Advertisement

ವಿದ್ಯುತ್‌ ಕೊರತೆ: ಪ್ರಶ್ನೆಗಳಿಗೆ ಸರಕಾರವೇ ಉತ್ತರಿಸಬೇಕು

09:28 AM Oct 21, 2018 | Team Udayavani |

ಪಡುಬಿದ್ರಿ: ರಾಜ್ಯದಲ್ಲಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಕಷ್ಟಿದ್ದರೂ ಆಗುತ್ತಿರುವ ಉತ್ಪಾದನೆ ಮಾತ್ರ ತೀರಾ ಕಡಿಮೆ ಏಕೆ ಎನ್ನುವುದು ಯಕ್ಷ ಪ್ರಶ್ನೆ. ಸರಕಾರ ತನ್ನ ನೀತಿಗಳಲ್ಲಿ ಬದಲಾವಣೆ ತಂದು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಿಸಿ, ಪೂರ್ಣ ಪ್ರಮಾಣದಲ್ಲಿ ಖರೀದಿಸಿದರೆ ಸ್ವಾವಲಂಬಿಯಾಗುವುದು ಕಷ್ಟವೇನಲ್ಲ.

Advertisement

ರಾಜ್ಯ ಇಂಧನ ಇಲಾಖೆಯ ಆಗಸ್ಟ್‌ 2018ರ ಮಾಹಿತಿಯಂತೆ ನಮ್ಮಲ್ಲಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್‌ ಉತ್ಪಾದನೆಯ ಒಟ್ಟು ಸಾಮರ್ಥ್ಯ 86,792 ಮೆ.ವ್ಯಾ. ಆದರೆ ಇದರಲ್ಲಿ 12,580.20 ಮೆ.ವ್ಯಾ.ಗಳನ್ನಷ್ಟೇ ಉತ್ಪಾದಿಸುತ್ತಿದ್ದೇವೆ. 

ಕೊರತೆ ಕಾಡುತ್ತಿದೆ
ಸಾಂಪ್ರದಾಯಿಕವಾದ ಜಲ, ಅಣು, ಕಲ್ಲಿದ್ದಲು ಇತ್ಯಾದಿ ಹಾಗೂ ಪವನ, ಸೌರಶಕ್ತಿ ಇತ್ಯಾದಿ ಪುನರ್‌ ನವೀಕರಿಸಬಹುದಾದ ಮೂಲಗಳಿಂದ ಸೇರಿಸಿ ರಾಜ್ಯದಲ್ಲಿ ಈಗ ಒಟ್ಟು 27,240 ಮೆ.ವ್ಯಾ. ವಿದ್ಯುತ್‌ ಮಾತ್ರವೇ ಉತ್ಪಾದಿಸಲಾಗುತ್ತಿದೆ. ಆದರೆ ಬೇಸಗೆಯ ಅವಧಿಯಲ್ಲಿ ಶೇ.6ರಿಂದ 10ರಷ್ಟು ಕೊರತೆಯಾಗುತ್ತದೆ. ಒಟ್ಟಾರೆ ರಾಜ್ಯದ ವಿದ್ಯುತ್ಛಕ್ತಿ ಕೊರತೆಯು ಶೇ. 3 ಇರುವುದಾಗಿ ರಾಜ್ಯ ಇಂಧನ ಖಾತೆಯ ಈಚೆಗಿನ ವರದಿಗಳು ಹೇಳುತ್ತಿವೆ. 

ಅಧಿಕಾರಿಗಳಲ್ಲಿ ಉತ್ತರವಿಲ್ಲ
ರಾಜ್ಯದಲ್ಲಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್‌ ಉತ್ಪಾದನೆಯ ಒಟ್ಟು ಸಾಮರ್ಥ್ಯ 86,792 ಮೆ.ವ್ಯಾ. ನಿಯೋಜನೆಗೊಳಿಸಲಾದ ಸಾಮರ್ಥ್ಯ 32,532.17 ಮೆ.ವ್ಯಾ. ಆದರೆ ಉತ್ಪಾದನೆ 12,580.20 ಮೆ.ವ್ಯಾ. ಮಾತ್ರ. ಹೀಗಿರುವಾಗ, ವಿದ್ಯುತ್ಛಕ್ತಿ ಕೊರತೆಯನ್ನು ನೀಗಿಸಲು ನವೀಕರಿಸಬಹುದಾದ ಮೂಲಗಳ ಪೂರ್ಣ ಸಾಮರ್ಥ್ಯವನ್ನೇಕೆ ಬಳಸಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಇಂಧನ ಖಾತೆಯ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಕೆಲವು ಕೋ ಜನರೇಶನ್‌ ಪ್ಲಾಂಟ್‌ಗಳಲ್ಲಿ ಕಬ್ಬಿನ ಜಲ್ಲೆಯಿಂದ ವಿದ್ಯುತ್‌ ಉತ್ಪಾದನೆ ಅಕ್ಟೋಬರ್‌ ಬಳಿಕ ಆರಂಭವಾಗುವ ನಿರೀಕ್ಷೆ ಇದೆ. ಪುನರ್‌ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆ ಸಾಮರ್ಥ್ಯವು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ ಎಂಬುದು ಇಂಧನ ಇಲಾಖೆಯ ಸಬೂಬು. 

ಪವನ ಮತ್ತು ಸೌರಶಕ್ತಿ ಅವಗಣನೆ
ರಾಜ್ಯದಲ್ಲಿ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯ ಮೂಲಗಳಾದ ಸೌರ ಶಕ್ತಿ ಮತ್ತು ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಆವಶ್ಯಕತೆ ಇದೆ. ಪವನ ವಿದ್ಯುತ್‌ ಉತ್ಪಾದನೆಯ 55,857 ಮೆ.ವ್ಯಾ. ಸಾಮರ್ಥ್ಯ ಇದ್ದರೆ ನಿಯೋಜಿತ ಸಾಮರ್ಥ್ಯ 17,911.67. ಆದರೆ ಉತ್ಪಾದನೆ 4,731.26 ಮೆ.ವ್ಯಾ. ಮಾತ್ರ. ಹಾಗೆಯೇ ಸೌರ ವಿದ್ಯುತ್‌ ಸಾಮರ್ಥ್ಯ 24,700 ಮೆ.ವ್ಯಾ. ಇದೆ, ನಿಯೋಜಿತ 9,015.12 ಮೆ.ವ್ಯಾ. ಆದರೆ ಉತ್ಪಾದನೆ ಕೇವಲ 5,188.29 ಮೆ.ವ್ಯಾ. ಈ ಎರಡೂ ಮೂಲಗಳಿಂದ ಉತ್ಪಾದನೆ, ಖರೀದಿಗೆ ಹೆಚ್ಚು ಒತ್ತು ನೀಡಬೇಕಿದೆ. 

Advertisement

ಸ್ವಾವಲಂಬಿಯಾಗಬಲ್ಲೆವು
ರಾಜ್ಯವು ಒಟ್ಟು 24,700 ಮೆ.ವ್ಯಾ. ಸೌರ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದೆ. ಆದರೆ ರಾಜ್ಯ ಇಂಧನ ಖಾತೆಯು ಕೇವಲ 5,188.29 ಮೆ.ವ್ಯಾ. ವಿದ್ಯುತ್ತನ್ನಷ್ಟೇ ಖರೀದಿ ಮಾಡುತ್ತಿದೆ. 17,911.67 ಮೆ.ವ್ಯಾ. ಉತ್ಪಾದನೆ ಸಾಮರ್ಥ್ಯದ ಗಾಳಿಯಂತ್ರ ಘಟಕಗಳಿಂದ ಕೇವಲ 4,731.26 ಮೆ.ವ್ಯಾ. ಮಾತ್ರ ಖರೀದಿಸಲಾಗುತ್ತಿದೆ. 
ಈ ಕ್ಷೇತ್ರಗಳಲ್ಲಿ ಮತ್ತಷ್ಟು ಹೊಂದಾಣಿಕೆಯ ಅನಿವಾರ್ಯತೆ ಅದೆ. ಇದು ಸಫಲವಾದಲ್ಲಿ ರಾಜ್ಯ ವಿದ್ಯುತ್ಛಕ್ತಿಯಲ್ಲಿ ಸ್ವಾವಲಂಬಿಯಾಗುವುದಲ್ಲದೆ ಹೊರ ರಾಜ್ಯಗಳಿಗೂ ವಿದ್ಯುತ್‌ ವಿಕ್ರಯಿಸಬಹು ದಾಗಿದೆ. ಆದರೆ ಆಳುವವರಿಗೆ ಬದ್ಧತೆ ಇರಬೇಕಷ್ಟೆ.

ಪವನ ಮತ್ತು ಸೌರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಪೂರ್ಣ ಬಳಕೆಯ ವಿಚಾರ ಸರಕಾರದ ಕಾರ್ಯನೀತಿ ಧೋರಣೆಗೆ ಸಂಬಂಧಿಸಿದೆ. ಇದರ ಬಗ್ಗೆ ಸರಕಾರದ ಮಟ್ಟದಲ್ಲಿಯೇ ತೀರ್ಮಾನವಾಗಬೇಕಾಗಿದೆ.
ವಿಶ್ವನಾಥ್‌ ಹಿರೇಮಠ, ಇಂಧನ ಇಲಾಖೆ ಉಪ ಕಾರ್ಯದರ್ಶಿ 

ಆರಾಮ 

Advertisement

Udayavani is now on Telegram. Click here to join our channel and stay updated with the latest news.

Next