Advertisement

ಮಳೆಗಾಲದ ಆಚೆಗೂ ಭರಪೂರ ವಿದ್ಯುತ್‌ ಉತ್ಪಾದನೆ!

03:15 PM Mar 12, 2018 | Harsha Rao |

ಕೆಲವು ಕಲ್ಪನೆಗಳಿರುತ್ತವೆ ಮತ್ತು ಅವು ತಪ್ಪಾಗಿರುತ್ತವೆ! ಈ ವ್ಯಾಖ್ಯಾನಕ್ಕೆ ಅನ್ವಯವಾಗುವಂಥ ಸನ್ನಿವೇಶ ಸೋಲಾರ್‌ ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಂತೂ ಅತ್ಯಧಿಕ. ಹೊಸದಾದ ಭಾಗದಲ್ಲಿ ಹೆಚ್ಚಿನ ತಪ್ಪು ಅಭಿಪ್ರಾಯಗಳಿರುವುದು ಸಹಜವಾದ ಬೆಳವಣಿಗೆ. ಮಲೆನಾಡಿನಲ್ಲಿ ಮಾನ್ಸೂನ್‌ ಮಾರುತಗಳು ಅಪ್ಪಳಿಸಿದಾಗ ಭರಪೂರ ಮಳೆಯಾಗುತ್ತದೆ.
ಸೂರ್ಯ ಪಲಾಯನಗೈಯುತ್ತಾನೆ. ಆ ಸಂದರರ್ಭದಲ್ಲಲ್ಲಿ  ಸೂರ್ಯನನ್ನು ಮೋಡಗಳ ನಡುವೆ ನೋಡುವುದೇ ಕಷ್ಟ. ಇಂತಿಪ್ಪ ಸಂದರ್ಭಗಳಲ್ಲಿ ಸೋಲಾರ್‌ ಪ್ಯಾನೆಲ್‌ ಹಾಕಿ ವಿದ್ಯುತ್‌ ಉತ್ಪಾದನೆಗೆ ಮುಂದಾಗುವುದು ಮೂರ್ಖತನವಾಗುವುದಿಲ್ಲವೇ?

Advertisement

ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿ ಇದೀಗಷ್ಟೇ ನಿವೃತ್ತರಾಗಿರುವ ಎಂ.ಸಿ.ಶಿವಕುಮಾರ್‌ ತಮ್ಮ ಸ್ವಂತ ಮನೆಯನ್ನು ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ 1997ರಷ್ಟು ಹಿಂದೆಯೇ ನಿರ್ಮಿಸಿಕೊಂಡಿದ್ದಾರೆ. ನೆಲ ಅಂತಸ್ತಿನ ಮನೆ ಮಲೆನಾಡಿನಲ್ಲಿ ಏನೇ ಮಾಡಿದರೂ ಸಣ್ಣಗೆ ಸೋರಲಾರಂಭಿಸುವ ಹಿನ್ನೆಲೆಯಲ್ಲಿ ಮೇಲೆ ಇನ್ನೊಂದು ಅಂತಸ್ತು ಕಟ್ಟಿಸುವುದು ಅನಿವಾರ್ಯ. ಈ ಸಮಸ್ಯೆ ಕಾಡುವ ಮುನ್ನವೇ ಶಿವಕುಮಾರ್‌ ಒಂದು ಹೆಜ್ಜೆ ಇರಿಸಿದ್ದರು. ಅವರ ಯೋಚನೆ ಸರಳವಾಗಿತ್ತು, ಭಿನ್ನವಾಗಿತ್ತು. ಮೇಲೆ ಮಹಡಿ ಕಟ್ಟಿಸಿದರೂ ವೈಯುಕ್ತಿಕ ಬಳಕೆಗೆ ಅದು ಬೇಕಾಗಿಲ್ಲ, ಬಾಡಿಗೆಗೆ ಕೊಡಬೇಕು. ಬಾಡಿಗೆಗೆ ಜನ ಬರಬೇಕು. ಅಲ್ಲಿ ಉಂಟಾಗಬಹುದಾದ ಕಿರಿಕಿರಿಯನ್ನು ತಾಳಿಕೊಳ್ಳಬೇಕು. ಅಷ್ಟು ನಿರ್ವಹಣಾ ವೆಚ್ಚವೂ ಇದೆ. ಇದೇ ಬಾಡಿಗೆ ಆದಾಯವನ್ನು ಬೇರೆ ರೂಪದಲ್ಲಿ ಪಡೆದರೆ ಹೇಗೆ?

ಹೀಗೆಲ್ಲ ಯೋಚಿಸಿದ ನಂತರ, 2016ರ ಜೂನ್‌ನಲ್ಲಿ ಅವರು ಮನೆಯ ಮೇಲೆ ಮಹಡಿ ಕಟ್ಟಿಸಲಿಲ್ಲ. ಕಬ್ಬಿಣದ ಸ್ಟ್ರಸ್‌, ಶೀಟ್‌ ಹಾಕಿಸಿದರು. ಅಷ್ಟೇ ಆಗಿದ್ದರೆ ಆದಾಯ ಬರುತ್ತಿರಲಿಲ್ಲ. ಅದರ ಮೇಲೆ ಅವರು ಸೋಲಾರ್‌ ರೂಫ್ ಟಾಪ್‌ ವಿದ್ಯುತ್‌ ಉತ್ಪನ್ನ ಅಳವಡಿಕೆಗೆ ಮುಂದಾದರು. 10 ಕಿ.ವ್ಯಾ ಸಾಮರ್ಥ್ಯ. ಅವತ್ತು ಸೋಲಾರ್‌ ಪ್ಯಾನೆಲ್‌, ಅದಕ್ಕೆ ಬೇಕಾಗುವ ಆಧಾರದ ಸ್ಟ್ರಕ್ಚರ್‌ಗಳ ಕಾಮಗಾರಿಯ ವೆಚ್ಚಗಳೆಲ್ಲ ಸೇರಿ ಅವರಿಗೆ 10 ಲಕ್ಷ ರೂ. ವೆಚ್ಚವಾಗಿತ್ತು. ಮೆಸ್ಕಾಂ ಜೊತೆ ಯೂನಿಟ್‌ಗೆ 9.56 ರೂ. ಬೆಲೆಯಂತೆ ಖರೀದಿ ಒಪ್ಪಂದವೂ ಆಯಿತು.

ಅವರ ನಿರ್ಧಾರ ಮೇಲೆಣಿಸಿದಂತೆ ಸಲೀಸಾದ ಲೆಕ್ಕಾಚಾರಕ್ಕೆ ಸಿಕ್ಕುವಂತದಲ್ಲ. ಅಜ್ಜಂಪುರದಲ್ಲಿನ ಮಳೆಗಾಲದ ಅಬ್ಬರ ವಿದ್ಯುತ್‌ ಉತ್ಪಾದನೆಗೆ ನೇರ ಸಮಸ್ಯೆ. ಮಾನ್ಸೂನ್‌ ಸಮಯದಲ್ಲಿ ಮೂರ್‍ನಾಲ್ಕು ದಿನ ಸೂರ್ಯನ ರಶ್ಮಿ ಕಾಣದ ದಿನಗಳಿರುತ್ತವೆ. ಐದು ವರ್ಷಗಳ ಹಿಂದೆ, 13 ದಿನ ನಿರಂತರವಾಗಿ ಮಳೆ ಸುರಿದ ಉದಾಹರಣೆ ಇದೆ. ಅಂದ ಮೇಲೆ ಅಷ್ಟೂ ದಿನ ಸೂರ್ಯ ಕಾಣಿಸಲಿಲ್ಲ ಎಂದು ವಿವರಿಸಿ ಹೇಳಬೇಕಿಲ್ಲ ತಾನೆ? ಶಿವಕುಮಾರ್‌ ಹೇಳುತ್ತಾರೆ. ಜೂನ್‌ನಿಂದ ನವೆಂಬರ್‌ವರೆಗೂ ಮೋಡ ಮುಸುಕಿದ ವಾತಾವರಣದ ಸಂದರ್ಭ ಹೆಚ್ಚು. ಇಂತಹ ಸಂದರ್ಭದಲ್ಲಿ ದಿನವೊಂದಕ್ಕೆ ಅಬ್ಬಬ್ಟಾ ಎಂದರೆ 20-22 ಯೂನಿಟ್‌ನ°ಷ್ಟೇ ಪಡೆದಿರುವುದಿದೆ.

ವಾಸ್ತವವಾಗಿ ಅವರ ಸ್ಥಾವರದಿಂದ ಅಜ್ಜಂಪುರದ ವಾತಾವರಣದಲ್ಲೂ ದಿನಂಪ್ರತಿ 50 ಯೂನಿಟ್‌ ವಿದ್ಯುತ್‌ಗೆ ಮೋಸವಿಲ್ಲದಂತೆ ಉತ್ಪಾದನೆಯನ್ನು ಕಂಡುಕೊಳ್ಳಬಹುದು. ಅಂಕಿಅಂಶಗಳ ಪ್ರಕಾರ, ಅವರ ಉತ್ಪಾದನಾ ಸರಾಸರಿ ದಿನವೊಂದಕ್ಕೆ 40 ಯೂನಿಟ್‌ ಇದೆ. ಅತ್ತ ಮೆಸ್ಕಾಂ ತಮ್ಮ ನಿರಂತರ ವಿದ್ಯುತ್‌ನ ಪ್ರತ್ಯೇಕ ಲೈನ್‌ಗೆ ಈ ಸಂಪರ್ಕಗಳಿಂದ ವಿದ್ಯುತ್‌ ಪೂರೈಕೆಗೆ ಮುಂದಾಗದಿರುವುದು ಮತ್ತು ಅನಿಯಮಿತವಾಗಿ ನಡೆಯುತ್ತಲೇ ಇರುವ ಲೋಡ್‌ ಶೆಡ್ಡಿಂಗ್‌ ಕಾರಣದಿಂದ ಅವರ ಬೇಸಿಗೆ ಅವಧಿಯ “ಪೀಕ್‌ ವಿದ್ಯುತ್‌ ಉತ್ಪಾದನೆ’ ಕೂಡ ವ್ಯರ್ಥವಾಗುತ್ತಿದೆ. ಲೈನ್‌ನಲ್ಲಿ ವಿದ್ಯುತ್‌ ಇಲ್ಲ ಎಂತಾದರೆ ಇವರ ವಿದ್ಯುತ್‌ ಉತ್ಪಾದನೆ ಗ್ರಿಡ್‌ಗೆ ಹೋಗುವುದಿಲ್ಲ. ಅಲ್ಲೇ ವ್ಯಯ. ಸರ್ಕಾರ ಈ ತರಹದ ರೂಫ್ ಟಾಪ್‌ ವಿದ್ಯುತ್‌ ಉತ್ಪಾದನೆಯ ನಿಯಮ, ಷರತ್ತುಗಳನ್ನು ಸರಳಗೊಳಿಸಿ ಜನರನ್ನು ಉತ್ತೇಜಿಸಿದರೆ ಕೊನೆಪಕ್ಷ ಹಗಲಿನಲ್ಲಿ ರೈತರಿಗೆ ತ್ರಿಫೇಸ್‌ ವಿದ್ಯುತ್‌ ಕೊಡಬಹುದಿತ್ತು. ಕೇಳಿಸಿಕೊಳ್ಳುವವರಾರು?

Advertisement

ಕಳೆದ 20 ತಿಂಗಳಿನಿಂದ ಅವರ ಸ್ಥಾವರ ವಿದ್ಯುತ್‌ ಗ್ರಿಡ್‌ ಸಂಪರ್ಕ ಪಡೆದಿದೆ. ಹಲವು ತಾಂತ್ರಿಕ ಸಮಸ್ಯೆಯಿಂದ ಒಂದೆರಡು ತಿಂಗಳು ಅವರು ಸ್ಥಾವರದಿಂದ ವಿದ್ಯುತ್‌ ಪಡೆಯಲಾಗದ ಪರಿಸ್ಥಿತಿಯೂ ಬಂದಿತ್ತು. ಉದ್ಯೋಗ ನಿಮಿತ್ತ ಅವರು ದಾವಣಗೆರೆಯಲ್ಲಿ ನೆಲೆಸಬೇಕಾದುದು ಕೂಡ ಅವರ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಪೂರಕವಾಗಿರಲಿಲ್ಲ. ಈ ಸಂಕಷ್ಟಗಳ ನಡುವೆಯೂ ಅವರು ಮೆಸ್ಕಾಂನಿಂದ ಒಂದೂವರೆ ಲಕ್ಷ ರೂ.ಗಳಷ್ಟು ವರಮಾನವನ್ನು ಪಡೆದಿದ್ದಾರೆ. ಆತ್ಮವಿಶ್ವಾಸದಲ್ಲಿ ಹೇಳುತ್ತಾರೆ, ನಾನು ಹಾಕಿದ ಬಂಡವಾಳಕ್ಕೆ ಬ್ಯಾಂಕ್‌ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ಮೊತ್ತ ಸಿಕ್ಕಿದೆ! ಹೇಳಿಕೇಳಿ, ಅವರು ಬ್ಯಾಂಕ್‌ನವರಲ್ಲವೇ?

ಕುತೂಹಲವೊಂದು ನಿಮಗೂ ಮೂಡಿರಬಹುದು, ಶಿವಕುಮಾರ್‌ರ ಮಾದರಿಯನ್ನು ಇನ್ನೆಷ್ಟು ಜನ ಈ ಸ್ಥಾವರ ಅಳವಡಿಕೆಗೆ ಮುಂದಾಗಿರಬಹುದು? ಹಲವರು ಬಂದು ನೋಡಿದ್ದಾರೆ, ಪ್ರಶ್ನೆ ಕೇಳಿ ಅನುಮಾನ ಬಗೆಹರಿಸಿಕೊಂಡಿದ್ದಾರೆ. ಆದರೆ ಯಾರೊಬ್ಬರೂ ಸೋಲಾರ್‌ ಬಳಸಿ ವಿದ್ಯುತ್‌ಗಳಿಸಿ ಎಂದು ಮಾತನಾಡುವ ಸಾಹಸ ಮಾಡಿಲ್ಲ.  ಲಕ್ಷ ಲಕ್ಷ ಬಂಡವಾಳ ಬೇಡುವ ಈ ವ್ಯವಸ್ಥೆ ಅವರನ್ನು ಕಾದು ನೋಡುವಂತೆ ಮಾಡಿದೆ.

ಸಂಪರ್ಕ: 9449250512, 7892633566

– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next