Advertisement

ಪಶು ಸಂಗೋಪನೆ ಇಲಾಖೆ ಮುಂಬಡ್ತಿ ಸಮಸ್ಯೆಗೆ ಮುಕ್ತಿ :ಸಚಿವ ಪ್ರಭು ಚವ್ಹಾಣ

08:01 PM Aug 08, 2020 | sudhir |

ಬೀದರ್ : ಪಶು ಸಂಗೋಪನೆ ಇಲಾಖೆಯ 66 ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಜಿಲ್ಲಾ ಉಪ ನಿರ್ದೇಶಕರನ್ನಾಗಿ ನೇಮಿಸಿ ಪದೋನ್ನತಿ ಆದೇಶ ಹೊರಡಿಸಲಾಗಿದೆ. ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲಾಖೆಯ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದ ಆದೇಶ ಹೊರಡಿಸಿರುವುದು ಸಂತಸದ ವಿಷಯ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

Advertisement

ನೆನೆಗುದಿಗೆ ಬಿದ್ದಿದ್ದ ಪಶು ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಯ ಸಮಸ್ಯೆಯ ಪರಿಹಾರಕ್ಕೆ ಹಲವು ಬಾರಿ ಪ್ರಯತ್ನ ನಡೆಸಿದ್ದೆ. ಇಲಾಖೆಯ ನೌಕರರು ಈ ವಿಷಯದಲ್ಲಿ ಕೋರ್ಟ್ ಮೆಟ್ಟಿ ಲೇರಿದ್ದರು. ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ, ಈ ವಿಷಯದಲ್ಲಿದ್ದ ಅಡೆ ತಡೆಗಳನ್ನು ಬಗೆಹರಿಸಿ, ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪಶು ಇಲಾಖೆಯ ಪುನರ್ ರಚನೆಯನ್ನು 2012ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿತ್ತು. ಇಲಾಖೆಯ ಸಚಿವರು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿ ಕಗ್ಗಂಟಾಗಿ ಉಳಿದಿತ್ತು ಇದರಿಂದಾಗಿ ಅರ್ಹ ಪಶುವೈದ್ಯರಿಗೆ ಪದೋನ್ನತಿ ನೀಡಲು ತೊಡಕುಗಳು ಇದ್ದುದರಿಂದ ಜಿಲ್ಲಾ ಆಡಳಿತವನ್ನು ಪ್ರಭಾರಿ ಅಧಿಕಾರಿಗಳು ನಿರ್ವಹಿಸುವ ಹಂತಕ್ಕೆ ತಲುಪಿತ್ತು. ಇಲಾಖಾ ಆಡಳಿತ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಇದ್ದ ತೊಡಕುಗಳನ್ನು ನಿವಾರಿಸಿ ಪದೋನ್ನತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

ಪಶು ಇಲಾಖೆ ಪುನರ್ ರಚನೆಯಾಗಿ 2017 ರಿಂದ ವೃಂದ ಮತ್ತು ನೇಮಕಾತಿ ನಿಯಮ ಅನ್ವಯವಾಗಿರುವುದರಿಂದ, ಆ ಅವಧಿಗೆ ೧೦, ೧೫, ೨೦, ೨೫ ವರ್ಷಗಳ ಸೇವೆ ಸಲ್ಲಿಸಿದ ಅರ್ಹ ಪಶುವೈದ್ಯಾಧಿಕಾರಿಗಳಿಗೆ ಕಾಲಮಿತಿ ವೇತನ ಬಡ್ತಿ ಹಾಗೂ ಇನ್ನಿತರೆ ಆರ್ಥಿಕ ಸೌಲಭ್ಯಗಳು ಪಡೆದುಕೊಳ್ಳುವಂತೆ ಪ್ರತ್ಯೇಕವಾಗಿ ಕ್ರಮಕೈಗೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ೨೦೧೭ರ ನಂತರ ಹೊಸ ವೃಂದ ನೇಮಕಾತಿ ಅನ್ವಯ ಕಾಲಮಿತಿ ಬಡ್ತಿ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಅಲ್ಲದೇ ತಾಲೂಕು ಮಟ್ಟದ ಆಡಳಿತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಜೇಷ್ಠತಾ ಆಧಾರದ ಮೇಲೆ ೩೪೫ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ಈಗಾಗಲೇ ಗುರುತಿಸಿರುವ ಪ್ರಮುಖ ಹುದ್ದೆಗಳಿಗೆ ಇಲಾಖಾ ಪುನರ್ ರಚೆನೆ ಅನ್ವಯ ಸ್ಥಾನಪಲ್ಲಟಗೊಳಿಸಲಾಗುವುದು. ಇಲಾಖೆಯಲ್ಲಿ ಏನೇ ಸಮಸ್ಯೆ ಇದ್ದರೂ ಕುಟುಂಬದ ಒಬ್ಬ ಸದಸ್ಯನಾಗಿ ಇಲಾಖೆಯ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next