Advertisement

ಜ. 22: ಮಂಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ, ಸಮಾವೇಶ

12:11 AM Jan 20, 2023 | Team Udayavani |

ಮಂಗಳೂರು: ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಪ್ರಜಾಧ್ವನಿ ಯಾತ್ರೆಯು ಜ. 22ರಂದು ಮಂಗಳೂರಿಗೆ ಆಗಮಿಸಲಿದ್ದು ಕರಾವಳಿ ಉತ್ಸವ ಮೈದಾನದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರ ಸಮಕ್ಷಮದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಉಡುಪಿಯಲ್ಲಿ ಬೆಳಗ್ಗೆ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಲ್ಲಿಂದ ಬಸ್‌ನಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರು ಮಂಗಳೂರಿಗೆ ಆಗಮಿಸಲಿದ್ದು, ಲಾಲ್‌ಬಾಗ್‌ನಿಂದ ಭರ್ಜರಿ ಸ್ವಾಗತದೊಂದಿಗೆ ಕರೆತರಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮುಖಂಡರಾದ ರೋಜಿ ಜಾನ್‌, ಎಂ.ಬಿ. ಪಾಟೀಲ್‌, ಸಲೀಂ ಮಹಮ್ಮದ್‌, ಮಧು ಬಂಗಾರಪ್ಪ, ಧ್ರುವ ನಾರಾಯಣ್‌, ಎಚ್‌.ಕೆ. ಪಾಟೀಲ್‌ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಎಲ್ಲ 1,860 ಬೂತ್‌ಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಲಿದ್ದಾರೆ. ಸುಮಾರು 25ರಿಂದ 30 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದರು.

ಜಿಎಸ್‌ಟಿಯಲ್ಲಿ ಕೇಂದ್ರ ವಂಚನೆ
ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೊಡದೆ ಕೇಂದ್ರ ವಂಚಿಸಿದೆ, ರಾಜ್ಯ ಸರಕಾರ ಕೃಷಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಕೃಷಿಕರಿಗೆ ಪೂರಕವಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಜಿಎಸ್‌ಟಿಯಿಂದ ಜನರು ರೋಸಿಹೋಗಿದ್ದಾರೆ. ಡಬಲ್‌ ಎಂಜಿನ್‌ ಸರಕಾರದ ವೈಫಲ್ಯಗಳನ್ನು ಜನರ ಮುಂದೆ ಬಯಲುಗೊಳಿಸುವುದಕ್ಕಾಗಿ ಈ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Advertisement

ಕರಾವಳಿಯಲ್ಲಿ ಮೀನುಗಾರರಿಗಾಗಿ ಯಾವುದೇ ಯೋಜನೆಗಳನ್ನು ಕಾರ್ಯಗತ ಗೊಳಿಸಿಲ್ಲ, ಬೆಂಗಳೂರು -ಮಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ಹೆದ್ದಾರಿ ಪೂರ್ಣವಾಗಿ ಹದಗೆಟ್ಟಿದೆ. ಕೋವಿಡ್‌ನಿಂದಾಗಿ ಜನರ ವ್ಯಾಪಾರ ಕಡಿಮೆ ಆಗಿದೆ. ಉದ್ಯೋಗವಿಲ್ಲದೆ ಯುವಜನರು ಕಂಗೆಟ್ಟಿದ್ದಾರೆ. ಸರಕಾರಗಳು ಜನರ ಬೆಂಬಲಕ್ಕೆ ನಿಲ್ಲದೆ ತೆರಿಗೆ ಹೇರುತ್ತಿವೆ. ಹಾಗಾಗಿ ಜನರ ನೆರವಿಗೆ ಬರುವ ಉದ್ದೇಶದಿಂದ ಜನರಿಗೆ 200 ಯುನಿಟ್‌ ಉಚಿತ ವಿದ್ಯುತ್‌ ಹಾಗೂ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಕೊಡುಗೆ ನೀಡುವ ಕೊಡುಗೆಗಳನ್ನು ಘೋಷಿಸಿದ್ದೇವೆ. ಅದನ್ನು ಯಶಸ್ವಿಯಾಗಿ ನೆರವೇರಿಸುವ ಸಂಕಲ್ಪ ನಮಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಮನಪಾ ವಿಪಕ್ಷ ನಾಯಕ ನವೀನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಅಶೋಕ್‌ ರೈ ಕಾಂಗ್ರೆಸ್‌ ಸೇರ್ಪಡೆ
ಜ. 22ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿ, ಬಿಜೆಪಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್‌ ಕುಮಾರ್‌ ರೈ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ತಿಳಿಸಿದರು. ಇನ್ನಷ್ಟು ಮಂದಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿ ಇನ್ನಷ್ಟು ಮಂದಿ ಮುಂದೆಯೂ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next