ಕನ್ನಡದಿಂದ ಸಿನಿಪಯಣ ಆರಂಭಿಸಿದ ಹೊಂಬಾಳೆ ಸಂಸ್ಥೆ ನೋಡ ನೋಡುತ್ತಲೇ ಪರಭಾಷೆಯಲ್ಲೂ ತನ್ನ ಛಾಪನ್ನು ವಿಸ್ತರಿಸಿರುವುದು ಗೊತ್ತಿರುವ ವಿಚಾರ. ಪ್ರಭಾಸ್ ನಟನೆಯ “ಸಲಾರ್’ ಮೂಲಕ ಪರಭಾಷಾ ನಟನ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಹೊಂಬಾಳೆ ಈಗ ಮತ್ತೆ ಮೂರು ಬಿಗ್ಬಜೆಟ್ ಚಿತ್ರಗಳನ್ನು ಮಾಡಲಿದೆ.
ಅದು ನಟ ಪ್ರಭಾಸ್ ಅವರಿಗೆ. ಈ ಕುರಿತು ಹೊಂಬಾಳೆ ಅಧಿಕೃತ ಘೋಷಣೆ ಮಾಡಿದೆ. ಈಗಾಗಲೇ ಸಲಾರ್ 1 ಬಿಡುಗಡೆ ಆಗಿದೆ. ಪಾರ್ಟ್ 2 ಕೆಲಸಗಳು ನಡೆಯುತ್ತಿವೆ. ಇದೀಗ ಇದೇ ಪ್ರಭಾಸ್ ಜತೆಗೆ ಇನ್ನೂ ಎರಡು ಸಿನಿಮಾ ಮಾಡಲು ಹೊಂಬಾಳೆ ನಿರ್ಧರಿಸಿದೆ. ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಈ ಸಹಯೋಗದ ಕುರಿತು ಪ್ರತಿಕ್ರಿಯಿಸಿದ್ದಾರೆ.
“ಹೊಂಬಾಳೆ ಫಿಲಂಸ್ ಮೂಲಕ ನಾವು ಗಡಿಯನ್ನು ಮೀರಿದ ಕಥೆ ಹೇಳುವ ಶಕ್ತಿಯನ್ನು ನಂಬುತ್ತೇವೆ. ಪ್ರಭಾಸ್ ಅವರೊಂದಿಗಿನ ನಮ್ಮ ಸಹಯೋಗವು ಮತ್ತೂಂದು ಹೊಸ ಹೆಜ್ಜೆ. ಅದು ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಮನರಂಜನೆಯನ್ನು ನೀಡುತ್ತದೆ’ ಎಂದಿದ್ದಾರೆ.
ಸಲಾರ್-2 ತಡವಾಗುತ್ತಿರುವುದನ್ನು ನೋಡಿದ ಸಿನಿಮಂದಿ ಪ್ರಭಾಸ್ ಜೊತೆ ಹೊಂಬಾಳೆ ಮತ್ತೆ ಸಿನಿಮಾ ಮಾಡಲ್ಲ ಎಂಬಂತೆ ಮಾತನಾಡಲಾರಂಭಿಸಿದರು. ಅದರ ಬೆನ್ನಲ್ಲೇ ಹೊಂಬಾಳೆ ಪ್ರಭಾಸ್ ಜೊತೆ ಮೂರು ಸಿನಿಮಾಗಳಿಗೆ ಕೈ ಜೋಡಿಸಿದೆ. ಸದ್ಯ ಪ್ರಭಾಸ್ “ರಾಜಾ ಸಾಬ್’ ಸಿನಿಮಾದಲ್ಲಿ ಬಿಝಿಯಾಗಿದ್ದು, ಆ ಬಳಿಕ “ಸ್ಪಿರಿಟ್’ ಮುಗಿಸಲಿದ್ದಾರೆ. ಆ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ “ಸಲಾರ್-2′ ಆರಂಭವಾಗಲಿದೆ. ಸದ್ಯ ಹೊಂಬಾಳೆ ನಿರ್ಮಾಣದಲ್ಲಿ “ಕಾಂತಾರ-1′ ಚಿತ್ರೀಕರಣ ನಡೆಯುತ್ತಿದೆ.