ಗಂಗಾವತಿ: ತಾಲ್ಲೂಕಿನ ಮುರಳಿ,ವೆಂಕಟಗಿರಿ ಆನೆಗೊಂದಿ ಸೇರಿದಂತೆ ವಿವಿಧೆಡೆ ಕಟಾವಿಗೆ ಬಂದ ಭತ್ತದ ಬೆಳೆಯು ಮಳೆ ಗಾಳಿ ಪರಿಣಾಮ ನೆಲಕ್ಕುರುಳಿದೆ.ಈಗಾಗಲೇ ಕೃಷಿ ಇಲಾಖೆ ಸರ್ವೆ ಕಾರ್ಯ ಮಾಡಿದ್ದರೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪ್ರಿಮಿಯಮ್ ಪಾವತಿಸಿಕೊಂಡ ಇನ್ಸೂರೆನ್ಸ್ ಕಂಪನಿಯವರು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನೆರಕ್ಕುರುಳಿದ ಭತ್ತದ ಬೆಳೆಯಲ್ಲಿ ಮೊಳಕೆ ಒಡೆದು ಇನ್ನಷ್ಟು ನಷ್ಟವಾಗುವ ಸಂಭವ ಇರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ .
ಮರಳಿ ಹೋಬಳಿಯಲ್ಲಿ ಸುಮಾರು ಐವತ್ತು ಎಕರೆ ಭತ್ತದ ಗದ್ದೆ ನೆಲಕ್ಕುರುಳಿದ್ದು ಈಗಾಗಲೇ ಕೃಷಿ ಇಲಾಖೆಯವರು ಸಮೀಕ್ಷೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪ್ರಿಮಿಯಂ ಕಟ್ಟಿಸಿಕೊಂಡ ಖಾಸಗಿ ಗ ಕಂಪನಿಯವರು ಮಾತ್ರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ .ರೈತರು ನಿತ್ಯವೂ ಟೋಲ್ ಫ್ರೀ ನಂಬರ್ ಗೆ ದೂರು ನೀಡಿದರೂ ಖಾಸಗಿ ಕಂಪೆನಿಯ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ವರದಿಯನ್ನು ಕೊಡುತ್ತಿಲ್ಲ. ಇನ್ಸೂರೆನ್ಸ್ ಕಂಪನಿಯವರು ಸ್ಥಳ ಪರಿಶೀಲನೆ ಮಾಡುವ ತನಕ ರೈತರು ಭತ್ತವನ್ನು ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಇನ್ಸೂರೆನ್ಸ್ ಕಂಪನಿಯವರು ತಾವು ಬರುವ ತನಕ ಭತ್ತ ಕಟಾವು ಮಾಡದೆ ಇರುವಂತೆ ಸೂಚನೆ ನೀಡಿದ್ದಾರೆ. ಸ್ವಯಂಪ್ರೇರಣೆಯಿಂದ ರೈತರು ಭತ್ತ ಕಟಾವು ಮಾಡಿದರೆ ಇನ್ಶೂರೆನ್ಸ್ ಹಣ ಬರುವುದಿಲ್ಲ ಎಂದು ರೈತರಿಗೆ ಇನ್ಶೂರೆನ್ಸ್ ಕಂಪನಿ ಯವರು ಹೇಳುತ್ತಿದ್ದಾರೆ ಇದರಿಂದ ರೈತರು ತೀವ್ರ ಆತಂಕಗೊಂಡಿದ್ದಾರೆ .
ಪ್ರತಿ ಎಕರೆಗೆ ರೈತರು 500-1000ರೂ ಗಳವರೆಗೆ ಪ್ರೀಮಿಯಂ ಹಣವನ್ನು ಪಾವತಿ ಮಾಡಿದ್ದಾರೆ. ಖಾಸಗಿ ಕಂಪೆನಿಯವರು ಪ್ರೀಮಿಯಂ ಪಾವತಿ ಕೊಂಡು ಪರಿಹಾರ ನೀಡುವಲ್ಲಿ ತಾತ್ಸಾರ ತೋರುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಕೊಪ್ಪಳಕ್ಕೆ ತೆರಳಿ ಖಾಸಗಿ ವಿಮಾ ಕಂಪನಿಯವರಿಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ .ಕೂಡಲೇ ಸಂಸದರು ಸಚಿವರು ಶಾಸಕರು ಖಾಸಗಿ ಕಂಪೆನಿ ಅವರಿಗೆ ಸೂಚನೆ ನೀಡಿ ಬೆಳೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮರಳಿ ಗ್ರಾಮದ ರೈತ ಶರಣಬಸಪ್ಪ ಮನವಿ ಮಾಡಿದ್ದಾರೆ .
ಗಂಗಾವತಿ ಭಾಗದಲ್ಲಿ ಗಾಳಿ ಮತ್ತು ಮಳೆಯಿಂದಾಗಿ ಭತ್ತದ ಬೆಳೆ ನಷ್ಟವಾಗಿದೆ. ಈಗಾಗಲೇ ಕೃಷಿ ಇಲಾಖೆ ಬೆಳೆ ಸಮೀಕ್ಷೆ ನಡೆಸಿದೆ ಜತೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ಸಮೀಕ್ಷೆ ಮಾಡಿ ಖಾಸಗಿ ಇನ್ಸೂರೆನ್ಸ್ ಕಂಪನಿಯವರು ಪರಿಹಾರ ವಿತರಣೆ ಮಾಡಬೇಕಿದ್ದು ಖಾಸಗಿ ಕಂಪನಿಯವರು ನಿರ್ಲಕ್ಷ್ಯಮಾಡುತ್ತಿರುವ ಬಗ್ಗೆ ರೈತರು ದೂರಿದ್ದಾರೆ. ಜಿಲ್ಲಾಧಿಕಾರಿಗಳು ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಉದಯವಾಣಿಗೆ ತಿಳಿಸಿದ್ದಾರೆ.
ಮಳೆ ಗಾಳಿಗೆ ಬೆಳೆ ನಷ್ಟ ಮಾಡಿದ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪ್ರೀಮಿಯಂ ಪಾವತಿ ಮಾಡಿದ ರೈತರಿಗೆ ಖಾಸಗಿ ಕಂಪನಿಗಳು ಸರ್ವೆ ಆಧಾರದಲ್ಲಿ ಬೆಳೆ ಪರಿಹಾರ ವಿತರಣೆ ಮಾಡಬೇಕು. ರೈತರ ದೂರಿನ ಅನ್ವಯ ಕಂಪೆನಿಯ ಅಧಿಕಾರಿಗಳಾಗಿದ್ದ ಮಾತನಾಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.