ ಅಭ್ಯರ್ಥಿಗಳಿಲ್ಲ. ಹಾಗಾಗಿ ಎ.ಮಂಜು ಅವರಿಗೆ ಬಿಜೆಪಿ ಮಣೆ ಹಾಕುವುದು ಬಹುತೇಕ ಖಚಿತ.

ಎನ್‌. ನಂಜುಂಡೇಗೌಡ 

Advertisement

Udayavani is now on Telegram. Click here to join our channel and stay updated with the latest news.

Next