Advertisement

ಉಡುಪಿ ಜಿಲ್ಲೆ: ಮಾತೃವಂದನಾ ಯೋಜನೆ 29,274 ಗರ್ಭಿಣಿಯರಿಗೆ 11.87 ಕೋಟಿ ಬಿಡುಗಡೆ

08:41 PM Sep 01, 2021 | Team Udayavani |

ಉಡುಪಿ: ಮಹಿಳೆಯರ ಮೊದಲ ಪ್ರಸವ ಮತ್ತು ಅನಂತರದ ವಿಶ್ರಾಂತಿಗಾಗಿ ಆಂಶಿಕ ಪರಿಹಾರದ ಪ್ರೋತ್ಸಾಹದ ರೂಪದಲ್ಲಿ ಆರ್ಥಿಕ ಸೌಲಭ್ಯ ನೀಡುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಇದುವರೆಗೆ ಉಡುಪಿ ಜಿಲ್ಲೆಯ ಗರ್ಭಿಣಿಯರಿಗೆ 11.87 ಕೋ.ರೂ. ನಾಲ್ಕೂವರೆ ವರ್ಷ ಗಳಲ್ಲಿ ವಿತರಣೆಯಾಗಿದೆ.

Advertisement

2017ರಿಂದ 2021 ಆ. 31ರ ವರೆಗೆ ಜಿಲ್ಲೆಯಲ್ಲಿ ಒಟ್ಟು 29,274 ಮಂದಿ ಗರ್ಭಿಣಿಯರು ಮಾತೃವಂದನಾ ಯೋಜನೆಯಡಿ ನೊಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಪ್ರಸ್ತಕ ಸಾಲಿನಲ್ಲಿ 2,415 ಗರ್ಭಿಣಿಯರಿಗೆ ವಿವಿಧ ಹಂತದಲ್ಲಿ 68.84 ಲ.ರೂ. ಬಿಡುಗಡೆ ಮಾಡಿದ್ದು, ಫ‌ಲಾನುಭವಿಗಳ ಖಾತೆಗೆ ಜಮೆ ಆಗಿದೆ.  ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಒಟ್ಟು 82,748 ಅರ್ಜಿಗಳು ಸಲ್ಲಿಕೆ ಆಗಿವೆ.  ಅದರಲ್ಲಿ 72,079 ಅರ್ಜಿಗಳಿಗೆ ಹಣ ಪಾವತಿಯಾಗಿದೆ. ಸುಮಾರು 10,669 ಅರ್ಜಿಗಳು ವಿಲೇವಾರಿ  ಆಗುವ ವಿವಿಧ ಹಂತಗಳಲ್ಲಿ  ಬಾಕಿ ಇವೆ. ಕೆಲ ಅರ್ಜಿಗಳು ದಾಖಲೆ ಕೊರತೆಯಿಂದಾಗಿ ತಿರಸ್ಕೃತಗೊಂಡಿವೆ.

ಅರ್ಜಿ ಸಲ್ಲಿಕೆ ಹೇಗೆ? :

ಸರಕಾರಿ ನೌಕರರನ್ನು ಹೊರತುಪಡಿಸಿ ಮೊದಲನೇ ಬಾರಿ ಗರ್ಭಿಣಿಯಾದವರು ಮಾತೃ ವಂದನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಎಪಿಎಲ್‌ ಕಾರ್ಡ್‌ದಾರರೂ ಅರ್ಜಿ ಸಲ್ಲಿಸಬಹುದು. ಮೂರು ಹಂತಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಗರ್ಭ ಧರಿಸಿದ ಮೂರು ತಿಂಗಳೊಳಗೆ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ನೀಡಬೇಕು.

ಅರ್ಜಿಯನ್ನು ನವೀಕರಿಸಿದ ಆಧಾರ್‌ ಕಾರ್ಡ್‌, ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ತಾಯಿ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ (ಆಧಾರ್‌ ಜೋಡಿಸಿದ ಖಾತೆ) ಸಂಖ್ಯೆಯ ಪ್ರತಿ  ನೀಡಬೇಕು.

Advertisement

ವಿಧಾನ ಹೇಗೆ? :

ಮೊದಲನೇ ಕಂತಿನ ಅನುದಾನಕ್ಕೆ  ನಮೂನೆ -1ಎರಲ್ಲಿ ಅರ್ಜಿ ಸಲ್ಲಿಸಬೇಕು. ಈ ಸಂದರ್ಭ ಫ‌ಲಾನುಭವಿ ಹಾಗೂ ಗಂಡನ ಒಪ್ಪಿಗೆ ಪತ್ರ ಹಾಗೂ ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ, ತಾಯಿ ಮತ್ತು ಮಗುವಿನ ರಕ್ಷಣೆ ಕಾರ್ಡ್‌ ಪ್ರತಿ, ಅಧಿಕೃತ ಗುರುತಿನ ಚೀಟಿ, ಬ್ಯಾಂಕ್‌/ ಅಂಚೆ ಖಾತೆ ನೀಡಬೇಕು.

ಎರಡನೇ ಹಂತದ ಅನುದಾನಕ್ಕೆ ನಮೂನೆ 1 ಬಿನಲ್ಲಿ ಅರ್ಜಿ ಸಲ್ಲಿಸಬೇಕು. ಕನಿಷ್ಠ ಒಂದು ಆರೋಗ್ಯ ತಪಾಸಣೆ, ತಾಯಿ ಮತ್ತು ರಕ್ಷಣಾ ಕಾರ್ಡ್‌ ಪ್ರತಿ, 3ನೇ ಹಂತದ ಅನುದಾನ ಪಡೆಯಲು ನಮೂನೆ 1 ಸಿನಲ್ಲಿ ಅರ್ಜಿ  ಸಲ್ಲಿಸಬೇಕು. ಮಗುವಿನ ಜನನ ಪತ್ರ, ಚುಚ್ಚುಮದ್ದಿನ ಮಾಹಿತಿಯೊಂದಿಗೆ ತಾಯಿ ಮತ್ತು ಮಗುವಿನ ರಕ್ಷಣಾ  ಕಾರ್ಡ್‌ನೊಂದಿಗೆ ಅರ್ಜಿ ಸಲ್ಲಿಸಬೇಕು.

ಏನಿದು ಯೋಜನೆ? :

ಯೋಜನೆ ಅನ್ವಯ ಒಟ್ಟು 3 ಕಂತುಗಳಲ್ಲಿ ಗರ್ಭಿಣಿಯರಿಗೆ ಒಟ್ಟು 5,000 ರೂ. ನೀಡಲಾಗುತ್ತದೆ. ಗರ್ಭಿಣಿಯಾದ 150 ದಿನಗಳ ಬಳಿಕ ಯೋಜನೆಯಡಿ 1,000 ರೂ. ಮತ್ತು 2ನೇ ಹಂತದಲ್ಲಿ ನಿರಂತರ ತಪಾಸಣೆ ಮತ್ತು ಅಗತ್ಯ ಚುಚ್ಚುಮದ್ದುಗಳನ್ನು ಪಡೆಯಲು 2,000 ರೂ., ಮಗುವಿನ ಜನನದ ಬಳಿಕ ಮಗುವಿಗೆ ಮೊದಲ ಚುಚ್ಚುಮದ್ದು ಹಾಕಿದ ದಾಖಲೆ ಒದಗಿಸಿದರೆ 2,000 ರೂ.ಗಳನ್ನು ಮಗು ಮತ್ತು ತಾಯಿಯ ನಿರ್ವಹಣೆಗೆ ನೀಡಲಾಗುತ್ತದೆ.

ಜಿಲ್ಲೆಯಲ್ಲಿ  ಸೆ. 7ರವರೆಗೆ ಮಾತೃವಂದನ ಸಪ್ತಾಹ ನಡೆಯುತ್ತಿದೆ.  ಅರ್ಹ ಗರ್ಭಿಣಿಯರು ತಮ್ಮ ಸಮೀಪದ ಅಂಗನವಾಡಿ ಕೇಂದ್ರದಲ್ಲಿ  ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಫ‌ಲಾನುಭವಿಗಳು ನವೀಕೃತ ಆಧಾರ್‌ ಕಾರ್ಡ್‌ ಹಾಗೂ ದಾಖಲೆಯೊಂದಿಗೆ ಸಲ್ಲಿಸಬೇಕು.-ಆರ್‌. ಶೇಷಪ್ಪ , ಮಹಿಳಾ ಮತ್ತು ಮಕ್ಕಳ ಇಲಾಖೆ  ಉಪನಿರ್ದೇಶಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next