ಹೊಸದಿಲ್ಲಿ: “ನಾನು ದೇವರನ್ನು ಕಂಡಿಲ್ಲ. ಆದರೆ, ನಿಮ್ಮಲ್ಲಿ ನಾನು ದೇವರನ್ನು ನೋಡಿದೆ’.
ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ, ಡೆಹ್ರಾಡೂನ್‌ನ ನಿವಾಸಿ ದೀಪಾ ಶಾ ಎಂಬವರು ಹೀಗೆ ಹೇಳುತ್ತಿದ್ದರೆ, ಹೃದಯ ತುಂಬಿದ ಪ್ರಧಾನಿಯವರ ಕಣ್ಣಾಲಿಗಳು ತೇವಗೊಂಡ ಪ್ರಸಂಗ ರವಿವಾರ ನಡೆದಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜನರಿಕ್ ಔಷಧ ಯೋಜನೆಯ ಫಲಾನುಭವಿಗಳು ಹಾಗೂ ಈ ಔಷಧ ಮಳಿಗೆಗಳ ಮಾಲೀಕರ ಜತೆಗಿನ ಸಂವಾದ ಕಾರ್ಯಕ್ರಮವದು.
ಫಲಾನುಭವಿಗಳಲ್ಲೊಬ್ಬರಾದ ದೀಪಾ, 2011ರಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಈಗ ಜನೌಷಧ ಕೇಂದ್ರದ ಸಹಾಯದಿಂದ ಭಾಗಶಃ ಚೇತರಿಸಿಕೊಂಡಿದ್ದಾರೆ. ಸಂವಾದದಲ್ಲಿ ಮಾತನಾಡಿದ ಅವರು, “”ಜನೌಷಧಿ ಕೇಂದ್ರಗಳಿಂದ ಕಡಿಮೆ ಬೆಲೆಯಲ್ಲಿ ಔಷಧಗಳು ಸಿಕ್ಕಿದ್ದರಿಂದ ನನಗೆ ತಿಂಗಳಿಗೆ 3,500 ರೂ. ಉಳಿತಾಯ ಆಗುತ್ತಿದೆ. ಇಂಥ ಯೋಜನೆ ಜಾರಿಗೊಳಿಸಿ ದ್ದಕ್ಕೆ ನಾನು ಚಿರಋಣಿ. ಈ ಸಂವಾದದಲ್ಲಿ ನಿಮ್ಮ ಧ್ವನಿ ಕೇಳಿ ನನ್ನ ಕಾಯಿಲೆ ಮತ್ತಷ್ಟು ಮಾಯವಾಗಿದೆ” ಎಂದರು.
ಈ ಮಾತಿನಿಂದ ಗದ್ಗದಿತರಾದ ಮೋದಿ, “”ನೀವು ನಿಮ್ಮ ಇಚ್ಛಾಶಕ್ತಿಯಿಂದ ಕಾಯಿಲೆಯನ್ನು ಗೆದ್ದಿದ್ದೀರಿ. ನಿಮ್ಮ ಧೈರ್ಯವೇ ನಿಮ್ಮ ದೇವರು. ಆ ದೇವರೇ ನಿಮಗೆ ನಿಮ್ಮ ಕಾಯಿಲೆಯನ್ನು ಮೆಟ್ಟಿ ನಿಲ್ಲಲು ಬೇಕಾದ ಶಕ್ತಿ ತುಂಬಿದ್ದಾರೆ. ಇದೇ ಆತ್ಮವಿಶ್ವಾಸವನ್ನು ನಿಮ್ಮ ಜೀವನದುದ್ದಕ್ಕೂ ಕಾಪಾಡಿಕೊಂಡು ಹೋಗಬೇಕು” ಎಂದರು.
ಇದಕ್ಕೂ ಮುನ್ನ, ದೀಪಾ ಎದ್ದು ನಿಂತು ಮಾತಾಡಲು ಮುಂದಾದಾಗ ಆಕೆಯ ದೇಹಪರಿಸ್ಥಿತಿ ಗಮನಿಸಿದ ಮೋದಿ, ಅವರಿಗೆ ಕುಳಿತುಕೊಂಡೇ ಮಾತನಾಡಲು ತಿಳಿಸಿದ್ದು ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.