Advertisement

ಪ್ರಾಧಿಕಾರ ರಚನೆ ಕೂಗಿಗೆ ದಿಗ್ಗಜರ ಬಲ

01:09 AM Jul 09, 2019 | Lakshmi GovindaRaj |

ಬೆಂಗಳೂರು: ದೇಸೀ ತನದ ಶ್ರೀಮಂತ ಪರಂಪರೆ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ “ರಂಗಮಂದಿರಗಳ ಪ್ರಾಧಿಕಾರ’ ರಚನೆಯಾಗಬೇಕು ಎಂಬ ಕೂಗು ಜೋರಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಈಗಾಗಲೇ ಪ್ರಾಧಿಕಾರ ರಚನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದಿಂದಲೂ ಬೆಂಬಲ ವಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಈ ಕೂಗಿಗೆ ಮತ್ತಷ್ಟು ಶಕ್ತಿ ಬಂದಿದೆ.

Advertisement

“ರಂಗ ಮಂದಿರಗಳ ಪ್ರಾಧಿಕಾರ’ ರಚನೆಯಾದರೆ ರಾಜ್ಯಾದಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಲಿವೆ. ಜತೆಗೆ ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿರುವ ಗ್ರಾಮೀಣ ಸೊಗಡಿನ ಸಿರಿವಂತ ಜಾನಪದ ಕಲೆಗಳಾದ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ ಹಾಗೂ ಬೊಂಬೆಯಾಟದಂತ ದೇಸೀ ಬಯಲಾಟದ ಕಲೆಗಳಿಗೆ ಮರುಹುಟ್ಟು ಸಿಗಲಿದೆ.

ಈ ದೃಷ್ಟಿಯಿಂದ “ರಂಗಮಂದಿರಗಳ ಪ್ರಾಧಿಕಾರ’ ರಚನೆಗೆ ಸಂಬಂಧಿಸಿದಂತೆ ಕರ್ನಾಟಕ ನಾಟಕ ಅಕಾಡೆಮಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಮುಖೇನ ಮನವಿ ಮಾಡಿದೆ. ಇದಕ್ಕೆ ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಹಿರಿಯ ಸಾಹಿತಿ ಚನ್ನವೀರ ಕಣವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅವರು ಸಹಿ ಹಾಕಿದ್ದಾರೆ.

ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು, ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ, ಡಾ.ಸಿದ್ದಲಿಂಗಯ್ಯ, ಸಿದ್ದಲಿಂಗ ಪಟ್ಟಣ ಶೆಟ್ಟಿ, ಡಾ.ಕೆ.ಶರೀಫ‌ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹಲವರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. ಈ ಪತ್ರವನ್ನು ನಾಟಕ ಅಕಾಡೆಮಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ.

ಸರ್ಕಾರ ಮನಸು ಮಾಡಬೇಕು: ನಾಡಿನ ಸಮಗ್ರ ಸಾಂಸ್ಕೃತಿಕ ನೀತಿಯನ್ನು ಒಳಗೊಂಡಂತೆ ನಾಟಕ ಅಕಾಡೆಮಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಕರ್ನಾಟಕ ರಂಗಮಂದಿರಗಳ ಪ್ರಾಧಿಕಾರದ ಪ್ರಸ್ತಾವನೆ ಅತ್ಯಂತ ಸಮಯೋಚಿತವಾಗಿದೆ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

Advertisement

ಅಲ್ಲದೆ, ಈ ನಾಡಿನ ಶ್ರೀಮಂತ ಜಾನಪದ ಕಲೆಗಳ ಪೋಷಣೆಗೆ ತಾಲೂಕು ಮಟ್ಟದಲ್ಲಿ ಒಂದೊಂದು ರಂಗ ಮಂದಿ ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಆ ಹಿನ್ನೆಯಲ್ಲಿ ಸರ್ಕಾರ ನಾಟಕ ಅಕಾಡೆಮಿಯ ಪ್ರಸ್ತಾವನೆಗೆ ಮನ್ನಣೆ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಪಾಪು ಮನವಿ ಮಾಡಿದ್ದಾರೆ.

ಏನೆಲ್ಲಾ ಪ್ರಯೋಜನವಾಗಲಿಗದೆ?: ಪ್ರಾಧಿಕಾರ ರಚನೆಯಾದರೆ, ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬಂದ ವೃತ್ತಿ ರಂಗಭೂಮಿ ಕಂಪನಿಗಳಿಗೆ ಆಶ್ರಯ ದೊರೆಯಲಿದೆ. ಸಿದ್ಧ ಮಾದರಿ ರಂಗಮಂದಿರಗಳಿಲ್ಲದೆ ತಾತ್ಕಾಲಿಕ ಟೆಂಟ್‌ ರಂಗಮಂದಿರಗಳನ್ನು ಕಟ್ಟಿಕೊಂಡು, ಆರ್ಥಿಕ ನಷ್ಟದ ನಡುವೆಯೂ ಭೂ ಮಾಲೀಕರಿಗೆ ದುಬಾರಿ ಬಾಡಿಗೆ ನೀಡಿ ರಂಗಸೇವೆ ಮಾಡುತ್ತಿರುವ ವೃತ್ತಿ ನಾಟಕ ಕಂಪನಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ.

ಜತೆಗೆ ನೃತ್ಯ, ಸಂಗೀತ, ಜಾನಪದ ಚಟುವಟಿಕೆಗಳಿಗೂ ಮತ್ತಷ್ಟು ಅವಕಾಶ ದೊರೆಯಲಿದ್ದು, ರಂಗಭೂಮಿ ಬಗ್ಗೆ ಪದವಿ ಪಡೆದಿರುವವರಿಗೂ ಲಾಭವಾಗಲಿದೆ. ಅಲ್ಲದೆ ತಾಲೂಕು ಮಟ್ಟದಲ್ಲಿ ರಂಗ ಚಟುವಟಿಕೆಗಳು ಮತ್ತಷ್ಟು ಜೀವಂತಿಕೆ ಪಡೆಯಲಿವೆ.

ರಂಗಮಂದಿರ ನಿರ್ಮಾಣದ ನೀಲಿ ನಕಾಶೆ: ನಾಟಕ ಅಕಾಡೆಮಿ ಈಗಾಗಲೇ ತಾಲೂಕಿಗೆ ಒಂದರಂತೆ ರಂಗಮಂದಿರ ನಿರ್ಮಾಣಕ್ಕೆ ಆಗುವ ಅಂದಾಜು ವೆಚ್ಚ ಮತ್ತು ಇದಕ್ಕೆ ಸಂಬಂಧಿಸಿದ ಕರಡು ಅಂಗ ರಚನೆಯನ್ನು ಸಿದ್ಧಪಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವಾಲಯಕ್ಕೆ ಸಲ್ಲಿಸಿದೆ. ವೈಜ್ಞಾನಿಕ ರೀತಿಯಲ್ಲಿ ರಂಗಮಂದಿರ ವಿನ್ಯಾಸಪಡಿಸಿದರೆ ಸುಮಾರು ಒಂದು ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೇ ಪ್ರಾಧಿಕಾರ ರಚಿಸಿಅಧ್ಯಕ್ಷರು, 8 ಸದಸ್ಯರ ನಾಮಕರಣ ಮಾಡಿ, ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ನಾಟಕ ಅಕಾಡೆಮಿ ಕೋರಿದೆ.

ರಂಗಮಂದಿರಗಳ ಪ್ರಾಧಿಕಾರ ರಚನೆ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
-ಜೆ.ಲೋಕೇಶ್‌, ನಾಟಕ ಅಕಾಡೆಮಿ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next