Advertisement

ರೈತರಿಗೆ 10 -6 ಗಂಟೆಯವರೆಗೆ ವಿದ್ಯುತ್‌: ಶಿಫಾರಸು

02:50 PM Mar 03, 2018 | Team Udayavani |

ಮಂಗಳೂರು: ರಾಜ್ಯದ ರೈತರಿಗೆ ಸಮಯವಲ್ಲದ ಸಮಯದಲ್ಲಿ ವಿದ್ಯುತ್‌ ನೀಡುವ ಕಾರಣದಿಂದ ಹಲವಾರು ಸಮಸ್ಯೆಗಳು ಉಂಟಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ದಿನದ ಹಗಲು ಹೊತ್ತು ವಿದ್ಯುತ್‌ ನೀಡಿ ರಾತ್ರಿ ಪೂರೈಕೆ ಸ್ಥಗಿತಗೊಳಿಸುವಂತೆ ಈ ವರ್ಷದ ಆದೇಶದಲ್ಲಿ ಸೇರ್ಪಡೆಗೊಳಿಸಿ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ತಿಳಿಸಿದ್ದಾರೆ.

Advertisement

ಮಂಗಳೂರಿನ ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿದ್ಯುತ್‌ ದರ ಪರಿಷ್ಕರಣೆಗೆ ಸಂಬಂಧಿಸಿ ಸಾರ್ವಜನಿಕ ಅಹವಾಲು ವಿಚಾರಣೆಯ ವೇಳೆ ಅವರು ಈ ವಿಷಯ ತಿಳಿಸಿದರು. ರೈತರಿಗೆ ರಾತ್ರಿ ಸಮಯದಲ್ಲಿ ವಿದ್ಯುತ್‌ ನೀಡುವ ಕಾರಣದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ವ್ಯಕ್ತವಾಗುತ್ತಿವೆ. ಕೆಲವು ದುರ್ಘ‌ಟನೆಗಳು ನಡೆದ ಬಗ್ಗೆಯೂ ಮಾಹಿತಿ ಇದೆ. ಹೀಗಾಗಿ ಹಗಲು ಹೊತ್ತು ವಿದ್ಯುತ್‌ ನೀಡುವಂತೆ ಕಳೆದ ಮೆಸ್ಕಾಂ ಸಭೆಯಲ್ಲೂ ವಿಷಯ ಪ್ರಸ್ತಾವವಾಗಿತ್ತು. ಈ ಬಾರಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ವಿದ್ಯುತ್‌ ದರ ಏರಿಕೆ ಅನಿವಾರ್ಯ: ಮೆಸ್ಕಾಂ
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಅವರು ಮಾತನಾಡಿ, ವಿದ್ಯುತ್‌ ಖರೀದಿ ಪ್ರಮಾಣ ಹಾಗೂ ವಿದ್ಯುತ್‌ ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ. ಹಣದುಬ್ಬರ, ಹೊಸದಾಗಿ ಸಿಬಂದಿ ನೇಮಕ ಸಲುವಾಗಿ ನಿರ್ವಹಣ ವೆಚ್ಚದಲ್ಲಿ ಏರಿಕೆಯಾಗಿದೆ. ಅಲ್ಲದೆ ಬಡ್ಡಿ ಹಾಗೂ ಇತರ ಆರ್ಥಿಕ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ವಿದ್ಯುತ್‌ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕು. ಹೆಚ್ಚಿನ ವಿದ್ಯುತ್‌ ಖರೀದಿ ಹಾಗೂ ವಿದ್ಯುತ್‌ ಜಾಲದ ಉತ್ಕೃಷ್ಟ ನಿರ್ವಹಣೆ ಮತ್ತು ಗ್ರಾಹಕ ಸ್ನೇಹಿ ಚಟುವಟಿಕೆ ಹಮ್ಮಿಕೊಳ್ಳಲು ಯೂನಿಟ್‌ಗೆ 1.23 ರೂ.ಗಳಷ್ಟು ವಿದ್ಯುತ್‌ ದರವನ್ನು ಏರಿಸುವಂತೆ ಮನವಿ ಮಾಡಿದರು.

ವಿದ್ಯುತ್‌ ದರ ಏರಿಕೆ ಅಗತ್ಯವಿಲ್ಲ: ಗ್ರಾಹಕರು
ಸಾರ್ವಜನಿಕರ ಪರವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಅನೇಕರು ಪ್ರತಿಕ್ರಿಯಿಸಿ ನಷ್ಟ, ಕೊರತೆಗೆ ಸಮರ್ಪಕ ರೀತಿಯಲ್ಲಿ ಕಡಿವಾಣ ಹಾಕಿದರೆ ದರ ಏರಿಕೆಯ ಅಗತ್ಯವೇ ಬರುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ವಿದ್ಯುತ್‌ ದರ ಏರಿಕೆ ಮಾಡಬಾರದು ಎಂದು ಆಗ್ರಹಿಸಿದರು.

ಶ್ರೀಧರ್‌ ಪ್ರಭು ಮಾತನಾಡಿ, 2012ರಲ್ಲಿ ಮೆಸ್ಕಾಂ ಆಡಳಿತ ನಿರ್ದೇಶಕರು ಖರ್ಚನ್ನು ವೈಜ್ಞಾನಿಕವಾಗಿ ಕಡಿಮೆಗೊಳಿಸುವುದಾಗಿ ಹೇಳಿದ್ದರು. ಆದರೆ ಆ ಅಧ್ಯಯನ ಏನಾಗಿದೆ ಎಂಬ ಬಗ್ಗೆ ತಿಳಿದಿಲ್ಲ. ದೀನ್‌ದಯಾಳ್‌ ಉಪಾಧ್ಯಾಯ ಯೋಜನೆಗೆ ಸಂಬಂಧಿಸಿ ಮೆಸ್ಕಾಂ ಆಯೋಗಕ್ಕೆ ಸಲ್ಲಿಸಿದ ವರದಿ ಹಾಗೂ ಸಿಎಜಿಗೆ ನೀಡಿದ ವರದಿ ಹೋಲಿಕೆಯಾಗುತ್ತಿಲ್ಲ, ಗೊಂದಲ ಆಗುತ್ತಿದೆ. ಯಾವ ವರದಿ ಸರಿ ಎಂಬ ಬಗ್ಗೆ ಕೂಲಂಕಷ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

Advertisement

ದರ ಏರಿಕೆ ಅಲ್ಲ; ಇರುವ ದರ ಕಡಿತ ಮಾಡಿ
ಸಣ್ಣ ಕೈಗಾರಿಕೆಗಳಿಗೆ ಪ್ರತೀ ಯೂನಿಟ್‌ಗೆ 50 ಪೈಸೆ ಏರಿಕೆ ಮಾಡಬೇಕೆಂದು ಮೆಸ್ಕಾಂ ಬೇಡಿಕೆ ಮಂಡಿಸಿದೆ. ಆದರೆ ಕೈಗಾರಿಕೆಗಳ ಪರಿಸ್ಥಿತಿಯನ್ನು ಗಮನಿಸಿ ಈಗಿನದ್ದಕ್ಕಿಂತ 1 ರೂ.ನಷ್ಟು ದರವನ್ನು ಮೆಸ್ಕಾಂ ಕಡಿತ ಮಾಡಬೇಕು ಎಂದು ನಝೀರ್‌ ಮನವಿ ಮಾಡಿದರು. ಕೈಗಾರಿಕೆಗಳಿಂದ ವಿದ್ಯುತ್‌ ಬೇಡಿಕೆ ಪ್ರಮಾಣ ಕಡಿಮೆ ಆಗುತ್ತಿದೆ. ಪೂರೈಕೆ ನಷ್ಟ ಕಡಿಮೆ ಮಾಡಿದಾಗ, ವಿದ್ಯುತ್‌ ದರ ಕಡಿಮೆ ಆಗಲಿದೆ ಎಂದು ಗೌರವ್‌ ಹೆಗ್ಡೆ ಸಲಹೆ ನೀಡಿದರು. ಭಾರತೀಯ ಕಿಸಾನ್‌ ಸಂಘದ ಪರಮೇಶ್ವರಪ್ಪ ಮಾತನಾಡಿ, ರೈತರನ್ನು ಮೆಸ್ಕಾಂ ಕಡೆಗಣಿಸಿದೆ, ಗುಣಮಟ್ಟದ ವಿದ್ಯುತ್‌ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ದರ ಇಳಿಸಿ ಎಂದು ಶೋಬನ್‌ ಬಾಬು ಆಗ್ರಹಿಸಿದರೆ, ಕಿಸಾನ್‌ ಸಂಘದ ಸೂರ್ಯ ನಾರಾಯಣ ಮಾತನಾಡಿ, ನಿಯಮಿತವಾಗಿ ವಿದ್ಯುತ್‌ ಒದಗಿಸಿ ಎಂದು ಆಗ್ರಹಿಸಿದರು. ಸತ್ಯನಾರಾಯಣ ಉಡುಪ ಮಾತನಾಡಿ, ಮೆಸ್ಕಾಂ ನಷ್ಟ ಹಾಗೂ ಕೊರತೆಯನ್ನು ಸರಿದೂಗಿಸಿದರೆ ದರ ಏರಿಕೆ ಅಗತ್ಯವಿಲ್ಲ ಎಂದು ಒತ್ತಾಯಿಸಿದರು. ಕುದಿ ಶ್ರೀನಿವಾಸ ಭಟ್‌ ಮಾತನಾಡಿ, ಮೆಸ್ಕಾಂ ಮಂಗಳೂರು- ಉಡುಪಿಯನ್ನು ಪ್ರತ್ಯೇಕಗೊಳಿಸಬೇಕೆಂದು ಮನವಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next