ಹಾಸನ: “ಪ್ರಜ್ವಲ್ ರೇವಣ್ಣ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಸ್ಪರ್ಧೆಗೆ ದೇವೇಗೌಡರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ’ ಎಂದು ಜೆಡಿಎಸ್ ವರಿಷ್ಠ ದೇವೇಗೌಡರ ಸೊಸೆ ಭವಾನಿ ರೇವಣ್ಣ ಹೇಳಿದರೆ, ಕೆಲ ಹೊತ್ತಿನಲ್ಲಿಯೇ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, “ಅಂತಹ ತೀರ್ಮಾನ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಳೆನರಸೀಪುರ ತಾಲೂಕು ಹರದನಹಳ್ಳಿಯಲ್ಲಿನ ಈಶ್ವರನ ದೇವಾಲಯದಲ್ಲಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ , “ಪ್ರಜ್ವಲ್ ಚುನಾವಣೆ ಸ್ಪರ್ಧೆಗೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಿದ್ಧತೆ ನಡೆಸಿದ್ದಾನೆ. ಬೇಲೂರಿನಲ್ಲಿ ಕಳೆದ ಬಾರಿಯೇ ನಾನು ಸಿದ್ಧತೆ ನಡೆಸಿದ್ದೆ.
ಆನಂತರ ಪ್ರಜ್ವಲ್ ಬೇಲೂರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಡಬೇಕೆಂಬುದನ್ನು ದೇವೇಗೌಡರು ನಿರ್ಧರಿಸುತ್ತಾರೆ’ ಎಂದರು. ಭವಾನಿ ರೇವಣ್ಣ ಮಾತನಾಡಿದ ಕೆಲ ಕ್ಷಣಗಳಲ್ಲಿಯೇ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಿದರು. ಆದರೆ ಅಷ್ಟರಲ್ಲಿ ಭವಾನಿ ಅವರು ಅಲ್ಲಿಂದ ಹೊರಟು ಹೋಗಿದ್ದರು.
ಆನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ, “ಮುಂದಿನ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಮಾತ್ರ ಸ್ಪರ್ಧಿಸುತ್ತಾರೆಂದು ದೇವೇಗೌಡರೇ ಹಲವು ಬಾರಿ ಹೇಳಿದ್ದಾರೆ. ಮುಂದೆ ಏನಾಗುತ್ತದೆಂದು ಹೇಳಲಾಗದು. ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ. ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದರೆ ಅವರೇ ಬಹಿರಂಗವಾಗಿ ಹೇಳುತ್ತಾರೆ’ ಎಂದು ಹೇಳುವ ಮೂಲಕ ಪ್ರಜ್ವಲ್ ಸ್ಪರ್ಧೆ ಅಂತಿಮವಾಗಿಲ್ಲ ಎಂಬುದನ್ನು ದೃಢಪಡಿಸಿದರು.
“ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ’
ಹಾಸನ: “ನಾನು ರಾಜಕೀಯದಿಂದ ನಿವೃತ್ತಿ ಆಗಲ್ಲ. ಯಾರಾದ್ರೂ ಹಾಗೆಂದುಕೊಂಡಿದ್ದರೆ ಅದು ಕನಸಿನ ಮಾತು. ಜೀವ ಇರುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಹರದನಹಳ್ಳಿ ಮನೆದೇವರು ಈಶ್ವರ ಮತ್ತು ಮಾವಿನಕೆರೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, “ವಯೋಮಾನದ ಹಿನ್ನೆಲೆಯಲ್ಲಿ ಚುನಾವಣೆಗೆ ನಿಲ್ಲದಿರಬಹುದು. ಆದರೆ ಮನೆಯಲ್ಲಿ ಕೂರುವುದಿಲ್ಲ. ನಾನು ಬದುಕಿರುವಷ್ಟು ಕಾಲವೂ ರಾಜಕೀಯದಲ್ಲಿದ್ದು, ಜನರ ಸೇವೆ ಮಾಡುವ ಹಂಬಲವಿದೆ’ ಎಂದರು.