Advertisement

ಮೂರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ; ಮತಗಟ್ಟೆ ಸಮೀಕ್ಷೆಗಳ ವರದಿಯಲ್ಲಿ ಉಲ್ಲೇಖ

02:13 AM Mar 08, 2022 | Team Udayavani |

ಹೊಸದಿಲ್ಲಿ: ಇಡೀ ದೇಶದ ಜನರು ಕಾತುರದಿಂದ ಕಾಯುತ್ತಿರುವ, ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಅದರಂತೆ, ಉತ್ತರ ಪ್ರದೇಶ, ಮಣಿಪುರ, ಉತ್ತರಾಖಾಂಡದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿದ್ದು, ಗೋವಾದಲ್ಲಿ ಬಹುಮತ ಪಡೆಯುಲ್ಲಿ ವಿಫ‌ಲವಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಆಪ್‌) ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ.

Advertisement

ಸೋಮವಾರದಂದು, ಈ ಚುನಾವಣೆಯ ಕಟ್ಟಕಡೆಯ ಭಾಗವಾಗಿದ್ದ ಉತ್ತರ ಪ್ರದೇಶದ 7ನೇ ಸುತ್ತಿನ ಮತದಾನ ಪೂರ್ಣಗೊಂಡಿತು. ಸಂಜೆಯ ಹೊತ್ತಿಗೆ ಶೇ. 54.18ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅದರ ಬೆನ್ನಲ್ಲೇ ಹಲವಾರು ಚುನಾವಣ ಸಮೀûಾ ಸಂಸ್ಥೆಗಳು ತಾವು ನಡೆಸಿರುವ ಮತಗಟ್ಟೆ ಸಮೀಕ್ಷೆಗಳ ಫ‌ಲಿತಾಂಶವನ್ನು ಪ್ರಕಟಿಸಿವೆ.

ಉ.ಪ್ರ.ದಲ್ಲಿ ಮತ್ತೊಮ್ಮೆ ಯೋಗಿ ದರ್ಬಾರು
ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದಲ್ಲಿ ಈ ಬಾರಿ ಕಣಕ್ಕಿಳಿದಿರುವ ಬಿಜೆಪಿ, ಅಧಿಕಾರದಲ್ಲಿ ಮುಂದುವರಿಯಲಿವೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ.

ಖ್ಯಾತ ಸಮೀಕ್ಷಾ ಸಂಸ್ಥೆಯಾದ ಟುಡೇಸ್‌ ಚಾಣಕ್ಯ, ಬಿಜೆಪಿಗೆ 294 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿದೆ. ಇನ್ನುಳಿದಂತೆ, ಕಾಂಗ್ರೆಸ್‌ 1, ಎಸ್‌ಪಿ ಹಾಗೂ ಮಿತ್ರಪಕ್ಷಗಳು 105, ಬಿಎಸ್‌ಪಿ 2 ಹಾಗೂ ಇತರ 1 ಸ್ಥಾನ ಗೆಲ್ಲಲಿವೆ ಎಂದು ಹೇಳಿದೆ. ಅಂತೆಯೇ, ಜನ್‌ ಕೀ ಬಾತ್‌, ಟೈಮ್ಸ್‌ ನೌ-ವೆಟೋ, ಇಂಡಿಯಾ ಟುಡೇ-ಆ್ಯಕ್ಸಿಸ್‌, ನ್ಯೂಸ್‌ ಎಕ್ಸ್‌, ರಿಪಬ್ಲಿಕ್‌ ಟಿವಿ- ಪಿ ವೋಟರ್‌ ಸಮೀಕ್ಷಾ ವರದಿಗಳೆಲ್ಲವೂ ಬಿಜೆಪಿಗೆ 220ಕ್ಕಿಂತ ಹೆಚ್ಚು ಸ್ಥಾನಗಳು ಬರುವುದಾಗಿ ಹೇಳಿವೆ. ಕಾಂಗ್ರೆಸ್‌ಗೆ ಶೂನ್ಯದಿಂದ 103 ಸ್ಥಾನ ಸಿಗಲಿವೆ. ಸಮಾಜವಾದಿ ಪಕ್ಷ 71ರಿಂದ 165 ಸ್ಥಾನ ಗೆಲ್ಲಲಿದೆ, ಬಿಎಸ್‌ಪಿ 2ರಿಂದ 19 ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಪುಷ್ಕರ್‌ ಧಮಿ ಸಾಧನೆ
ಉತ್ತರಾಖಂಡ ವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿವೆ. ಬಹುಮತಕ್ಕೆ 36 ಸ್ಥಾನ ಬೇಕಿದೆ. ಟುಡೇಸ್‌ ಚಾಣಕ್ಯ, ಸಿಎನ್‌ಎನ್‌-ನ್ಯೂಸ್‌ 18, ಟೈಮ್ಸ್‌ ನೌ- ಆ್ಯಕ್ಸಿಸ್‌, ಪಿ ವೋಟರ್‌ ಸಮೀಕ್ಷೆಗಳು ಬಿಜೆಪಿಯು 37ರಿಂದ 46 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಹೇಳಿವೆ. ಇದೇ ಮೊದಲ ಬಾರಿಗೆ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಿದ ಸಿಎಂ ಪುಷ್ಕರ್‌ ಸಿಂಗ್‌ ಧಮಿಯವರಿಗೆ ಇದು ಸಮಾಧಾನ ತರಬಹುದು.

Advertisement

ಪಂಜಾಬ್‌ನಲ್ಲಿ ಆಪ್‌ಬಂಪರ್‌ ಗೆಲುವು
ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ, ಅಚ್ಚರಿಯ ಹಾಗೂ ಅದ್ಭುತದ ಫ‌ಲಿತಾಂಶ ನೀಡಲಿದೆ ಎಲ್ಲಾ ಸಮೀಕ್ಷೆಗಳು ತಿಳಿಸಿವೆ. ಟುಡೇಸ್‌ ಚಾಣಕ್ಯ ಸಮೀಕ್ಷೆಯಲ್ಲಿ ಆ ಪಕ್ಷಕ್ಕೆ 100 ಸ್ಥಾನ ಬರಲಿದೆ ಎಂದು ಹೇಳಲಾಗಿದ್ದರೆ, ಸಿಎನ್‌ಎನ್‌ ಸಮೀಕ್ಷೆಯಲ್ಲಿ 52ರಿಂದ 61, ಟೌಮ್ಸ್‌ ನೌ ಸಮೀಕ್ಷೆಯಲ್ಲಿ 70, ಇಂಡಿಯಾ ಟುಡೇ ಸಮೀಕ್ಷೆಯಲ್ಲಿ 79ರಿಂದ 90, ನ್ಯೂಸ್‌ ಎಕ್ಸ್‌ ಸಮೀಕ್ಷೆಯಲ್ಲಿ 56ರಿಂದ 61, ಪಿ ಮಾರ್ಕ್‌ ಸಮೀಕ್ಷೆಯಲ್ಲಿ 62ರಿಂದ 70 ಹಾಗೂ ಎಬಿಪಿ – ಸಿ ವೋಟರ್‌ ಸಮೀಕ್ಷೆಯಲ್ಲಿ 51ರಿಂದ 61 ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಪಂಜಾಬ್‌ ವಿಧಾನಸಭೆಯಲ್ಲಿ ಒಟ್ಟು 117 ಸ್ಥಾನಗಳಿದ್ದು, ಬಹುಮತಕ್ಕೆ 59 ಸ್ಥಾನ ಬೇಕಿದೆ.

ಮಣಿಪುರದಲ್ಲಿ ಬಿಜೆಪಿಗೆ ಸಮಾಧಾನಕರ ಗೆಲುವು
ಒಟ್ಟು 60 ಸ್ಥಾನಗಳಿರುವ ಮಣಿಪುರ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳ ಅವಶ್ಯಕತೆಯಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಆ ಪಕ್ಷಕ್ಕೆ 26ರಿಂದ 31 ಸ್ಥಾನಗಳು ಸಿಗಲಿವೆ. ಕಾಂಗ್ರೆಸ್‌ಗೆ 6ರಿಂದ 17 ಸ್ಥಾನ, ಸ್ಥಳೀಯ ಪಕ್ಷವಾದ ಎನ್‌ಪಿಪಿಗೆ 2ರಿಂದ 10 ಸ್ಥಾನ ಹಾಗೂ ಇತರರಿಗೆ 5ರಿಂದ 22 ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ.

ಗೋವಾದಲ್ಲಿ ಅತಂತ್ರ
ಗೋವಾದಲ್ಲಿ ಬಿಜೆಪಿಯು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ ಎನ್ನಲಾಗಿದೆ. ಅಲ್ಲಿ 40 ಸ್ಥಾನಗಳಿದ್ದು, ಬಹುಮತಕ್ಕೆ 21 ಸ್ಥಾನ ಬೇಕಿದೆ. ಸಿಎನ್‌ಎನ್‌ ವರದಿಯಲ್ಲಿ ಮಾತ್ರ ಆ ಪಕ್ಷಕ್ಕೆ 16ರಿಂದ 22 ಸ್ಥಾನ ಸಿಗುತ್ತದೆ ಎಂದು ಹೇಳಲಾಗಿದೆ. ಆದರೆ, ಇನ್ನುಳಿದ ಯಾವುದೇ ಸಮೀಕ್ಷೆಗಳಲ್ಲಿ ಅಲ್ಲಿ ಬಿಜೆಪಿಗೆ ಬಹುಮತಕ್ಕಿಂತ ಕಡಿಮೆ ಸ್ಥಾನ ಸಿಗಲಿವೆ ಎಂದು ಹೇಳಲಾಗಿದೆ. ಉತ್ತರಾಖಂಡ ಹಾಗೂ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಕಾಂಗ್ರೆಸ್‌ ಪಕ್ಷ, ತನ್ನ ಹಿರಿಯ ನಾಯಕರನ್ನು ಆ ರಾಜ್ಯಗಳಿಗೆ ವೀಕ್ಷಕರನ್ನಾಗಿ ಕಳುಹಿಸಲು ನಿರ್ಧರಿಸಿದೆ.

ಸಮೀಕ್ಷೆಗಳು ಏನು ಬೇಕಾದರೂ ಹೇಳಲಿ, ಈ ಬಾರಿ ಉತ್ತರ ಪ್ರದೇಶದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬರೋದು ನಾವೇ.
-ಅಖಿಲೇಶ್ ಯಾದವ್‌, ಎಸ್‌ಪಿ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next