Advertisement

ಬಿಲ್‌ ಬಾಕಿಗಾಗಿ ವಿದ್ಯುತ್‌ ನಿಲುಗಡೆ: ಬಿಎಸ್ಸೆನ್ನೆಲ್‌ ದೂರವಾಣಿ ಕೇಂದ್ರಗಳು ಸ್ತಬ್ಧ !

01:53 AM Nov 06, 2019 | Team Udayavani |

ಕುಂದಾಪುರ: ಬಿಎಸ್ಸೆನ್ನೆಲ್‌ ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ದೂರವಾಣಿ ವಿನಿಮಯ ಕೇಂದ್ರಗಳಿಗೆ ಮೆಸ್ಕಾಂ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಿದ್ದು, ಸರಕಾರಿ ಸ್ವಾಮ್ಯದ ಎರಡು ಸಂಸ್ಥೆಗಳ ತಿಕ್ಕಾಟದಿಂದ ಜನರು ತೊಂದರೆಗೀಡಾಗುತ್ತಿದ್ದಾರೆ.

Advertisement

ಐದು ಕಡೆ
ಕುಂದಾಪುರ ತಾಲೂಕಿನ ತಲ್ಲೂರು, ಕರ್ಕುಂಜೆ, ಆಲೂರು, ಬೆಳ್ಳಾಲ, ಗಂಗೊಳ್ಳಿ ಮೊದಲಾದೆಡೆ ಬಿಎಸ್ಸೆನ್ನೆಲ್‌ ದೂರವಾಣಿ ವಿನಿಮಯ ಕೇಂದ್ರಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಬಿಎಸ್ಸೆನ್ನೆಲ್‌ ಅಧಿಕಾರಿಗಳ ವಿನಂತಿ ಮೇರೆಗೆ ಒಂದೆರಡು ಕಡೆ ಮರುಸಂಪರ್ಕ ನೀಡಲಾಗಿದ್ದರೂ ಬಿಲ್‌ ಬಾಕಿ ಅಧಿಕ ಇರುವ ಕಾರಣ ಅನಿಯತ ಸಂಪರ್ಕ ನೀಡುವುದು ಅಸಾಧ್ಯ ಎನ್ನಲಾಗಿದೆ.

ತೊಂದರೆ
ಪಾವತಿ ಸಂದರ್ಭ ದೊಡ್ಡ ಎಕ್ಸ್‌ಚೇಂಜ್‌ಗಳ ಬಾಕಿ ಬಿಲ್‌ಗೆ ಆದ್ಯತೆ ನೀಡುತ್ತಿರುವ ಕಾರಣ ಸಣ್ಣಪುಟ್ಟ ಕೇಂದ್ರಗಳು ಬಾಕಿಯಾಗುತ್ತಿವೆ. ಇದ ರಿಂದ ಗ್ರಾಮಾಂತರ ಪ್ರದೇಶದಲ್ಲಿ ಬ್ಯಾಂಕಿಂಗ್‌ ವ್ಯವಹಾರ, ಪಡಿತರ ವ್ಯವಹಾರ ಇತ್ಯಾದಿಗೆ ತೊಂದರೆಯಾಗುತ್ತಿದೆ. ಜನರೇಟರ್‌ಗೆ ಡೀಸೆಲ್‌ಗೆ ಅನುದಾನ ಇಲ್ಲದ ಕಾರಣ ಅನೇಕ ಕಡೆ ಮೊಬೈಲ್‌ ಟವರ್‌ಗಳು ಸ್ತಬ್ಧವಾಗುತ್ತಿವೆ.

ಪತ್ರ ವ್ಯವಹಾರ
ಅ.21ರಂದು ಕೇಂದ್ರ ದೂರಸಂಪರ್ಕ ಖಾತೆ ಕಾರ್ಯದರ್ಶಿ ಅಂಶು ಪ್ರಕಾಶ್‌ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬಿಎಸ್ಸೆನ್ನೆಲ್‌ನ ಹಣಕಾಸು ಮುಗ್ಗಟ್ಟು ನಿವಾರಣೆಗೆ ಕ್ರಮ ಕೈಗೊಳ್ಳ ಲಾಗುತ್ತಿದೆ. 23 ಸಾವಿರ ವಯರ್‌ಲೆಸ್‌ ಎಕ್ಸ್‌ ಚೇಂಜ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ಸಂಪರ್ಕ ಕಡಿತ ಮಾಡಿದರೆ ಗ್ರಾಮಾಂತರದಲ್ಲಿ ಸಂಪರ್ಕಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ 2020ರ ಮಾ.31ರವರೆಗೆ ವಿದ್ಯುತ್‌ ಬಿಲ್‌ ಪಾವತಿಸದಿದ್ದರೂ ಸಂಪರ್ಕ ಕಡಿತ ಮಾಡದಂತೆ ಎಸ್ಕಾಂಗಳಿಗೆ ಸೂಚಿಸಬೇಕೆಂದು ತಿಳಿಸಿದ್ದರು. ಆದರೆ ಎಸ್ಕಾಂ ಅಧಿಕಾರಿಗಳು ಅ.22ರಂದು ಸಂಪರ್ಕ ಕಡಿತ ಮಾಡುವಂತೆ ಆದೇಶಿಸಿದ್ದಾರೆ. ಈಗಾಗಲೇ 27.85 ಕೋ.ರೂ. ಪಾವತಿಸಿದ್ದು, ಇನ್ನು 3 ತಿಂಗಳಲ್ಲಿ ಬಾಕಿ ಪಾವತಿಸುವುದಾಗಿ ಬಿಎಸ್ಸೆನ್ನೆಲ್‌ ಸಿಜಿಎಂ ಸುಶಿಲ್‌ ಕುಮಾರ್‌ ಮಿಶ್ರಾ ಮುಖ್ಯ ಕಾರ್ಯದರ್ಶಿಗೆ ತಿಳಿಸಿ ದ್ದಾರೆ. ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರೂ ಸಂಪರ್ಕ ಕಡಿತಗೊಳಿಸದಂತೆ ಪತ್ರಿಸಿದ್ದಾರೆ.

ದೊಡ್ಡ ಸಂಸ್ಥೆ
ರಾಜ್ಯದಲ್ಲಿ ಬಿಎಸ್ಸೆನ್ನೆಲ್‌ 9.1 ಲಕ್ಷ ಸ್ಥಿರ ದೂರವಾಣಿ, 2.96 ಲಕ್ಷ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸಂಪರ್ಕಗಳು, 72 ಲಕ್ಷ ಮೊಬೈಲ್‌ ಸಂಪರ್ಕಗಳು, 53,700 ಹೈ ಸ್ಪೀಡ್‌ ಬ್ರಾಡ್‌ಬ್ಯಾಂಡ್‌, 21,200 ಲೀಸ್ಡ್ ಲೈನ್‌ಗಳನ್ನು ಹೊಂದಿದೆ. 2,958 ಎಕ್ಸ್‌ಚೇಂಜ್‌ಗಳು, 5,743ರಷ್ಟು 2ಜಿ, 3,370ರಷ್ಟು 3ಜಿ ಟವರ್‌ಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯ – ಕೇಂದ್ರ ಸರಕಾರಿ ಕಚೇರಿಗಳಲ್ಲದೆ ಬ್ಯಾಂಕ್‌ಗಳು, ಬಹುರಾಷ್ಟ್ರೀಯ ಕಂಪೆನಿ ಗಳು ಸೇರಿದಂತೆ ಅನೇಕ ಸಂಸ್ಥೆಗಳ ಜತೆ ವ್ಯವಹಾರ ನಡೆಸುತ್ತಿದೆ. ಪಂಚಾಯತ್‌ಗಳಿಗೆ ಒಎಫ್ಸಿ ನೀಡಿ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ.

Advertisement

ಪಾವತಿಸಲಾಗುತ್ತಿದೆ
ಹಣ ದೊರೆತಂತೆ ಭಾಗಶಃ ಪಾವತಿಯನ್ನೂ ಬಿಎಸ್ಸೆನ್ನೆಲ್‌ ಮಾಡುತ್ತಾ ಬಂದಿದೆ. ಹಿರಿಯ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದು, ಮುಂಬರುವ ಮಾರ್ಚ್‌ವರೆಗೆ ವಿದ್ಯುತ್‌ ಕಡಿತ ಮಾಡದಂತೆ ಆದೇಶ ನೀಡಲಾಗಿದೆ. ಅದನ್ನು ಸ್ಥಳೀಯವಾಗಿಯೂ ಕಳುಹಿಸಲಾಗಿದೆ.
– ವಿಜಯಲಕ್ಷ್ಮೀ ಆಚಾರ್ಯ ಡಿಜಿಎಂ, ಬಿಎಸ್ಸೆನ್ನೆಲ್‌, ಉಡುಪಿ

ಎಂಪಿಗೆ ದೂರು
ಗ್ರಾಮಾಂತರ ಪ್ರದೇಶದಲ್ಲಿ ಎಕ್ಸ್‌ಚೇಂಜ್‌ ಆಫ್ ಆದರೆ ಹತ್ತಾರು ಸಮಸ್ಯೆಗಳಾಗುತ್ತವೆ. ಖಾಸಗಿ ದೂರವಾಣಿ ಸೇವೆಯೂ ಇರುವುದಿಲ್ಲ. ಈ ಕುರಿತು ಸಂಸದರ ಗಮನಕ್ಕೆ ತರಲಾಗಿದೆ.
– ನಾರಾಯಣ ನಾಯ್ಕ, ನೇರಳಕಟ್ಟೆ ಬಿಎಸ್‌ಎನ್‌ಎಲ್‌ ಗ್ರಾಹಕರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next