ಮಂಡ್ಯ: ಜೈನಮುನಿ ಆಚಾರ್ಯ ಪ್ರಗ್ಯಾ ಅವರ ಜನ್ಮಶತಾಬ್ಧಿ ಅಂಗವಾಗಿ ದೇಶದ ವಿವಿಧ ಸರ್ಕಾರಿ ಶಾಲೆಗಳಲ್ಲಿ 2,500 ಪ್ರಗ್ಯಾ ಕೇಂದ್ರದ ಕಟ್ಟಡಗಳನ್ನು ಮುಂದಿನ 2 ವರ್ಷಗಳಲ್ಲಿ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ತೇರಾಪಂತ್ ಯುವಕ್ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ವಿಮಲ್ ಕೊಠಾರಿಯಾ ತಿಳಿಸಿದರು.
ತಾಲೂಕಿನ ಹಳೇ ಬೂದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಜೈನ ಸಮುದಾಯದ ವತಿಯಿಂದ ನಿರ್ಮಿಸಲಾಗಿರುವ ಪ್ರಗ್ಯಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರೆವೇರಿಸಿ ಮಾತನಾಡಿ, ಮೈಸೂರು ಜೈನ ಸಮಾಜದ ಸಹಕಾರದೊಂದಿಗೆ 15 ದಿನಗಳಲ್ಲಿ ಪರಿಸರಸ್ನೇಹಿ ಕಟ್ಟಡ ನಿರ್ಮಿಸಲಾಗಿದೆ. ಬಹುವಿಧ ಚಟುವಟಿಕೆಗೆ ಅನುಕೂಲವಾದ ಈ ಕಟ್ಟಡ ಭವಿಷ್ಯದ ವಿದ್ಯಾರ್ಥಿಗಳಿಗೆ ದೇಶಸೇವೆ, ದೇಶಭಕ್ತಿ ಬೆಳೆಸಲು ಮಾದರಿಯಾಗಿದೆ ಎಂದು ಹೇಳಿದರು.
ಜೈನ ಮುನಿಗಳಪಾದಯಾತ್ರೆ: ಶಾಲಾ ಮಕ್ಕಳಿಗೆ ಅಲ್ಲದೆ ಜೈನ ಮುನಿಗಳು, ಸಾಧು -ಸಾಧ್ವಿಯರು ನೈತಿಕತೆ, ಅಹಿಂಸೆ ಹಾಗೂ ಏಕತೆಯ ಸಂದೇಶ ಜನಸಾಮಾನ್ಯರಿಗೆ ತಿಳಿಸುತ್ತಾ ಭಾರತಾದ್ಯಂತ ಊರಿನಿಂದ ಊರಿಗೆ ಕಾಲ್ನಡಿಯಲ್ಲಿ ಸಂಚರಿಸುವಾಗ ಸೂರ್ಯಸ್ತದ ಬಳಿಕ ಸಂಚಾರ ನಿಲ್ಲಿಸುತ್ತಾರೆ. ಆದರೆ, ಆಹಾರ ಮತ್ತು ನೀರು ಸೇವನೆ ಮಾಡುವುದಿಲ್ಲ. ಈ ಸಮಯದಲ್ಲಿ ರಾತ್ರಿ ತಂಗಲು ಪ್ರಗ್ಯಾ ಕೇಂದ್ರಗಳು ಉಪಯೋಗ ವಾಗಲಿವೆ ಎಂದು ಹೇಳಿದರು.
ಅಹಿಂಸೆ ಪರ: ಪ್ರಗ್ಯಾ ಕೇಂದ್ರ ಯೋಜನೆಯ ನಿರ್ದೇಶಕ ಉತ್ತಮ್ ಬಟೆವಾರ ಮಾತನಾಡಿ, ಶಿಕ್ಷಣ, ಆರೋಗ್ಯ, ಅಹಿಂಸೆ ಪರವಾಗಿ ಜೈನ ಸಮಾಜ ಕಾರ್ಯ ನಿರ್ವಹಿಸುತ್ತಿದೆ. ಅಚಾರ್ಯ ಪ್ರಗ್ಯಾ ಕೇಂದ್ರವು ಮುಖ್ಯವಾಗಿ ಸರ್ಕಾರಿ ಶಾಲೆಗಳ ಮಕ್ಕಳ ಹಿತದೃಷ್ಟಿಯಿಂದ ನಿರ್ಮಾಣವಾಗಿದೆ. ಶಾಲೆಯಲ್ಲಿ ಶಿಕ್ಷಕರ ಸಭೆ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯಕ್ಕೆ ಉಪಯುಕ್ತವಾಗಿದೆ ಎಂದು ಹೇಳಿದರು.
ಸಹಕರಿಸುತ್ತೇವೆ: ಗ್ರಾಪಂ ಅಧ್ಯಕ್ಷೆ ಬಿ.ಟಿ.ಆಶಾ ಮಾತನಾಡಿ, ಜೈನ ಸಮಾಜದ ಸೇವೆ ಶ್ಲಾಘನೀಯ. ಹಿಂದಿನಿಂದಲೂ ಗ್ರಾಮದ ಜನತೆ ಜೈನ ಸಮಾಜದ ಕಾರ್ಯಕ್ರಮವನ್ನು ಬೆಂಬಲಿಸಿ, ಸಹಕಾರ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಜೈನ ಸಮಾಜದ ಸೇವೆಗಳಿಗೆ ಬೆನ್ನೆಲುಬಾಗಿ ಸಹಕಾರ ನೀಡುವುದಾಗಿದೆ ತಿಳಿಸಿದರು.
ಸಮಾರಂಭದಲ್ಲಿ ತಾಪಂ ಸದಸ್ಯ ನಾಗರತ್ನ, ಗ್ರಾಪಂ ಸದಸ್ಯರಾದ ಯಜಮಾನ್ ಚಿಕ್ಕಸಿದ್ದು, ಬೂದನೂರು ಸತೀಶ್, ಸಮಾಜ ಸೇವಕ ರುದ್ರಣ್ಣ, ತೇರಾಪಂತ್ ಯುವಕ್ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಕೊಠಾರಿ, ಮೈಸೂರು ವಿಭಾಗದ ಅಧ್ಯಕ್ಷ ಮಹೇಂದ್ರ ನಹರ್, ಶಿಕ್ಷಣ ಇಲಾಖೆ ಬಿಆರ್‌ಸಿ ದಾಸೇಗೌಡ, ಮುಖ್ಯ ಶಿಕ್ಷಕ ವಿಶ್ವನಾಥ್, ಶಿಕ್ಷಕಿ ಮಂಗಳಗೌರಿ ಇತರರು ಉಪಸ್ಥಿತರಿದ್ದರು.