ಭೋಪಾಲ : 26/11ರ ಮುಂಬಯಿ ಉಗ್ರ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸಾವಿಗೆ ನನ್ನ ಶಾಪವೇ ಕಾರಣ ಎಂದು ಹೇಳಿ ವಿವಾದ ಸೃಷ್ಟಿಸಿರುವ ಮಾಲೆಗಾಂವ್ ಬ್ಲಾಸ್ಟ್ ಆರೋಪಿ ಮತ್ತು ಭೋಪಾಲದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಲಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೊನ್ನೆ ಗುರುವಾರ ಬೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರು “ನನಗೆ ಚಿತ್ರಹಿಂಸೆ ನೀಡಿದ್ದ ಕರ್ಕರೆ ಮುಂಬಯಿ ಉಗ್ರ ದಾಳಿಯ ವೇಳೆ ಸಾಯಲು ನನ್ನ ಶಾಪವೇ ಕಾರಣ’ ಎಂದು ಹೇಳಿದ್ದರು.
ಆದರೆ ತನ್ನ ಈ ಹೇಳಿಕೆ ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಗುರಿಯಾಗುತ್ತಿದ್ದಂತೆಯೇ ಆಕೆ ನಿನ್ನೆ ಶುಕ್ರವಾರ ಕ್ಷಮೆಯಾಚಿಸಿದ್ದರು.
“ಪ್ರಜ್ಞಾ ಸಿಂಗ್ ಠಾಕೂರ್ ಅವರ ಈ ಹೇಳಿಕೆಯನ್ನು ನಾವು ಸ್ವಪ್ರೇರಿತವಾಗಿ ಪರಿಗಣಿಸಿ ಆ ಬಗ್ಗೆ ಸಹಾಯಕ ನಿರ್ವಚನ ಅಧಿಕಾರಿಯಿಂದ ವರದಿ ಕೇಳಿದ್ದೇವೆ. ಇವತ್ತು ಶನಿವಾರ ಬೆಳಗ್ಗೆ ನಮಗೆ ವರದಿ ಸಿಕ್ಕಿದೆ ಮತ್ತು ನಾವು ಈ ಬಗ್ಗೆ ನೊಟೀಸ್ ಜಾರಿ ಮಾಡಲಿದ್ದೇವೆ. ಕಾರ್ಯಕ್ರಮ ಸಂಘಟಕರು ಮತ್ತು ಹೇಳಿಕೆ ನೀಡಿದವರು 24 ತಾಸುಗಳ ಒಳಗೆ ಆದಕ್ಕೆ ಉತ್ತರಿಸಬೇಕಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಭೋಪಾಲ ಜಿಲ್ಲಾಧಿಕಾರಿ ಸುಧಾಮ್ ಖಡೆ ತಿಳಿಸಿದ್ದಾರೆ.
ನಾವು ಎಆರ್‌ಓ ವರದಿಯನ್ನು ಚುನಾವಣಾ ಆಯುಕ್ತರಿಗೆ ಕಳಿಸಲಿದ್ದೇವೆ ಎಂದವರು ಹೇಳಿದರು.