ಶಿರಸಿ: ಇಂದು ಪ್ರತಿಯೊಬ್ಬರ ಮನೆಯನ್ನೂ ಹಿಂದೂ ಮನೆಗಳಾಗಿ ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೇವೆ. ಇಂಥ ಸವಾಲುಗಳಿಗೆ ಉತ್ತರ ಕೊಡಲು ಸಂಘವಿದೆ ಎಂದು ಆರ್‌ಎಸ್‌ಎಸ್ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ, ವಾಗ್ಮಿ ಕಲ್ಲಡ್ಕ ಪ್ರಭಾಕರ ಭಟ್ಟ ಹೇಳಿದರು.
ತಾಲೂಕಿನ ಗೋಳಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸ್ವಯಂ ಸೇವಕದ ಸಂಘದ ಉದ್ಯೋಗಿ ಪ್ರಾಥಮಿಕ ಶಿûಾ ವರ್ಗದಲ್ಲಿ ನಾಗರಿಕ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದು ಅನೇಕ ಸಂಕಷ್ಟಗಳು ಮನೆಯೊಳಗೇ ಬಂದಿದೆ. ಹೊರಗಡೆ ಆರ್‌ಎಸ್‌ಎಸ್ ಪ್ರತಿಯೊಬ್ಬರೂ ತಾನೊಬ್ಬ ಹಿಂದೂ ಅನ್ನುವಂತೆ ಮಾಡುತ್ತಿದೆ. ಒಳಗಡೆ ನಾವೂ ಹಿಂದೂ ಮನೆ ಮಾಡಬೇಕಿದೆ ಎಂದರು.
ಭಾರತದ ಇತಿಹಾಸದ ಯಾವುದೇ ಸಂದರ್ಭದಲ್ಲಿಯೂ ಕಾಂಗ್ರೆಸ್ ಹಿಂದೂ ಪರವಾಗಿ ಬರಲಿಲ್ಲ. ಕಾಂಗ್ರೆಸ್ ಬ್ರಿಟೀಷರ ಒಡೆದು ಆಳುವ ನೀತಿಗೆ ತಲೆ ಬಾಗಿದೆ. ತುಷ್ಟೀಕರಣ ನೀತಿ ಇಂದಿನದಲ್ಲ ಎಂದರು. ಕಾಂಗ್ರೆಸ್ ಹಿಂದೂ ಬೆಂಬಲಕ್ಕೆ ಬರಲಿಲ್ಲ ಎಂಬ ಕಾರಣದಿಂದ ಆರ್‌ಎಸ್‌ಎಸ್ ಪರವಾಗಿ ಹಿಂದೂಗಳು ಬಂದಿದ್ದಾರೆ. ಹಿಂದೂ ರಕ್ಷಕ ಸಂಘವಾಗಿದೆ ಎಂದರು.
ಸಂಘ ಬೆಳೆಯುತ್ತಿದೆ ಎಂಬ ಕಾರಣಕ್ಕೆ ಗಾಂಧೀಜಿ ಹತ್ಯೆ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಬಹಿಷ್ಕಾರ ಮಾಡಿತ್ತು. ಗುರೂಜಿ ಅವರ ಮೇಲೂ ಕೊಲೆ ಆರೋಪ ಮಾಡಿದರು ಎಂದೂ ವಿವರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 95 ವರ್ಷ. ಮುಂದಿನ ಐವತ್ತು, ನೂರು ವರ್ಷದ ಕಲ್ಪನೆಯ ಜೊತೆಗೆ ಯೋಚಿಸಿ ಕೇಶವ ಹೆಗಡೇವಾರ್ ಅವರು ಅಂದು ಸ್ಥಾಪಿಸಿದವರು. ವಂದೇ ಮಾತರಂ ಎಂದರೆ ತಾಯಿಗೆ ನಮಸ್ಕಾರ. ಆದರೆ, ಈಗ ಅದರರ್ಥ ಬೇರೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲೂ ಹೆಗಡೆವಾರ್ ಸೇರಿದ್ದರು. ಕಾಂಗ್ರೆಸ್ ಎಂದರೆ ಇವತ್ತಿನ ಕಾಂಗ್ರೆಸ್ ಅಲ್ಲ. ಹೆಗಡೇವಾರ್ ಕಾಲದಲ್ಲಿ ಅದೊಂದು ಆಂದೋಲನವಾಗಿತ್ತು. ಅಂದು ಕೂಡ ಹಿಂದೂ ಅಂದರೆ ಆವತ್ತೂ ಕೋಮುವಾದಿ ಭಾವನೆ ಇತ್ತು. ಅಂಥ ಕಾಲದಲ್ಲಿ ವಿಜಯದಶಮಿ ದಿನದಂದು ಹಿಂದೂ ಸಂಘಟನೆ ಆರಂಭಿಸಿದರು ಎಂದರು.
ಇಂದು ಕೋಟ್ಯಾಂತರ ಜನರು ಹಿಂದೂ ಎಂದರು. 95 ವರ್ಷದಲ್ಲಿ ದೊಡ್ಡ ಬದಲಾವಣೆ ಆಗಿದೆ. 45 ದೇಶದಲ್ಲಿ ಹಿಂದೂ ಸಂಘಟನೆ ಇದೆ ಎಂದರು.
ಸಂಘದಿಂದ ವಿದ್ಯಾರ್ಥಿ ಪರಿಷತ್ತು, ವನವಾಸಿ ಕಲ್ಯಾಣ, ಭಾರತೀಯ ಜನ ಸಂಘ, ವಿಶ್ವ ಹಿಂದೂ ಪರಿಷತ್ ಸೇರಿದಂತೆ 40ಕ್ಕೂ ಅಧಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಎಂದರು. ಸಂಘದಿಂದ ಪ್ರತಿಯೊಬ್ಬನೂ ತಾನು ಹಿಂದೂ ಎನ್ನುವಂತೆ ಮಾಡುವುದಾಗಿದೆ. ಇಲ್ಲವಾದಲ್ಲಿ ಹಿಂದೂ ಈ ದೇಶದಲ್ಲಿ ಬದುಕುವುದು ಕಷ್ಟ. ಸಂಘ ಎಂದರೆ ಇದೊಂದು ಯಂತ್ರದಂತೆ. ಶುದ್ಧ ರಕ್ತ ದೇಹದ ಭಾಗಕ್ಕೆ ಕಳಿಸುವುದು ಹೃದಯದ ಕಾರ್ಯ ಎಂದರು. ದೇಶದ ಹಲವಡೆ ರೋಮನ್ ಚಿಂತನೆ ಪ್ರಾರಂಭವಾಗಿದೆ. ಮಿನಿ ಪಾಕಿಸ್ತಾನ ಇದೆ. ಇದರಿಂದ ಒಂದೊಂದು ಹಿಂದೂ ಮನೆ ಆಗಬೇಕಿದೆ ಎಂದೂ ಹೇಳಿದರು. ಸಾಮಾಜಿಕ ಕಾರ್ಯಕರ್ತ ರಾಜು ಗಾಂವಕರ ಇದ್ದರು. ಬೌದ್ಧಿಕ ಪ್ರಮುಖ ಶ್ರೀಧರ ಹಿರೇಹದ್ದ ನಿರ್ವಹಿಸಿದರು.