Advertisement

ಪವರ್‌ ಆಫ್ ಚಕ್ರಬಡ್ಡಿ

09:56 AM Dec 10, 2019 | Lakshmi GovindaRaj |

ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ ಮೂಲಕವೂ ಕೋಟಿ ರೂ. ಗಳಿಸಬಹುದು ಎನ್ನುವ ಸತ್ಯ ಅನೇಕರಿಗೆ ಗೊತ್ತಿಲ್ಲ. ಅದುವೇ ಚಕ್ರ ಬಡ್ಡಿಯ ಪವರ್‌.

Advertisement

“ಚಕ್ರ ಬಡ್ಡಿ'(ಕಾಂಪೌಂಡ್‌ ಇಂಟರೆಸ್ಟ್‌) ಎನ್ನುವುದು ಜಗತ್ತಿನ 8ನೇ ಅದ್ಭುತ’- ಈ ಮಾತನ್ನು ಹೇಳಿದ್ದವರು ಸಾರ್ವಕಾಲಿಕ ಶ್ರೇಷ್ಟ ವಿಜ್ಞಾನಿಗಳಲ್ಲಿ ಒಬ್ಬರಾದ ಐನ್‌ಸ್ಟೀನ್‌. ಚಕ್ರಬಡ್ಡಿಯ ಮೂಲ ತತ್ವ, ವಿಜ್ಞಾನವನ್ನೂ ಮೀರಿ ನಮ್ಮೆಲ್ಲರ ಜನಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಅವರು ಮನಗಂಡಿದ್ದರು. ಸಚಿನ್‌ ತೆಂಡೂಲ್ಕರ್‌, 16ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರಿಗೆ 29 ವರ್ಷವಾಗುವ ಹೊತ್ತಿಗೆ ಏಕದಿನ ಪಂದ್ಯಗಳಲ್ಲಿ 12,000 ರನ್‌ಗಳ ಗಡಿಯನ್ನು ದಾಟಿದ್ದರು.

ಅದೇ ಇನ್ನೊಬ್ಬ ಪ್ರತಿಭಾನ್ವಿತ ಕ್ರಿಕೆಟಿಗ ರಾಬಿನ್‌ ಸಿಂಗ್‌ ಭಾರತೀಯ ಕ್ರಿಕೆಟ್‌ ತಂಡವನ್ನು ಸೇರಿದ್ದು 28ನೇ ವರ್ಷದಲ್ಲಿ, ಅವರು 2004ನೇ ಇಸವಿಯಲ್ಲಿ ನಿವೃತ್ತಿ ಹೊಂದುವ ವೇಳೆಗೆ ಅವರ ಖಾತೆಯಲ್ಲಿ ಇದ್ದಿದ್ದು 2,336 ರನ್‌ಗಳು. ಕ್ರಿಕೆಟ್‌ಗೂ ಸೇವಿಂಗ್ಸ್‌ ಮಾಡುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ನಾ ಎಂದು ತೋರಬಹುದು. ಆದರೆ ಈ ಮೇಲಿನ ಉದಾಹರಣೆಯಲ್ಲಿ ಸಚಿನ್‌ ಅತಿ ಹೆಚ್ಚು ರನ್‌ಗಳನ್ನು ಸಂಪಾದಿಸುವುದರ ಹಿಂದೆ ಅವರ ಬ್ಯಾಟಿಂಗ್‌ ಕೌಶಲ್ಯದ ಪಾಲು ಎಷ್ಟಿದೆಯೋ ಅಷ್ಟೇ ಶ್ರೇಯ ಅವರು ಚಿಕ್ಕ ವಯಸ್ಸಿನಿಂದಲೇ ಬ್ಯಾಟ್‌ ಹಿಡಿದದ್ದಕ್ಕೂ ಸಲ್ಲುತ್ತದೆ.

ಕ್ರಿಕೆಟ್‌ಗೂ ಆರ್ಥಿಕತೆಗೂ ಒಂದು ಪ್ರಮುಖ ವ್ಯತ್ಯಾಸವೆಂದರೆ, ಕೂಡಿಟ್ಟ ರನ್‌ಗಳು ಕಾಲಾಂತರದಲ್ಲಿ ತನ್ನಷ್ಟಕ್ಕೇ ವೃದ್ಧಿಯಾಗುವುದಿಲ್ಲ. ಆದರೆ, ಬ್ಯಾಂಕ್‌ ಖಾತೆಯಲ್ಲಿ ಕೂಡಿಟ್ಟ ದುಡ್ಡು, ಬಡ್ಡಿಗೆ ಬಡ್ಡಿ ಸೇರಿ ಕಾಲಾಂತರದಲ್ಲಿ ವೃದ್ಧಿಯಾಗುತ್ತಲೇ ಸಾಗುತ್ತದೆ. ಅದನ್ನೇ ಪವರ್‌ ಆಫ್ ಕಾಂಪೌಂಡಿಂಗ್‌(ಚಕ್ರ ಬಡ್ಡಿ) ಎನ್ನುವರು. ವಿಪರ್ಯಾಸ ಎಂದರೆ ಈ ಸತ್ಯ ಅರ್ಥವಾಗುವ ಹೊತ್ತಿಗೆ ನಮ್ಮಲ್ಲಿ ಅನೇಕರಿಗೆ ವಯಸ್ಸಾಗಿರುತ್ತದೆ. ಹೀಗಾಗಿ ಯುವಕರು, ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ದುಡ್ಡನ್ನು ಈಗಿನಿಂದಲೇ ಕೂಡಿಡಲು ಶುರುಮಾಡಿದರೆ ಅವರ ಭವಿಷ್ಯ ಭದ್ರವಾಗಿರುತ್ತದೆ.

ಕೋಟಿ ರೂ. ಸಂಪಾದನೆ ಸಾಧ್ಯ!: ಯುವಪೀಳಿಗೆಗೆ ಉಳಿತಾಯದ ಮಹತ್ವವನ್ನು ಸಾರುವ ಅತ್ಯುತ್ತಮ ಉದಾಹರಣೆ ಇಲ್ಲಿದೆ. ವ್ಯಕ್ತಿಯೊಬ್ಬ ತನ್ನ 25ನೇ ವಯಸ್ಸಿನಲ್ಲಿ ತಿಂಗಳಿಗೆ 5,000ರೂ.ನಂತೆ ಕೂಡಿಟ್ಟರೆ, ಅದಕ್ಕೆ 10% ಬಡ್ಡಿ ನಿಗದಿಯಾಗಿದ್ದರೆ, ಆತನಿಗೆ 60 ವರ್ಷವಾಗುವಷ್ಟರ ಹೊತ್ತಿಗೆ ಆತನ ಖಾತೆಯಲ್ಲಿ 1 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹವಾಗಿರುತ್ತದೆ. ಒಂದೇ ಶರತ್ತು ಏನೆಂದರೆ ಆ ವ್ಯಕ್ತಿ ತಾನು ಕೂಡಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಇನ್ಯಾವುದಕ್ಕೋ ಬಳಸಿಕೊಂಡಿರಬಾರದು. ಅದಕ್ಕಿಂತ ಮುಖ್ಯವಾಗಿ ಕೋಟಿ ರೂ. ಸಂಪಾದಿಸಲು ಹೊರಟವನಿಗೆ ಸುದೀರ್ಘ‌ ವರ್ಷಗಳ ಕಾಲ ಹಣ ಕಟ್ಟುವ ಆರ್ಥಿಕ ಚೈತನ್ಯ ಇರಬೇಕು.

Advertisement

ಅದೇ ವ್ಯಕ್ತಿ 40ನೇ ವಯಸ್ಸಿನಲ್ಲಿ 5,000 ರೂ.ಯನ್ನು, ಕೂಡಿಡಲು ಶುರುಮಾಡಿದರೆ, ಆತನ 60ನೇ ವಯಸ್ಸಿನಲ್ಲಿ ಖಾತೆಯಲ್ಲಿ ಸಂಗ್ರಹವಾಗುವ ಮೊತ್ತ 33 ಲಕ್ಷ ರೂ! ಪ್ರತಿ ತಿಂಗಳು ಕೇವಲ 5,000 ರೂ ಕೂಡಿಡುವುದರ ಮೂಲಕ ವ್ಯಕ್ತಿಯೊಬ್ಬ ತನ್ನ ಜೀವಿತ ಕಾಲದಲ್ಲಿ ಕೋಟಿ ರೂ. ಸಂಪಾದಿಸಬಹುದು ಎನ್ನುವ ಸಂಗತಿಯಿಂದ ಚಕ್ರ ಬಡ್ಡಿಯ ಮಹತ್ವವನ್ನು ನಾವು ಅರಿಯಬಹುದು. ಅಷ್ಟೇ ಅಲ್ಲ, 15 ವರ್ಷ ತಡವಾಗಿ ಕೂಡಿಡಲು ಶುರುಮಾಡಿದ್ದಕ್ಕೆ 67 ಲಕ್ಷ ರೂ. ಕೈ ತಪ್ಪಿತು ಎನ್ನುವ ಸಂಗತಿಯಿಂದ, ಸಮಯ ಎಷ್ಟು ಬಹಳ ಮುಖ್ಯ ಎನ್ನುವುದನ್ನೂ ತಿಳಿದುಕೊಳ್ಳಬಹುದು.

ನಿಂತ ನೀರಾಗಬಾರದು: ಚಕ್ರಬಡ್ಡಿಯ ತತ್ವವನ್ನು ಸರಳವಾಗಿ ಹೇಳುವುದಾದರೆ, ಆದಾಯದ ಮೇಲಿನ ಬಡ್ಡಿಗೆ(ಇಂಟರೆಸ್ಟ್‌ ಇನ್‌ಕಂ). ಬಡ್ಡಿ ಸೇರುತ್ತಾ ಹೋಗುವುದರಿಂದ ಕಾಲಾಂತರದಲ್ಲಿ ಒಟ್ಟು ಮೊತ್ತ ಅಪರಿಮಿತ ವೇಗದಲ್ಲಿ ವೃದ್ಧಿಯಾಗುತ್ತಾ ಹೋಗುತ್ತದೆ. ಬಡ್ಡಿ ಆದಾಯವನ್ನು ಸರಳವಾಗಿ ವಿವರಿಸಲು ಸೇವಿಂಗ್ಸ್‌ ಅಕೌಂಟನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಖಾತೆದಾರ ಒಂದಷ್ಟು ಮೊತ್ತವನ್ನು ತನ್ನ ಸೇವಿಂಗ್ಸ್‌ ಖಾತೆಯಲ್ಲಿ ಹಾಕುತ್ತಾನೆ ಅಂತಿಟ್ಟುಕೊಳ್ಳೋಣ. ಆ ಮೊತ್ತವನ್ನು ಅವನು ತಿಂಗಳುಗಳ ಕಾಲ ಇಲ್ಲವೇ ವರ್ಷಗಳ ಕಾಲ ಮುಟ್ಟಲು ಹೋಗುವುದಿಲ್ಲ,

ಹಾಗೆಯೇ ಬಿಡುತ್ತಾನೆ ಅಂತಿಟ್ಟುಕೊಳ್ಳಿ. ಆ ಹಣ ಸೋಮಾರಿಯಾಗಿ(Idle) ಬಿಡುವುದಿಲ್ಲ. ಅದರಲ್ಲಿ ಸ್ವಲ್ಪ ಭಾಗವನ್ನು ಬ್ಯಾಂಕು ಒಂದಲ್ಲ ಒಂದು ಕಡೆ ಹೂಡುತ್ತದೆ. ಅದಕ್ಕೆ ಬದಲಾಗಿ ಬ್ಯಾಂಕು ಖಾತೆದಾರನಿಗೆ ಆತ ಉಳಿತಾಯ ಖಾತೆಯಲ್ಲಿ ಹಾಕಿದ ಹಣಕ್ಕೆ, ಇಂತಿಷ್ಟು ಮೊತ್ತವನ್ನು ಬಡ್ಡಿಯ ರೂಪದಲ್ಲಿ ಸೇರಿಸಿಕೊಡುತ್ತದೆ. ಇದುವೇ ಬಡ್ಡಿ ಆದಾಯ(ಇಂಟರೆಸ್ಟ್‌ ಇನ್‌ಕಂ). ಎಷ್ಟು ಬಡ್ಡಿ ಕೊಡಬೇಕೆಂಬುದನ್ನು ಬ್ಯಾಂಕು ಪರ್ಸಂಟೇಜು ಲೆಕ್ಕದಲ್ಲಿ ಮೊದಲೇ ಘೋಷಿಸಿರುತ್ತದೆ, ಅದು ಇಂಟರೆಸ್ಟ್‌ ರೇಟ್‌.

ಬಡ್ಡಿ ಆದಾಯ ಮತ್ತು ಡಿವಿಡೆಂಡ್‌ ಆದಾಯ: ಜನಸಾಮಾನ್ಯರಿಗೆ ಇವೆರಡೂ ಗೊಂದಲ ಮೂಡಿಸುವುದು ಸಹಜ. ಅವೆರಡೂ ಒಂದೇ ಎಂದೂ ಕೆಲವರು ತಿಳಿದಿರುತ್ತಾರೆ. ಆದರೆ ಹಾಗಿಲ್ಲ. ಎಫ್.ಡಿ, ಆರ್‌.ಡಿ, ಸೇವಿಂಗ್ಸ್‌ ಖಾತೆಗಳಲ್ಲಿ ಹಣ ಹೂಡಿದಾಗ ಬ್ಯಾಂಕುಗಳು ನೀಡುವ ಬಡ್ಡಿ. ಮ್ಯೂಚುವಲ್‌ ಫ‌ಂಡ್‌, ಎಲ್‌.ಐ.ಸಿ.ಗಳಲ್ಲಿ ಗ್ರಾಹಕ ಹಣ ಹೂಡಿದಾಗ ಅದಕ್ಕೆ ಪ್ರತಿಯಾಗಿ ಆತನಿಗೆ ಸಿಗುವ ಹೆಚ್ಚುವರಿ ಹಣ ಡಿವಿಡೆಂಡ್‌ ಆದಾಯ. ಡಿವಿಡೆಂಡ್‌ ಆದಾಯ ಸಿಗುವುದು ಮ್ಯೂಚುವಲ್‌ ಫ‌ಂಡ್‌ ಮುಖಾಂತರ ಯಾವ ಸಂಸ್ಥೆಯಲ್ಲಿ ಹಣ ಹೂಡಿರುತ್ತಾರೋ ಆ ಸಂಸ್ಥೆ ಲಾಭ ಗಳಿಸಿದಾಗ ಮಾತ್ರ. ಹೀಗಾಗಿ ಅದನ್ನು ಲಾಭಾಂಶ ಎಂದು ಪರಿಗಣಿಸುತ್ತಾರೆ.

ಚಕ್ರಬಡ್ಡಿಯ ತತ್ವವನ್ನು ಮ್ಯೂಚುವಲ್‌ ಫ‌ಂಡ್‌ಗೂ ಅನ್ವಯಿಸಬಹುದು. ನಿಗದಿತ ಅವಧಿಯ ನಂತರ ಮ್ಯೂಚುವಲ್‌ ಫ‌ಂಡ್‌ ಕೊಡಮಾಡುವ ಲಾಭಾಂಶವನ್ನು (ಡಿವಿಡೆಂಡ್‌ ಆದಾಯ) ಮತ್ತೆ ಹೂಡಿಕೆ (Re invest) ಮಾಡುವುದರ ಮೂಲಕ ಚಕ್ರಬಡ್ಡಿಯ ತತ್ವವನ್ನು ಇಲ್ಲೂ ಅಳವಡಿಸಿಕೊಳ್ಳಬಹುದು. ಅದರ ಅರ್ಥ, ಒಮ್ಮೆ ಸಿಕ್ಕ ರಿಟರ್ನ್ಸ್ ಮತ್ತು ಮೂಲ ಬಂಡವಾಳವನ್ನು ಮತ್ತೆ ಹೂಡಿಕೆ ಮಾಡುವುದರ ಮೂಲಕ ಇನ್ನೂ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು ಎಂದು.

ಹೂಡಿಕೆಗೆ ಸುರಕ್ಷಿತ ಮಾರ್ಗ: ನಮ್ಮಲ್ಲಿ ಎಫ್.ಡಿ. ಮತ್ತು ಆರ್‌.ಡಿ. ಹಣ ಹೂಡಿಕೆಗೆ ಅತ್ಯಂತ ಸುರಕ್ಷಿತವಾದ ಮಾರ್ಗಗಳಾಗಿವೆ. ಸುರಕ್ಷಿತ, ಏಕೆಂದರೆ ಇವೆರಡರಿಂದಲೂ ದೊರೆಯುವ ರಿಟರ್ನ್ಸ್ ಮಾರುಕಟ್ಟೆಯ ಸ್ಥಿತಿಗತಿಯನ್ನು ಅವಲಂಬಿಸಿಲ್ಲ. ಎಫ್.ಡಿ ಮತ್ತು ಆರ್‌.ಡಿ ಎರಡೂ ನಿಗದಿತ ಅವಧಿಯ ಸ್ಕೀಮ್‌ಗಳಾಗಿವೆ. ಬಡ್ಡಿ ದರ ಕೂಡ ನಿಗದಿತವಾಗಿರುತ್ತದೆ.

ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಬ್ಯಾಂಕ್‌ ಗ್ರಾಹಕ ತನಗೆ ಬೇಕಾದ ಅವಧಿಯನ್ನು ಆರಿಸಿಕೊಳ್ಳಬಹುದು. ಸಾಮಾನ್ಯವಾಗಿ ಎಫ್ಡಿ ಮತ್ತು ಆರ್‌.ಡಿ.ಗಳ ವಿಷಯದಲ್ಲಿ ಬ್ಯಾಂಕುಗಳು 5 ವರ್ಷಗಳಿಗಿಂತ ಹೆಚ್ಚು ಸ್ವಾಗತಿಸುವುದಿಲ್ಲ. ಹೂಡಿಕೆಯಾದ ಹಣಕ್ಕೆ ಬಡ್ಡಿ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಕ್ರೆಡಿಟ್‌ ಆಗುತ್ತದೆ. ಆರ್‌.ಡಿ.ಯಲ್ಲಿ ಗ್ರಾಹಕ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಕಟ್ಟುತ್ತಾ ಹೋಗುತ್ತಾನೆ. ಪ್ರತಿ ತಿಂಗಳೂ ಅದಕ್ಕೆ ಬಡ್ಡಿ ಸೇರುತ್ತಾ ಹೋಗುತ್ತದೆ.

ಚಕ್ರ ಬಡ್ಡಿಯ ರಿಟರ್ನ್ಸ್ಅನ್ನು ಈ ಮೂರು ಅಂಶಗಳು ನಿರ್ಧರಿಸುತ್ತವೆ
1. ಬಡ್ಡಿ (ಇಂಟರೆಸ್ಟ್‌ ರೇಟ್‌): ಬಡ್ಡಿಯ ಪರ್ಸೆಂಟೇಜು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಒಂದು 6.25% ನೀಡಿದರೆ ಇನ್ನು ಕೆಲವು ಕಡೆ 6.38%. ಹೀಗೆ ಈ ದರದ ಮೇಲೆಯೂ ಚಕ್ರ ಬಡ್ಡಿ ನಿರ್ಧರಿತವಾಗುತ್ತೆ.

2. ಸಮಯ: ಖಾತೆಯಲ್ಲಿ ಹಣವನ್ನು ಯಾವುದಕ್ಕೂ ಉಪಯೋಗಿಸದೆ ಎಷ್ಟು ಸಮಯ ಇಡಲಾಗುತ್ತದೆಯೋ ಅಷ್ಟೂ ಲಾಭ ಹೆಚ್ಚುತ್ತಲೇ ಹೋಗುತ್ತದೆ.

3. ತೆರಿಗೆ: ಖಾತೆಯಲ್ಲಿ ವೃದ್ಧಿಯಾಗುತ್ತಿರುವ ಹಣಕ್ಕೆ ತೆರಿಗೆ ಅನ್ವಯವಾಗುತ್ತದೆ. ಮೂಲ ಬಂಡವಾಳವನ್ನು ಹೊರತುಪಡಿಸಿ ಕೇವಲ ಬಡ್ಡಿ ಆದಾಯದ ಮೊತ್ತವೇ 40,000 ರೂ.ಗಿಂತ ಮೇಲ್ಪಟ್ಟಿದ್ದರೆ ಅದಕ್ಕೆ ಟಿಡಿಎಸ್‌(ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌) ಅನ್ವಯವಾಗುತ್ತದೆ.

* ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next