ಹುಬ್ಬಳ್ಳಿ: ನಾನು ರಾಜ್ಯ ರಾಜಕಾರಣಕ್ಕೆ ಬರುವ ಚಿಂತನೆಯೇ ಇಲ್ಲದಿರುವಾಗ ನಾನು ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಶ್ವೆ ಮೂಲದವರನ್ನು ಬಿಜೆಪಿ ಸಿಎಂ ಮಾಡಲು ಹೊರಟಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಶತಮಾನಕ್ಕೊಬ್ಬ ನಾಯಕನ ಕೈ ಕೆಳಗೆ ಕೆಲಸ ಮಾಡುವುದಕ್ಕೆ ನನಗೆ ಖುಷಿ ಇದೆ.ಅದು ನನ್ನ ಪಾಲಿನ ಸೌಭಗ್ಯವೆಂದು ಭಾವಿಸಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ:ಕನಕಪುರ: ಬಾಲಕಿಯ ಮೇಲೆ ಆಸಿಡ್ ದಾಳಿ ನಡೆಸಿದ ಭಗ್ನ ಪ್ರೇಮಿ ಅರೆಸ್ಟ್
ಕಾಂಗ್ರೆಸ್ ನವರ ಕಿವಿಗೆ ಈಗಾಗಲೇ ಜನ ಎಲ್ಲೆಡೆ ಹೂವಿಟ್ಟಿದ್ದಾರೆ. ಮುಂದೆ ತಾವಾಗಿಯೇ ಹೂವಿಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದೆ. ಅಷ್ಟಿದ್ದರೂ ಅವರು ಆಯ-ವ್ಯಯ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಇನ್ಮುಂದೆ ಅವರು ತಾವಾಗಿಯೇ ಹೂವಿಟ್ಟುಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ಟಿಪ್ಪು ಸುಲ್ತಾನ ರೀತಿ ಸಿದ್ಧರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಶ್ವತ್ಥನಾರಾಯಣ ಅವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಆ ಅರ್ಥದಲ್ಲಿ ಹೇಳಿಲ್ಲವೆಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಗಿಸಬೇಕೆಂದು ಹೇಳಿದ್ದಾರೆ. ಹೀಗಾಗಿ ಅದನ್ನು ಬೆಳೆಸಿಕೊಂಡು ಹೋಗುವುದು ಸರಿಯಲ್ಲ. ಬಾಯಿ ತಪ್ಪಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಹಲವಾರು ಬಾರಿ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ಮೇಲೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪ ತಾರಕಕ್ಕೇರಿವೆ. ಈ ಮಟ್ಟಕ್ಕಿಳಿದು ಮಾತನಾಡೋದು ಯಾರಿಗೂ ತರವಲ್ಲ ಎಂದರು.
ಜೋಶಿ ಕಚೇರಿಯಲ್ಲಿಯೇ ಭ್ರಷ್ಟಚಾರ ನಡೆಯುತ್ತಿದೆ ಎಂಬ ಭೋಜೇಗೌಡ ಆರೋಪ ಬಗ್ಗೆ ಮಾತನಾಡಿದ ಅವರು, ಭೋಜೇಗೌಡ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಪುನರುಚ್ಛರಿಸಿದರು.