Advertisement

ಕೋರೆಯಂತಹ ರಾಜಕಾರಣಿಗಳು ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ?

08:39 PM Feb 02, 2021 | Team Udayavani |

ಬೆಳಗಾವಿ: ದ್ರಾವಿಡ-ಆರ್ಯ ಸಂಸ್ಕೃತಿ ಸಂಗಮ ಬೆಳಗಾವಿ. ಬೆಳಗಾವಿಯಲ್ಲಿ ಡಾ. ಪ್ರಭಾಕರ ಕೋರೆ ಅಂತಹ ಮೇರು ರಾಜಕಾರಣಿಗಳು ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗದುಗಿನ ತೋಂಟದಾರ್ಯ ಜಗದ್ಗುರು ಶ್ರೀ ಡಾ.ಸಿದ್ದರಾಮೇಶ್ವರ ಸ್ವಾಮೀಜಿ ಗುಡುಗಿದರು.

Advertisement

ಇಲ್ಲಿಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಪ್ರಭಾಕರ ಕೋರೆ ಅವರಿಗೆ ಕೆಂಗಲ್‌ ಹನುಮಂತಯ್ಯ ಸಂಸ್ಕೃತಿ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ಭ್ರಮೆಯಲ್ಲಿರುವ ಮಹಾರಾಷ್ಟ್ರ ಸರ್ಕಾರ, ಅಂತಹ ಕೂಗಾಟದಲ್ಲಿ  ಬೆಳಗಾವಿಯಲ್ಲಿ ತೊಡಗಿರುವ ಕೆಲ ನಾಡವಿರೋಧಿ ಸಂಘಟನೆಗಳು ಹಗಲುಗನಸು ಬಿಡಬೇಕು. ಅದು ಏಳೇಳು ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ, ಅಭಿವೃದ್ಧಿ ವಿಷಯದಲ್ಲಿ ಬೆಳಗಾವಿ ತಾತ್ಸಾರ ಆಗಲು ಇಲ್ಲಿನ ರಾಜಕಾರಣಿಗಳಲ್ಲಿ ಇರುವ ಒಡಕು ಹಾಗೂ ಗಟ್ಟಿ ನಾಯಕತ್ವದ ಕೊರತೆ ಕಾರಣ. ಅಭಿವೃದ್ಧಿ ಮತ್ತು ನಾಡಿನ ಹಿತಕ್ಕಾಗಿ ಇಲ್ಲಿನ ರಾಜಕಾರಣಿಗಳು ಒಂದಾಗಬೇಕಿದೆ. ಅದಕ್ಕೆ ನಾಯಕತ್ವದ ಕೊರತೆ ಇದೆ. ಬೆಳಗಾವಿ ಜನರ ದನಿಗೆ ಶಕ್ತಿ ಕೊಡಲು ಸರ್ವಪಕ್ಷಗಳ ನಾಯಕನ ಅಗತ್ಯವಿದೆ. ಪಕ್ಷಭೇದ ಹೊರತಾಗಿ ಬೆಳಗಾವಿ ಅಭಿವೃದ್ಧಿಗೆ ಡಾ. ಪ್ರಭಾಕರ ಕೋರೆ ನಾಯಕತ್ವ ವಹಿಸಬೇಕು ಎಂದರು.

ಡಾ. ಪ್ರಭಾಕರ ಕೋರೆಯವರು ಬೆಳಗಾವಿ ಮತ್ತು ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಮರಾಠಿ ಸಂಸ್ಕೃತಿಯ ಕೊಂಡಿಯಾಗಿ ಬೆಳೆದವರು. ಕನ್ನಡ ಮತ್ತು ಇಲ್ಲಿನ ಸಂಸ್ಕೃತಿಯ ದುಪ್ಪಟ್ಟು ಬೆಳವಣಿಗೆ ಮತ್ತು ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಡಾ. ಕೋರೆ ಮತ್ತು ಡಾ.ಸಿದ್ಧರಾಮ ಸ್ವಾಮೀಜಿ ಕಾರಣ ಎಂದರು. ಪ್ರಶಸ್ತಿ ಸ್ವೀಕರಿಸಿ ಡಾ. ಪ್ರಭಾಕರ ಕೋರೆ ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲ ಕನ್ನಡಿಗರ ಮನಸ್ಸು ಒಂದಾಗಬೇಕಿದೆ. ಮೂವತ್ತು ಜಿಲ್ಲೆಗಳ ಸಂಸ್ಕೃತಿ ಮತ್ತು ಸ್ವಾಭಿಮಾನ ಒಂದಾದಾಗ ಕರ್ನಾಟಕ ಏಕೀಕರಣದ ಆಶಯ ಇನ್ನೂ ಗಟ್ಟಿಗೊಳ್ಳುತ್ತದೆ ಎಂದರು.

ಇದನ್ನೂ ಓದಿ :ವೃಂದ-ನೇಮಕಾತಿ ಕರಡು ನಿಯಮ ತಿದ್ದುಪಡಿಗೆ ವಿರೋಧಿ ಡಿಸಿಎಂ ಕಾರಜೋಳಗೆ ಮನವಿ

Advertisement

ಕಸಾಪ ಅಧ್ಯಕ್ಷ ಡಾ. ಮನು  ಬಳಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ,ಅಭಿವೃದ್ಧಿಗಾಗಿ ಪ್ರತಿಭಟನೆಗಳು ಎಷ್ಟೇ ಉಗ್ರವಾಗಿ ನಮ್ಮ ರಾಜ್ಯದಲ್ಲಿ ನಡೆಯಲಿ. ಆದರೆ ರಾಜ್ಯದ ಒಡಕಿನ ಮಾತುಗಳು ಎಂದೂ ಯಾವ ಭಾಗದಿಂದಲೂ ಕೇಳಿ ಬರಬಾರದು. ಕರ್ನಾಟಕ ಏಕೀಕರಣಕ್ಕೆ ಹಲವಾರು ಮಹನೀಯರು ದುಡಿದು ಅಳಿದಿದ್ದಾರೆ. ಇಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಸರ್ಕಾರಗಳು ಸಂಪೂರ್ಣ ನಿರ್ಲಕ್ಷಿಸಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next