ಬೆಂಗಳೂರು: ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹೆಣಗಾಡುತ್ತಿರುವ ಬೆಂಗಳೂರು ಜಲಮಂಡಳಿಗೆ ಈಗ ವಿದ್ಯುತ್ ದರ ಏರಿಕೆಯಿಂದಾಗಿ ಮತ್ತಷ್ಟು ಹೊರೆಯಾದಂತಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಇತ್ತೀಚೆಗಷ್ಟೇ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಇದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಪಾವತಿಸುವ ವಿದ್ಯುತ್ ಬಿಲ್ ಶುಲ್ಕವೂ 1 ಕೋಟಿ ರೂ.ನಷ್ಟು ಹೆಚ್ಚಾಗಿದೆ. ವಿದ್ಯುತ್ ಬಿಲ್‌ನ ಹೆಚ್ಚುವರಿ ಹೊರೆಯ ಆರ್ಥಿಕ ಹೊಂದಾಣಿಕೆಯ ಬಗ್ಗೆ ಚಿಂತೆ ಶುರುವಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗ್ರಾಹಕರಿಂದ ಪ್ರತಿ ತಿಂಗಳು ಅಂದಾಜು 110 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸುತ್ತದೆ.
ಈ ಮೊತ್ತದಲ್ಲಿ 30 ಕೋಟಿ ರೂ.ಗೂ ಅಧಿಕ ಹಣ ಕಾರ್ಯಾಚರಣೆಯ ವೆಚ್ಚಗಳಿಗೆ ಮತ್ತು 12 ಕೋಟಿ ರೂ. ವೇತನ ಪಾವತಿಸಲು ಹೋಗುತ್ತದೆ. ವಾರ್ಷಿಕ ಶುಲ್ಕ ಸಂಗ್ರಹಣೆಯಲ್ಲಿ ಶೇ.66ರಷ್ಟು ಪಾಲು ಕೇವಲ ವಿದ್ಯುತ್ ಬಿಲ್ ಪಾವತಿಗೆ ವ್ಯಯಿಸುತ್ತದೆ. ಹೀಗಾಗಿ ಇತರೆ ವೆಚ್ಚಗಳನ್ನು ಸರಿದೂಗಿಸುವುದು ಕಷ್ಟವಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿದ್ಯುತ್ ಶುಲ್ಕ ಹೆಚ್ಚಳವನ್ನು ಸರಿದೂಗಿಸಿಕೊಂಡು ಹೋಗುವುದೇ ಒಂದು ಸವಾಲಾಗಿ ಪರಿಣಿಮಿಸಿದೆ ಎಂದು ಹೇಳುತ್ತಾರೆ.
71 ಕೋಟಿ ರೂ.ವಿದ್ಯುತ್ ಶುಲ್ಕ ಪಾವತಿ: ಬೆಂಗಳೂರು ಜಲಮಂಡಳಿ ಈ ಹಿಂದೆ ಸುಮಾರು 70 ಕೋಟಿ.ರೂ.ಅನ್ನು ವಿದ್ಯುತ್ ಶುಲ್ಕಕ್ಕಾಗಿ ವಿನಿಯೋಗ ಮಾಡುತ್ತಿತ್ತು. ಇದೀಗ 1ಕೋಟಿ ರೂ.ಹೆಚ್ಚಳ ಶುಲ್ಕವನ್ನು ನೀಡಬೇಕಾಗಿದೆ. ನೀರಿನ ಬಿಲ್ ಏರಿಕೆ ಮಾಡದಿರುವ ಹಿನ್ನೆಲೆಯಲ್ಲಿ ಈಗಿರುವ ಅನುದಾನದಲ್ಲೇ ಹೊಂದಾಣಿಕೆ ಮಾಡಿಕೊಂಡು ಬೆಸ್ಕಾಂಗೆ ವಿದ್ಯುತ್ ಶುಲ್ಕ ನೀಡುತ್ತಿದೆ ಎಂದು ಜಲಮಂಡಳಿ ಹಿರಿಯ ಎಂಜಿನಿಯರ್ ವೊಬ್ಬರು ಮಾಹಿತಿ ನೀಡಿದ್ದಾರೆ.
ಜಲಮಂಡಳಿಗೆ 1 ಕೋಟಿ ರೂ. ಪ್ರತಿ ತಿಂಗಳ ಹೆಚ್ಚುವರಿ ವಿದ್ಯುತ್ ಬಿಲ್ ಜತೆಗೆ ನೀರಿನ ಪೈಪ್‌ಲೈನ್ ಗಳ ನಿಯಮಿತ ನಿರ್ವಹಣೆ ಮತ್ತು ಸಿಬ್ಬಂದಿ ವೇತನದಂತಹ ಖರ್ಚು ವೆಚ್ಚವನ್ನು ನೋಡಿಕೊಳ್ಳಬೇಕಾಗಿದೆ ಎಂದು ಹೇಳುತ್ತಾರೆ. ಈ ಹಿಂದೆ ಆರ್ಥಿಕ ಒತ್ತಡಕ್ಕೆ ಸಿಲುಕ್ಕಿದ್ದ ಬೆಂಗಳೂರು ಜಲಮಂಡಳಿ 2014ರಲ್ಲಿ ಶೇ.20ರಷ್ಟು ನೀರಿನ ದರ ಪರಿಷ್ಕರಣೆ ಮಾಡಿತ್ತು. ಅದಾದ ಬಳಿಕೆ ಇಲ್ಲಿಯವೆಗೂ ನೀರಿನ ಬೆಲೆ ಏರಿಕೆ ಮಾಡಿಲ್ಲ. ನೀರನ್ನು ಪಂಪ್ ಮಾಡಲು, ಶುದ್ಧಿಕರಿಸಲು, ನೀರು ಸರಬರಾಜು ಮಾಡಲು ವಿದ್ಯುತ್ ಅಗತ್ಯ ಇರುವ ಹಿನ್ನೆಲೆಯಲ್ಲಿ ವಿದ್ಯುತ್ ಶುಲ್ಕಕ್ಕಾಗಿಯೇ ಹೆಚ್ಚಿನ ಹಣವನ್ನು ಮೀಸಲಿಡಬೇಕಾದ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಹಿಂದೆ ಜಲಮಂಡಳಿ ನೀರಿನ ದರ ಪರಿಷ್ಕರಣೆಗೆ ಮುಂದಾಗಿತ್ತಾದರೂ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಇದಕ್ಕೆ ಅವಕಾಶ ನೀಡಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಜಲಮಂಡಳಿ ನೀರಿನ ಬಿಲ್ ಏರಿಕೆ ಪ್ರಸ್ತಾಪನ್ನು ಸರ್ಕಾರದ ಮುಂದೆ ಇಟ್ಟಿದೆ. ಆದರೆ ಇದಕ್ಕೆ ಸರ್ಕಾರ ಅನುಮತಿ ನೀಡಿಲ್ಲ.
-ದೇವೇಶ ಸೂರಗುಪ್ಪ