Advertisement

ಅತ್ಯಾಧುನಿಕ ಶೈಲಿಯಲ್ಲಿ ರೂಪುಗೊಳ್ಳುತ್ತಿದೆ ‘ಪ್ರಭಾತ್‌’ಥಿಯೇಟರ್‌

12:34 PM Jul 19, 2018 | |

ಮಹಾನಗರ: ಕರಾವಳಿ ಜಿಲ್ಲೆಗಳಲ್ಲಿ ಒಂದೇ ಆವರಣದೊಳಗಿರುವ ಕೆ.ಎಸ್‌.ರಾವ್‌ ರಸ್ತೆಯ ‘ಸುಚಿತ್ರಾ’ ಥಿಯೇಟರ್‌ ಈಗಾಗಲೇ ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಂಡು ಚಿತ್ರಪ್ರದರ್ಶನ ಕಾಣುತ್ತಿದ್ದು, ಅದರ ಬಳಿಯಲ್ಲಿಯೇ ಇರುವ ಪ್ರಭಾತ್‌ ಥಿಯೇಟರ್‌ ಕೂಡ ಅತ್ಯಾಧುನಿಕ ಸೌಕರ್ಯದೊಂದಿಗೆ ತೆರೆದುಕೊಳ್ಳಲು ಸನ್ನದ್ಧವಾಗಿದೆ.

Advertisement

ಜಿಲ್ಲೆಯ ಯಾವುದೇ ಸಿಂಗಲ್‌ ಥಿಯೇಟರ್‌ನಲ್ಲಿ ಇಲ್ಲದಂತಹ ಹವಾ ನಿಯಂತ್ರಿತ ವ್ಯವಸ್ಥೆಯೊಂದಿಗೆ (ಎಸಿ) ಆಧುನಿಕ ಶೈಲಿಯ ಸೌಂಡ್‌ ಸಿಸ್ಟಂ, 4ಕೆ ಮಾದರಿಯ ಪ್ರೊಜೆಕ್ಟ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಸುಚಿತ್ರದಲ್ಲಿ ಈಗಾಗಲೇ ಬಳಸಿಕೊಳ್ಳಲಾಗಿದ್ದು, ಇಂತಹುದೇ ಸೌಕರ್ಯವನ್ನು ಪ್ರಭಾತ್‌ನಲ್ಲಿ ಕೂಡ ಮಾಡಲಾಗುತ್ತಿದೆ. ಕೆಲವೇ ದಿನದಲ್ಲಿ ಪ್ರಭಾತ್‌ ಥಿಯೇಟರ್‌ ಆಧುನಿಕ ಸೌಕರ್ಯಗಳೊಂದಿಗೆ ಪುನರಾರಂ ಭಗೊಳ್ಳಲಿದೆ. ಸುಚಿತ್ರಾ ಥಿಯೇಟರ್‌ ಆಧುನಿಕ ಶೈಲಿಗೆ ಬದಲಾವಣೆಗೊಳ್ಳುವ ಸಂದರ್ಭದಲ್ಲಿಯೇ ಅದರ ಪಕ್ಕದಲ್ಲೇ ಇರುವ ಪ್ರಭಾತ್‌ ಥಿಯೇಟರ್‌ ಕೂಡ ಆಧುನಿಕ ಸ್ಪರ್ಶ ಪಡೆದುಕೊಳ್ಳಲು ಆರಂಭಿಸಿತ್ತು.

ಪ್ರಭಾತ್‌ ಸಿನೆಮಾ ಮಂದಿರದ ಆಧುನೀಕರಣ ಕಾಮಗಾರಿ ಸುಮಾರು 4 ವರ್ಷಗಳ ಹಿಂದೆ ನಡೆದಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ಥಿಯೇಟರ್‌ನ ಫಾಲ್ಸ್‌ ಸೀಲಿಂಗ್‌, ಗೋಡೆಗಳು ಹಾಗೂ ಇತರ ಸ್ಥಳಗಳು ನವೀಕರಣ ಕಾಣಲೇಬೇಕಿತ್ತು. ಈ ನಿಟ್ಟಿನಲ್ಲಿ ಮತ್ತು ಥಿಯೇಟರ್‌ ಮೇಲ್ಭಾಗದ ಶೀಟು ಬದಲಾವಣೆ ಸಹಿತ ವಿವಿಧ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಇದೇ ಸಂದರ್ಭ ಥಿಯೇಟರ್‌ನ್ನು ಮಲ್ಟಿಪ್ಲೆಕ್ಸ್‌ ರೀತಿಯಲ್ಲಿ ಬದಲಾಯಿಸಲು ತೀರ್ಮಾನಿಸಿ ಇದೀಗ ಕಾಮಗಾರಿ ನಡೆಯುತ್ತಿದೆ.

‘ಪ್ರಭಾತ್‌’ ಟಾಕೀಸ್‌ನ ಬಗ್ಗೆ
ಕೆ.ಎಸ್‌.ರಾವ್‌ ರಸ್ತೆಯಲ್ಲಿನ ಈ ಕಟ್ಟಡ ಪ್ರದೇಶವನ್ನು ಬಿ.ಕೆ. ವಾಸುದೇವ ರಾವ್‌ ಅವರು ಸ್ವಾಧೀನಪಡಿಸಿಕೊಂಡು 1958ರಲ್ಲಿ ‘ಪ್ರಭಾತ್‌’ ಎಂಬ ಹೆಸರಿನ ಚಿತ್ರಮಂದಿರ ಸ್ಥಾಪಿಸಿದರು. ಹಿಂದಿ ಚಿತ್ರನಟ ದೇವಾನಂದರ ‘ಕಾಲಾಪಾನಿ’ ಎಂಬ ಹಿಂದಿ ಚಿತ್ರದ ಪ್ರಥಮ ಪ್ರದರ್ಶನದ ಮೂಲಕ ಈ ಚಿತ್ರ ಮಂದಿರ ಆರಂಭವಾಗಿತ್ತು. ಆಗಿನ ಕಾಲದ ಎರಡಾಣೆಯ ಪ್ರವೇಶ ದರದಲ್ಲಿ ಪ್ರದರ್ಶನವಾಗುತ್ತಿತ್ತು.

ಮಂಗಳೂರಿನ ಮೊದಲ ಮಾರ್ನಿಂಗ್‌ ಶೋ ಥಿಯೇಟರ್‌
ಬಿ.ಕೆ. ವಾಸುದೇವ ರಾವ್‌ ಅವರು ಕೆಲವು ವರ್ಷಗಳ ಅನಂತರ ತುಂಬೆ ಸುಬ್ಬರಾವ್‌, ನೋಡು ರಾಮಕೃಷ್ಣ ಭಟ್‌ ಕದ್ರಿ, ವಾಸುದೇವ ರಾವ್‌ ಬೆಂಗಳೂರು ಈ ಮೂವರು ಪಾಲುದಾರಿಕೆಗಾರರನ್ನು ಸೇರಿಸಿಕೊಂಡು ಮುನ್ನಡೆಸಿಕೊಂಡು ಹೋದರು. ಬಳಿಕ ವಾಸುದೇವ ರಾವ್‌ ಅವರು, ಸುಮಾರು 12 ವರ್ಷಗಳ ಕಾಲ ನಡೆಸಿಕೊಂಡು ಬಂದ ಪ್ರಭಾತ್‌ ಚಿತ್ರಮಂದಿರದ ಇಡೀ ಆವ ರಣದ ಪ್ರದೇಶವನ್ನು ಬೆಂಗಳೂರಿನ ಲಕ್ಷ್ಮೀ ನಾರಾಯಣ ಎಂಟರ್‌ಪ್ರೈಸಸ್‌ನ ಸ್ವಾದೀನಕ್ಕೆ ನೀಡಿದರು. ‘ಆನಂದ’ ಎಂಬ ಹೆಸರಿನ ಶಿವರಾಜ್‌ ಕುಮಾರ್‌ ಅವರ ಪ್ರಥಮ ಕನ್ನಡ ಚಿತ್ರ ಇಲ್ಲಿ 100 ದಿನಗಳ ಕಾಲ ಪ್ರದರ್ಶನವಾಗಿತ್ತು. ತುಳುವಿನಲ್ಲಿ ಕೆಲವು ಸಿನೆಮಾಗಳು ಇಲ್ಲಿ ಪ್ರದರ್ಶನಗೊಂಡಿವೆ. ಮಂಗಳೂರಿನ ಚಿತ್ರ ಪ್ರದರ್ಶನಗಳಲ್ಲಿ ಮ್ಯಾಟಿನಿ, ಮಾರ್ನಿಂಗ್‌ ಶೋಗಳನ್ನು ಆರಂಭಿಸಿದ ಪ್ರಥಮ ಚಿತ್ರಮಂದಿರ ಎಂಬ ಹೆಗ್ಗಳಿಕೆ ಇದಕ್ಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next