Advertisement

ಗ್ರಾಮ ಸಡಕ್‌ ಜಾರಿಯಾಗಿಲ್ಲ ಖಡಕ್‌

12:38 PM Sep 06, 2022 | Team Udayavani |

ಧಾರವಾಡ: ಗ್ರಾಮೀಣ ಭಾರತದಲ್ಲಿನ ಸಂಪರ್ಕ ವ್ಯವಸ್ಥೆಗೆ ಅಚ್ಚುಕಟ್ಟು ಸ್ವರೂಪ ನೀಡಿದ್ದಲ್ಲದೇ, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಭಾರಿ ಅನುಕೂಲ ಕಲ್ಪಿಸಿದ್ದು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ.

Advertisement

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಆರಂಭಗೊಂಡ ಈ ಯೋಜನೆಯ ಪರಿಕಲ್ಪನೆಯನ್ನು ಕೊಟ್ಟಿದ್ದು ಕರ್ನಾಟಕದ ರೈತ ಹೋರಾಟಗಾರರು ಮತ್ತು ವಾಜಪೇಯಿ ಸರ್ಕಾರದಲ್ಲಿ ಕೃಷಿ ರಾಜ್ಯ ಸಚಿವರಾಗಿದ್ದ ಬಾಬಾಗೌಡ ಪಾಟೀಲ ಅವರು.

ಚಕ್ಕಡಿಗಳ ಮೂಲಕವೇ ಕೃಷಿ ಉತ್ಪನ್ನ ಸಾಗಿಸುವುದು ಮತ್ತು ಹೊಲಗಳಿಗೆ ಹೋಗುವುದಕ್ಕಿದ್ದ ಶತಮಾನಗಳ ಹಿಂದಿನ ಬಣದ ದಾರಿಗಳನ್ನು ರೈತರೇ ಪ್ರತಿವರ್ಷ ನವೀಕರಿಸಿಕೊಂಡು ಓಡಾಟ ನಡೆಸುತ್ತಿದ್ದು ರಸ್ತೆಗಳಿಗೆ 1998ರಲ್ಲಿ ಮುಕ್ತಿ ಸಿಕ್ಕಿತು. ಅದೇ ಸರ್ಕಾರದಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರಸ್ತೆಗಳು ಸುಧಾರಣೆ ಕಂಡವು.

2000ನೇ ಇಸ್ವಿಯಿಂದ ಒಟ್ಟು ಮೂರು ಹಂತಗಳಲ್ಲಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯ ರಸ್ತೆಗಳ ನಿರ್ಮಾಣ ಆರಂಭಗೊಂಡಿತು. ಮೊದಲ ಹಂತದಲ್ಲಿ ಅಂದರೆ 2010ರ ವರೆಗೆ ಜಿಲ್ಲೆಯಲ್ಲಿ 210 ಕಿಮೀ ರಸ್ತೆ ನಿರ್ಮಾಣವಾದರೆ, ಎರಡನೇ ಹಂತದಲ್ಲಿ ಅಂದರೆ 2020ರ ವರೆಗೆ 270 ಕಿಮೀ ರಸ್ತೆ ನಿರ್ಮಾಣವಾಯಿತು. ಇದೀಗ 2020ರಿಂದ ಈಚೆಗೆ 159 ಕಿಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಗೊಂಡಿದ್ದು ಈ ಪೈಕಿ ಈಗಾಗಲೇ ಕೆಲವಷ್ಟು ಕಡೆಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಪ್ರವಾಹದ ಹೊಡೆತ ಸುಧಾರಿಸಿಲ್ಲ: ಸತತ ಮೂರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿಯೂ ಕನಿಷ್ಟ ಎರಡು ಮೂರು ಬಾರಿ ವಿಪರೀತ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿರುವ ಗ್ರಾಮೀಣ ರಸ್ತೆಗಳ ದುಸ್ಥಿತಿಯನ್ನು ಸುಧಾರಿಸಲು ಜಿಲ್ಲಾಡಳಿತ ಮತ್ತು ಜಿಪಂನಿಂದ ಆಗುತ್ತಲೇ ಇಲ್ಲ. 800 ಕಿಮೀಗೂ ಅಧಿಕ ಗ್ರಾಮೀಣ ರಸ್ತೆಗಳು ಅಲ್ಲಲ್ಲಿ ಕುಸಿದು, ಕೊಚ್ಚಿ ಅಥವಾ ಗುಂಡಿಯಾಗಿ, ಡಾಂಬರ್‌ ಕಿತ್ತು ಹೋಗಿವೆ. ಇವುಗಳ ದುರಸ್ಥಿ ಕಾರ್ಯ ತಾತ್ಕಾಲಿಕವಾಗಿ ಆಗಿದೆಯೇ ಹೊರತು ಅಚ್ಚುಕಟ್ಟಾಗಿ ಆಗಿಲ್ಲ.

Advertisement

ಸದ್ದುಗದ್ದಲವಿಲ್ಲದೇ ತೆರೆಗೆ

ಆರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ “ನಮ್ಮ ಹೊಲ ನಮ್ಮ ರಸ್ತೆ’ ಯೋಜನೆ ಇದೀಗ ಸದ್ದುಗದ್ದಲವಿಲ್ಲದೇ ತೆರೆಗೆ ಸರಿದು ಹೋಗಿದೆ. 2016-19ರ ವರೆಗೆ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1600 ಕಿಮೀ ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣಗೊಂಡಿತ್ತು. ಧಾರವಾಡ, ನವಲಗುಂದ ಮತ್ತು ಕುಂದಗೋಳ ತಾಲೂಕಿನಲ್ಲಿ ಅತೀ ಹೆಚ್ಚು ಹೊಲದ ರಸ್ತೆಗಳು ನಿರ್ಮಾಣವಾಗಿದ್ದವು. ಇವು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ರೈತರಿಗೆ ತೀವ್ರ ಬೇಸರವಾಗಿದೆ. 2022-23ನೇ ಸಾಲಿನಲ್ಲಿ ಧಾರವಾಡ ತಾಲೂಕಿಗೆ ಸಂಬಂಧಿಸಿದಂತೆ 128 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಳ್ನಾವರ 12,ಅಣ್ಣಿಗೇರಿ 39, ಹುಬ್ಬಳ್ಳಿ 27,ಕಲಘಟಗಿ 134,ಕುಂದಗೋಳ 6, ಹಾಗೂ ನವಲಗುಂದ 75 ರಸ್ತೆಗಳ ದುರಸ್ತಿ ಕಾಮಗಾರಿ ಹಾಕಿಕೊಳ್ಳಲಾಗಿದೆ. ಶೇ.25 ಮಾತ್ರ ಅಮ್ಮಿನಬಾವಿ, ಹೆಬ್ಬಳ್ಳಿ, ಉಪ್ಪಿನಬೆಟಗೇರಿ ಮತ್ತು ಗರಗ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿನ 18 ಗ್ರಾಮಗಳಲ್ಲಿನ ನಮ್ಮ ಹೊಲ ನಮ್ಮ ರಸ್ತೆಗಳು ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಈ ನಾಲ್ಕು ಜಿಪಂಗಳಲ್ಲಿ 280 ಕಿಮೀ ರಸ್ತೆಯನ್ನು 2017-18ರ ಒಂದೇ ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ 2019ರ ಪ್ರವಾಹಕ್ಕೆ ಈ ಪೈಕಿ 150 ಕಿಮೀ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಇದನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ಪಟ್ಟಿ ಮಾಡಿಟ್ಟಿದ್ದಾರೆ. ಆದರೆ ದುರಸ್ತಿಗೆ ಕೈಗೆತ್ತಿಕೊಂಡಿದ್ದು ಶೇ.25 ಮಾತ್ರ.

ಆರಾಮ ಸಡಕ್‌ ಯೋಜನೆ

ಗ್ರಾಮ ಸಡಕ್‌ ಯೋಜನೆಗಳನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಾರೆಯೋ ಅಷ್ಟು ಗ್ರಾಮೀಣ ಜನಜೀವನ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕುತ್ತದೆ. ಆದರೆ ಕೊರೊನಾ ನೆಪ ಮತ್ತು ಹಣಕಾಸಿನ ಅಡಚಣೆಯೋ ಗೊತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಮಂಜೂರಾಗಿರುವ ರಸ್ತೆ ಅಭಿವೃದ್ಧಿ ಕಾರ್ಯ ಚುರುಕು ಪಡೆದುಕೊಂಡಿಲ್ಲ. 2019-20ರಲ್ಲಿ ಒಟ್ಟು 79 ಕಿಮೀ ರಸ್ತೆ ಮಂಜೂರಾಗಿದ್ದು ಈ ಪೈಕಿ 67 ಕಿಮೀ ರಸ್ತೆ ಪೂರ್ಣಗೊಂಡಿದೆ. 20-21ರಲ್ಲಿ 38.36 ಕಿಮೀ ರಸ್ತೆ ಮಂಜೂರಾಗಿದ್ದು, ಈ ಪೈಕಿ 5.14 ಕಿಮೀ ರಸ್ತೆ ಪೂರ್ಣಗೊಂಡಿದೆ. 21-22ನೇ ಸಾಲಿನಲ್ಲಿ 47.39 ಕಿಮೀ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮಂಜೂರಾಗಿದ್ದು, ಈ ಪೈಕಿ ಬರೀ 7.2 ಕಿಮೀ ರಸ್ತೆ ಮಾತ್ರ ನಿರ್ಮಾಣವಾಗಿದೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ.

ಗ್ರಾಮಾಂತರ ಪ್ರದೇಶದಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಸುತ್ತು ಹಾಕಿಕೊಂಡು ಓಡಾಟ ಮಾಡಬೇಕಿದೆ. ಇದನ್ನು ತಪ್ಪಿಸಲು ಈ ರಸ್ತೆಗಳು ಬಹಳ ಅನುಕೂಲವಾಗುತ್ತವೆ. ಈ ನಿಟ್ಟಿನಲ್ಲಿ ಇನ್ನಷ್ಟು ಗ್ರಾಮ ಸಡಕ್‌ ರಸ್ತೆ ನಿರ್ಮಿಸಬೇಕು. –ಶಿವಲಿಂಗಪ್ಪ ಜಡೆಣ್ಣವರ, ಹೆಬ್ಟಾಳ ರೈತ

ಸದ್ಯಕ್ಕೆ ಗ್ರಾಮೀಣ ರಸ್ತೆಗಳ ನಿರ್ಮಾಣ, ದುರಸ್ತಿ ಸೇರಿ ಎಲ್ಲದಕ್ಕೂ 70 ಕೋಟಿಗೂ ಅಧಿಕ ಅನುದಾನ ಹಂಚಿಕೆಯಾಗಿದೆ. ಆದರೆ ರಸ್ತೆಗಳ ನಿರ್ಮಾಣಕ್ಕೆ ಮಳೆ ಪುರಸೊತ್ತು ಕೊಡುತ್ತಿಲ್ಲ. ಹೀಗಾಗಿ ಮಳೆ ನಿಂತ ತಕ್ಷಣವೇ ರಸ್ತೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುವುದು. ಪ್ರತಿ ಗ್ರಾಮಕ್ಕೆ ಒಂದು ಕಿಮೀ ನೂತನ ರಸ್ತೆ ನಿರ್ಮಾಣಕ್ಕೆ ಅನುದಾನ ಬಂದಿದೆ. ಹದಗೆಟ್ಟ ರಸ್ತೆಗಳ ದುರಸ್ತಿಗೂ ಅನುದಾನ ಬಂದಿದೆ. ಮಳೆಹಾನಿಯಿಂದ ಕಿತ್ತು ಹೋಗಿರುವ ರಸ್ತೆಗಳನ್ನು ಕೂಡಲೇ ದುರಸ್ಥಿಗೊಳಿಸಲು ಯೋಜನೆ ರೂಪಿಸಲಾಗಿದೆ. –ಡಾ|ಸುರೇಶ ಇಟ್ನಾಳ, ಜಿಪಂ ಸಿಇಒ

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next