ಹೊಸದಿಲ್ಲಿ: ಭಾರತದ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ಇದೇ ಮೊದಲ ಬಾರಿಗೆ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಅಗ್ರ ನೂರರಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ಸೋಮವಾರ ಪ್ರಕಟವಾದ ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಪ್ರಜ್ಞೇಶ್ 6 ಸ್ಥಾನಗಳ ಏರಿಕೆ ಕಂಡು 97ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ವೃತ್ತಿ ಜೀವನದ ಶ್ರೇಷ್ಠ ರ್‍ಯಾಂಕಿಂಗ್ ಆಗಿದೆ.
ಪ್ರಜ್ಞೇಶ್ ಗುಣೇಶ್ವರನ್ ಟಾಪ್-100 ಯಾದಿಯಲ್ಲಿ ಸ್ಥಾನ ಪಡೆದ ಭಾರತದ ಕೇವಲ 3ನೇ ಟೆನಸಿಗ. ಉಳಿದಿಬ್ಬರೆಂದರೆ ಸೋಮ್‌ದೇವ್ ದೇವ್‌ವರ್ಮನ್ ಮತ್ತು ಯೂಕಿ ಭಾಂಬ್ರಿ. ಒಂದು ವೇಳೆ ಪ್ರಜ್ಞೆàಶ್ ಅಗ್ರ 100ರಲ್ಲಿ ಸ್ಥಾನವನ್ನು ಕಾಯ್ದುಕೊಂಡರೆ, ಮುಂಬರುವ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿನ ಪ್ರವೇಶದ ಬಾಗಿಲೊಂದು ಅವರಿಗೆ ತೆರೆದುಕೊಳ್ಳಲಿದೆ.
ಗಾಯಾಳಾಗಿರುವ ಯೂಕಿ ಭಾಂಬ್ರಿ ಪ್ರಮುಖ ಕೂಟಗಳಿಂದ ದೂರ ಉಳಿದ ಕಾರಣ ನೂತನ ರ್‍ಯಾಂಕಿಂಗ್‌ನಲ್ಲಿ 4 ಸ್ಥಾನ ಕೆಳಗಿಳಿದಿದ್ದು, 156ನೇ ಸ್ಥಾನದಲ್ಲಿದ್ದಾರೆ. 133ನೇ ಸ್ಥಾನದಲ್ಲಿದ್ದ ರಾಮ್‌ಕುಮಾರ್ ರಾಮ್‌ನಾಥನ್ 6 ಸ್ಥಾನಗಳ ಏರಿಕೆ ಕಂಡು 128ನೇ ಸ್ಥಾನ ಸಂಪಾದಿಸಿದ್ದಾರೆ. ಉಳಿದಂತೆ ಸಾಕೇತ್ ಮೈನೇನಿ (255), ಶಶಿಕುಮಾರ್ ಮುಕುಂದ್ (271) ರ್‍ಯಾಂಕಿಂಗ್‌ನಲ್ಲಿ ಅಲ್ಪ ಏರಿಕೆ ಕಂಡಿದ್ದಾರೆ.ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ 37ನೇ ಸ್ಥಾನದಲ್ಲಿದ್ದರೆ, ಅವರ ಜೋಡಿ ದಿವಿಜ್ ಶರಣ್ 39ನೇ ಸ್ಥಾನ ಪಡೆದಿದ್ದಾರೆ. ಲಿಯಾಂಡರ್ ಪೇಸ್ 75, ಜೀವನ್ ನೆಡುಜೆಜಿಯನ್ 77 ಹಾಗೂ ಪ್ರಣವ್ ರಾಜ್ 100ನೇ ಸ್ಥಾನದಲ್ಲಿದ್ದಾರೆ.
ಅಂಕಿತಾ ಭಾರತದ ಟಾಪರ್
ವನಿತಾ ವಿಭಾಗದಲ್ಲಿ ಅಂಕಿತಾ ರೈನಾ ಭಾರತದ ಅಗ್ರ ಟೆನಿಸ್ ಆಟಗಾರ್ತಿಯಾಗಿ ಉಳಿದಿದ್ದು, 3 ಸ್ಥಾನಗಳ ಏರಿಕೆ ಕಂಡು 165ನೇ ಸ್ಥಾನ ಸಂಪಾದಿಸಿದ್ದಾರೆ. ಮತ್ತೋರ್ವ ಸಿಂಗಲ್ಸ್ ಆಟಗಾರ್ತಿ ಕರ್ಮನ್ ಕೌರ್ ಥಾಂಡಿ ಒಂದು ಸ್ಥಾನ ಕೆಳಗಿಳಿದಿದ್ದಾರೆ (211).