Advertisement

ಕೋರೆ ಉತ್ತರ ಕರ್ನಾಟಕ-ಕನ್ನಡದ ಧ್ವನಿ

04:24 PM Oct 16, 2022 | Team Udayavani |

ಬೆಳಗಾವಿ: ಉತ್ತರ ಕರ್ನಾಟಕ ಹಾಗೂ ಕನ್ನಡದ ಧ್ವನಿಯಾಗಿ ಡಾ|ಪ್ರಭಾಕರ ಕೋರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ಎಲ್ಲ ಜನರ ಪ್ರೀತಿ-ವಿಶ್ವಾಸ ಗಳಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

Advertisement

ನಗರದಲ್ಲಿ ಶನಿವಾರ ನಡೆದ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಪ್ತರ್ಷಿಗಳು ಕೆಎಲ್‌ಇ ಸಂಸ್ಥೆಯನ್ನು ಬೆಳೆಸಿ ಇತಿಹಾಸದಲ್ಲಿ ಹೆಸರು ಉಳಿಸಿದ್ದಾರೋ ಅದೇ ರೀತಿ ಪ್ರಭಾಕರ ಕೋರೆ ಹಾಗೂ ಕೆಎಲ್‌ಇ ಹೆಸರು ಸೂರ್ಯ, ಚಂದ್ರ ಇರುವವರೆಗೂ ಮಿಂಚಲಿದೆ. ಜಗತ್ತಿನಲ್ಲಿರುವ ಶೈಕ್ಷಣಿಕ, ವೈದ್ಯಕೀಯ, ಕೃಷಿ ಸೇರಿದಂತೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಕೆಎಲ್‌ಇ ಸಂಸ್ಥೆಯಲ್ಲಿ ಸಿಗುತ್ತಿದೆ. ಹೊಸತನ ಮಾಡುವ ಹುರುಪು-ಹುಮ್ಮಸ್ಸು, ಹೊಸತನ ಹುಡುಕುವ ಹವ್ಯಾಸ ಕೋರೆಗಿರುವುದರಿಂದ ಸಂಸ್ಥೆ ಪ್ರಗತಿ ಆಗುತ್ತಿದೆ ಎಂದರು.

ಕೆಎಲ್‌ಇ ಸಂಸ್ಥೆ ಬೆಳೆಯುತ್ತಿದ್ದಂತೆ ಇದನ್ನು ನೋಡಿ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಶಿಕ್ಷಣ ಸಂಸ್ಥೆಗಳು ಬೆಳೆಯಲಾರಂಭಿಸಿದವು. ಕೋರೆ ಅವರ ಶ್ರಮ, ಕಾರ್ಯವೈಖರಿ ಮೂಲಕ ಕೆಎಲ್‌ಇ ಸಂಸ್ಥೆ ಎಲ್ಲ ಕಡೆಗೂ ಬೆಳೆಯುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಇವರು ಮಹತ್ತರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ದೊಡ್ಡ ನಾಯಕರಾಗ್ತಿದ್ರು: ಕೆಎಲ್‌ಇ ಸಂಸ್ಥೆ ಕಟ್ಟಲು ಎಷ್ಟು ಶ್ರಮ, ಸಮಯ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತು. ಇಷ್ಟು ಸಮಯವನ್ನು ರಾಜಕೀಯ ರಂಗಕ್ಕೆ ಕೊಟ್ಟಿದ್ದರೆ ಕೋರೆ ದೊಡ್ಡಮಟ್ಟದ ನಾಯಕರಾಗುತ್ತಿದ್ದರು. ಆದರೆ ಈ ಭಾಗದ ಜನರಿಗಾಗಿ, ವಿಶೇಷವಾಗಿ ಬಡವರು, ಗ್ರಾಮೀಣ ಭಾಗದವರಿಗೆ ಶಿಕ್ಷಣ ನೀಡುವುದು ಮುಖ್ಯ ಎಂಬುದು ಕೋರೆ ಅವರಿಗೆ ಗೊತ್ತು. ತಾನೊಬ್ಬ ನಾಯಕನಾಗಿ ಬೆಳೆಯುವುದಕ್ಕಿಂತ ಹಲವರನ್ನು ನಾಯಕರನ್ನಾಗಿ ಬೆಳೆಸಲು ತಮ್ಮ ರಾಜಕೀಯ ಜೀವನದ ಶ್ರೇಯೋಭಿವೃದ್ಧಿಯನ್ನು ತ್ಯಾಗ ಮಾಡಿ ಕೆಎಲ್‌ಇ ಸಂಸ್ಥೆಯನ್ನು ಕೋರೆ ಕಟ್ಟಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಕೋರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆ ಬೆಳೆಸಿದ್ದಾರೆ. ಹಲವಾರು ಟೀಕೆ-ಅವಮಾನದ ಮಾತುಗಳನ್ನು ದಿಟ್ಟತನದಿಂದ ಎದುರಿಸಿದ ಕೋರೆ ಬುದ್ಧಿವಂತಿಕೆಯಿಂದ, ಸರ್ವ ಸ್ವತಂತ್ರ ಕೆಎಲ್‌ಇ ಸಂಸ್ಥೆಯನ್ನು ವಿಶ್ವವಿದ್ಯಾಲಯವಾಗಿ ಬೆಳೆಸಿದ್ದಾರೆ ಎಂದರು.

Advertisement

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋರೆಯವರು ನಾಲ್ಕು ದಶಕದಿಂದ ಕೆಎಲ್‌ಇ ಸಂಸ್ಥೆ ಬೆಳೆಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಸಮಾಜ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ರೀತಿ ಕೆಎಲ್‌ಇ ಸಂಸ್ಥೆ ಇದನ್ನು ಅನುಷ್ಠಾನಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಮಾತಿನಲ್ಲಿ, ಕೃತಿಯಲ್ಲಿ ಏಕರೂಪ ಇದ್ದವರು ಸತು³ರುಷರು ಎಂಬ ಮಾತಿದೆ. ಇದಕ್ಕೆ ಕೋರೆ ಉತ್ತಮ ಉದಾಹರಣೆಯಾಗಿದ್ದಾರೆ. ದೇಶ-ವಿದೇಶದಲ್ಲೂ ಕನ್ನಡದ ಧ್ವನಿಯನ್ನು ಕೆಎಲ್‌ಇ ಮೂಲಕ ಕೇಳಿಸುತ್ತಿದ್ದಾರೆ ಎಂದರು.

ಗೋವಾ ಮುಖ್ಯಮಂತ್ರಿ ಡಾ|ಪ್ರಮೋದ ಸಾವಂತ ಮಾತನಾಡಿ, ಬೆಳಗಾವಿ-ಗೋವಾ ಮಧ್ಯೆ ಅವಿನಾಭಾವ ಸಂಬಂಧ ಇದೆ. ಕೋರೆ ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಬೆಳಗಾವಿ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ್ದಾರೆ. ಕೆಎಲ್‌ಇ ಸಂಸ್ಥೆಯಲ್ಲಿ ಗೋವಾ ಸೇರಿದಂತೆ ದೇಶದ ಅನೇಕ ವಿದ್ಯಾರ್ಥಿಗಳು ಕಲಿತಿದ್ದು ಹೆಮ್ಮೆ ಎನಿಸುತ್ತಿದೆ. ನವಭಾರತ ನಿರ್ಮಾಣಕ್ಕೆ ಮೋದಿ ಸಂಕಲ್ಪಕ್ಕೆ ಕೋರೆ ಕೈಜೋಡಿಸುತ್ತಿದ್ದಾರೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕೋರೆ ಬಡವರ ಪಾಲಿನ ದೇವರು. ಬೆಳಗಾವಿಗೆ ಅವರ ಸಾಧನೆ ಅನನ್ಯ. ಅವರ ಸಾಧನೆಗಳನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಬ್ಯಾಂಕಿಂಗ್‌, ಸಕ್ಕರೆ ಕಾರ್ಖಾನೆ, ಶಿಕ್ಷಣ, ವೈದ್ಯಕೀಯ ಸೇವೆಯಿಂದ ಅವರ ಕೀರ್ತಿ ಬಾನೆತ್ತರಕ್ಕೆ ಹಾರುತ್ತಿದೆ ಎಂದರು.

ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ರಾಧಾಕೃಷ್ಣ ವಿ.ಕೆ.ಪಾಟೀಲ ಮಾತನಾಡಿ, ಡಾ|ಪ್ರಭಾಕರ ಕೋರೆ ಮಾಡಿದ ಸಾಧನೆ ಅನುಪಮವಾಗಿದೆ. 40 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಸಂಸ್ಥೆಯನ್ನು ಪ್ರಾಮಾಣಿಕ, ದಕ್ಷತೆಯಿಂದ ಕಟ್ಟಿದ್ದಾರೆ. ದೇಶದ ಹಲವೆಡೆ ಶಾಲೆ-ಕಾಲೇಜು, ಆಸ್ಪತ್ರೆಗಳನ್ನು ನಿರ್ಮಿಸಿ ಜನ ಸೇವೆ ಮಾಡುತ್ತಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಕೆಎಲ್‌ಇ ಸಂಸ್ಥೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಸಾಧನೆ ಮಾಡಲು ಕೋರೆ ಕಾರಣೀಕರ್ತರು. ಈ ಭಾಗದ ಸೇವೆಗಾಗಿ ಕೋರೆ ದೀರ್ಘಾಯುಷಿಗಳಾಗಿ ಬೆಳೆಯಲಿ ಎಂದರು.

ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ನಾಲ್ಕು ದಶಕದಿಂದಲೂ ಪ್ರಭಾಕರ ಕೋರೆ ಅವರೊಂದಿಗೆ ಒಡನಾಟ ಇದೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದ್ದಾರೆ. ಕೆಎಲ್‌ಇ ಸಂಸ್ಥೆ ಹೊಸ ಕ್ರಾಂತಿ ಮಾಡಿದ್ದು, ಇಲ್ಲಿರುವ ಅಂಗ ಸಂಸ್ಥೆಗಳಷ್ಟು ದೇಶದ ಯಾವ ಭಾಗದಲ್ಲೂ ಇಲ್ಲ ಎಂದರು.

ಕೋರೆ ಅವರು 40 ವರ್ಷಗಳ ಕಾಲ ಅಧಿಕಾರವಧಿಯಲ್ಲಿಯ ಕಾರ್ಯ ಬಗ್ಗೆ ಮೆಲಕು ಹಾಕಿದರು. ಪಕ್ಷಾತೀತವಾಗಿ ಸಹಾಯ ಮಾಡಿದವರನ್ನು ನೆನೆದರು. ಇನ್ಮುಂದೆ ಸಂಸ್ಥೆಯನ್ನು ಗೋವಾದಲ್ಲೂ ಬೆಳೆಸಲಾಗುವುದು ಎಂದರು.

ಪ್ರಭಾಕರ ಕೋರೆ ಅಭಿನಂದನ ಸಂಪುಟ “ಅನನ್ಯ ಸಾಧಕ’ ಕೃತಿ ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರದಿಂದ ಪ್ರಭಾಕರ ಕೋರೆ, ಪತ್ನಿ ಆಶಾತಾಯಿ ಕೋರೆ ಅವರನ್ನು ಸತ್ಕರಿಸಲಾಯಿತು.

ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಮುರುಗೇಶ ನಿರಾಣಿ, ಬಿ.ಸಿ.ನಾಗೇಶ, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಗೋವಾ ಸಚಿವರಾದ ಚರ್ಚಿಲ್‌ ಅಲೆಮಾವೋ, ವಿನಯ ತೆಂಡೂಲ್ಕರ್‌, ಮಹಾರಾಷ್ಟ್ರದ ಪ್ರಕಾಶ ಅವಾಡೆ, ಸೊಲ್ಲಾಪುರ ಸಂಸದ ಶ್ರೀ ಜಯಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಸಿದ್ದೇಶ, ಶಿವಕುಮಾರ ಉದಾಸಿ, ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ್‌ ಬೆನಕೆ, ವಿಧಾನ ಪರಿಷತ್‌ ಸದಸ್ಯರಾದ ಲಕ್ಷ್ಮಣ ಸವದಿ, ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ನಗರ ಪೊಲೀಸ್‌ ಆಯುಕ್ತ ಡಾ| ಎಂ.ಬಿ. ಬೋರಲಿಂಗಯ್ಯ ಇನ್ನಿತರರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿದರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಸ್ವಾಗತಿಸಿದರು.

ಕೋರೆ ಬುಲೆಟ್‌ ಮ್ಯಾನ್‌

ಡಾ|ಪ್ರಭಾಕರ ಕೋರೆ ಅವರಿಗೆ ಬುಲೆಟ್‌ ಮ್ಯಾನ್‌ ಎನ್ನುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು. ಕೋರೆ ಬುಲೆಟ್‌ (ಗುಂಡು) ಹೊಟ್ಟೆಯಲ್ಲಿ ಇಟ್ಟುಕೊಂಡು ಜೀರ್ಣಿಸಿಕೊಂಡು ಆರಾಮವಾಗಿ ಓಡಾಡಿಕೊಂಡು ಮಾದರಿ ಜೀವನ ಸಾಗಿಸುತ್ತಿದ್ದಾರೆ. ಅವರ ಒಳಗಡೆ ಎಷ್ಟು ನೋವು, ಶಕ್ತಿ ಇರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಪೈಸೆ ಪೈಸೆ ಕೂಡಿಸಿ ಸಂಸ್ಥೆ ಬೆಳೆಸಿದರು

ಕೋರೆ ಅವರ ಬಳಿ ಸೀಟು ಕೇಳಲು ಹೋದರೆ ಶುಲ್ಕ ಕಡಿಮೆ ಮಾಡಲ್ಲ. ಏನಾದರೂ ಕೇಳಿದರೆ, ನನ್ನದೇನೂ ಇಲ್ಲ, ಎಲ್ಲವೂ ಸಂಸ್ಥೆಯದಿದೆ ಎನ್ನುತ್ತಾರೆ. ಬೇರೆ ವಿಷಯದಲ್ಲಿ ದಾನ ಮಾಡುತ್ತಾರೆ. ಸಂಸ್ಥೆಗೆ ಮಾತ್ರ ನಷ್ಟ ಮಾಡಲ್ಲ. ಹೀಗೆ ಪೈಸೆ ಪೈಸೆ ಹಣ ಕೂಡಿಸಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಕೋರೆಗೆ ಕವಟಗಿಮಠ ಸ್ವಾಮಿ ಸಾಥ್‌ ಇದ್ದಾರೆ. ನಾವು ಸಿಟ್ಟಾದರೆ ಕವಟಗಿಮಠ ಬಂದು ಸಮಾಧಾನ ಮಾಡುತ್ತಾರೆ. ಈ ಸ್ವಾಮಿಗಳು(ಕವಟಗಿಮಠ) ಬಹಳ ಡೇಂಜರ್‌ ಎನ್ನುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು. ಕೋರೆ-ಕವಟಗಿಮಠ ಇಬ್ಬರೂ ಸೊಸೈಟಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೋರೆಗೆ ಪುಸ್ತಕ- ಗ್ರಂಥಗಳ ತುಲಾಭಾರ

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ|ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪುಸ್ತಕ-ಗ್ರಂಥಗಳ ವಿಶೇಷ ತುಲಾಭಾರ ನೆರವೇರಿಸಲಾಯಿತು. ವೇದಿಕೆ ಮೇಲಿದ್ದ ಅನೇಕ ಗಣ್ಯರು ತಕ್ಕಡಿಯಲ್ಲಿ ಒಂದು ಕಡೆಗೆ ಕೋರೆ ಇನ್ನೊಂದು ಕಡೆಗೆ ಪುಸ್ತಕ, ಗ್ರಂಥಗಳನ್ನಿಟ್ಟು ತುಲಾಭಾರ ನೆರವೇರಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next