ಬೆಂಗಳೂರು: ಜೆಡಿಎಸ್ ನಿಂದ ಅಮಾನತಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮಗಳು ತಮ್ಮ ಹೆಸರು ಬಳಸಿಕೊಳ್ಳದಂತೆ ಜೆಡಿಎಸ್ ಉನ್ನತ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋರ್ಟ್ ನಿಂದ ಸೋಮವಾರ ತಡೆ ತಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳೂ ಕೂಡ ಭಾರತದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸ್ಕ್ಯಾಂಡಲ್ ನಲ್ಲಿ ಭಾಗಿಯಾಗಿದ್ದು ವಿಡಿಯೋ ವೈರಲ್ ಆಗಿದೆ ಎಂದು ವರದಿ ಮಾಡಿದ್ದವು. ರಾಷ್ಟ್ರೀಯ ಮಾಧ್ಯಮಗಳೂ ದೇವೇಗೌಡರ ಹೆಸರನ್ನು, ಕುಮಾರಸ್ವಾಮಿ ಅವರ ಹೆಸರನ್ನು ಬಳಸಿಕೊಂಡಿದ್ದವು.
ಪ್ರಜ್ವಲ್ ಕೇಸ್ ನಲ್ಲಿ ಮಾಧ್ಯಮಗಳು ತಮ್ಮ ಹೆಸರು ಬಳಸದಂತೆ ತಡೆ ನೀಡುವಂತೆ ಕೋರಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ನಗರದ 34 ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಸುದ್ಧಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಙೆಗೆ ಮನವಿ ಮಾಡಿದ್ದರು.
ಸಾಕ್ಷ್ಯಗಳಿಲ್ಲದೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸುದ್ದಿ ಪ್ರಸರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಬಾರದು. ಸತ್ಯಾಂಶವಿದ್ದು, ಸಾಕ್ಷ್ಯಗಳಿದ್ದರೆ ಮಾತ್ರ ಸುದ್ದಿ ಪ್ರಸಾರ ಮಾಡಬಹುದು ಎಂದು ಕೋರ್ಟ್ ಹೇಳಿದೆ.
ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆ ಎಚ್.ಡಿ.ರೇವಣ್ಣ ವಿರುದ್ಧ ಮಹಿಳೆಯೊಬ್ಬರನ್ನು ಅಪಹರಣ ಮಾಡಿರುವ ಪ್ರಕರಣ ದಾಖಲಾಗಿತ್ತು. ಎಸ್ ಐಟಿ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ವಿದೇಶದಲ್ಲಿರುವ ಪ್ರಜ್ವಲ್ ಅವರಿನ್ನೂ ಸ್ವದೇಶಕ್ಕೆ ಮರಳಿಲ್ಲ.