Advertisement

ಮೇಲೆತ್ತುವ ಕೆಳ ಕ್ರಮಾಂಕ: ಟೆಸ್ಟ್ ತಂಡಕ್ಕೆ ಬಲ ತುಂಬುವ ಬಾಲಂಗೋಚಿಗಳು

05:24 PM Feb 16, 2023 | ಕೀರ್ತನ್ ಶೆಟ್ಟಿ ಬೋಳ |

ಟೀಂ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುನ್ನತ ಮಟ್ಟದಲ್ಲಿದೆ. ಕೇವಲ ತವರಿನಲ್ಲಿ ಮಾತ್ರವಲ್ಲದೆ, ಏಷ್ಯಾದ ಹೊರಗೂ ತನ್ನ ಅಧಿಪತ್ಯ ಸಾಧಿಸುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ಟೀಂ ಇಂಡಿಯಾ ಪ್ರಮುಖ ಗೆಲುವು ದಾಖಲಿಸಿದೆ. ತವರಿನಲ್ಲಂತೂ ಟೀಂ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ ಎಂಬಂತಾಗಿದೆ. ಇದಕ್ಕೆ ಬದಲಾದ ಮನೋಸ್ಥಿತಿ, ವೇಗಿಗಳ ಪ್ರದರ್ಶನ ಸೇರಿದಂತೆ ಹಲವು ಕಾರಣಗಳ ನಡುವೆ ಹೆಚ್ಚಾಗಿ ಗುರುತಿಸದ ಅಂಶವೊಂದಿದೆ. ಅದುವೇ ಕೆಳ ಕ್ರಮಾಂಕದ ಬ್ಯಾಟರ್ ಗಳ ಕೊಡುಗೆ.

Advertisement

ಹೌದು, ಕೆಲ ವರ್ಷಗಳಿಂದ ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಗಮನಾರ್ಹ ಬದಲಾವಣೆಗಳು ನಡೆದಿದೆ. ಅದರಲ್ಲೂ ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳ ತಂಡದಲ್ಲಿ 9-10ನೇ ಕ್ರಮಾಂಕದವರೆಗೂ ಸುಲಭವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಈಗ ಕೇವಲ ಬೌಲರ್ ಗಳಾಗಿ ಉಳಿದಿಲ್ಲ. ಬದಲಾಗಿ ಕೆಲವು ಪಂದ್ಯಗಳಲ್ಲಂತೂ ಪ್ರಮುಖ ಬ್ಯಾಟರ್ ಗಳಿಗಿಂತಲೂ ಮುಖ್ಯ ಪಾತ್ರ ವಹಿಸುತ್ತಾರೆ. ಮೊನ್ನೆಯಷ್ಟೇ ನಡೆದ ನಾಗ್ಪುರ ಟೆಸ್ಟ್ ಇದಕ್ಕೊಂದು ಉತ್ತಮ ಉದಾಹರಣೆ.

ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಆಸೀಸ್ 177 ರನ್ ಮಾತ್ರ ಮಾಡಿತ್ತು. ಬ್ಯಾಟಿಂಗ್ ಮಾಡಿದ ಭಾರತವು ಒಂದು ಹಂತದಲ್ಲಿ 240 ರನ್ ಗೆ ಏಳು ವಿಕೆಟ್ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಈ ಕಠಿಣ ಪಿಚ್ ನಲ್ಲಿ ಒಂದಾಗಿದ್ದು ಇಬ್ಬರು ಲೆಫ್ಟ್ ಹ್ಯಾಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್.

ಇಲ್ಲಿಂದ ಆಟ ಬೇರೆಯೇ ಹಂತಕ್ಕೆ ತಿರುಗಿತ್ತು. ಗುಜರಾತ್ ನ ಇವರಿಬ್ಬರು ಬೇರೆ ಯಾವುದೋ ಪಿಚ್ ಮೇಲೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬಂತೆ ಆಡಿದರು. ಬಳಿಕ ಅಕ್ಷರ್ ಜತೆ ಸೇರಿದ ಮೊಹಮ್ಮದ್ ಶಮಿ ಕೂಡಾ 37 ರನ್ ಮಾಡಿದರು. ಟೀಂ ಇಂಡಿಯಾ ಗಳಿಸಿದ್ದು 400 ರನ್.

Advertisement

ಅಕ್ಷರ್ ಮತ್ತು ಜಡೇಜಾ 88 ರನ್ ಜೊತೆಯಾಟವಾಡಿದ್ದರು. 2021 ರ ಆರಂಭದಿಂದಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಏಳನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ ಗೆ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಪೇರಿಸಿದ ಭಾರತದ 11 ನೇ ಜೊತೆಯಾಟವಾಗಿದೆ. ಅಕ್ಷರ್ ಮತ್ತು ಮೊಹಮ್ಮದ್ ಶಮಿ ನಂತರ ಒಂಬತ್ತನೇ ವಿಕೆಟ್‌ಗೆ 52 ರನ್ ಸೇರಿಸಿ 12 ನ ಜೊತೆಯಾಟವಾಡಿದರು.

ತವರಿನ ಟೆಸ್ಟ್‌ ಗಳಲ್ಲಿ ಭಾರತದ ಕೆಳ ಕ್ರಮಾಂಕದ ಜೊತೆಯಾಟಗಳ ಬಗ್ಗೆ ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಪ್ರತಿ ನಾಲ್ಕು ಇನ್ನಿಂಗ್ಸ್ ಗೆ ಒಮ್ಮೆ ಎಂಬಂತೆ 50-ಪ್ಲಸ್ ಜೊತೆಯಾಟಗಳು ಬಂದಿದೆ. ಎರಡನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಪ್ರತಿ 7.33 ಇನ್ನಿಂಗ್ಸ್ ಗೆ ಒಂದು ಕೆಳ ಕ್ರಮಾಂಕದ ಅರ್ಧ ಶತಕದ ಜೊತೆಯಾಟ ಆಡುತ್ತಿದೆ.

ಕಳೆದ ಕೆಲವು ವರ್ಷಗಳಿಂದ ನೋಡುವುದಾದರೆ 2016-17 ಋತುವಿನಲ್ಲಿ ಜಡೇಜಾ, ಆರ್ ಅಶ್ವಿನ್ ಮತ್ತು ವೃದ್ಧಿಮಾನ್ ಸಾಹ ಅವರು 13-ಟೆಸ್ಟ್ ಗಳಲ್ಲಿ ನಾಲ್ಕು ಸರಣಿ ಗೆಲುವುಗಳಿಗೆ ಭಾರೀ ಕೊಡುಗೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರಾಂಚಿ ಪಂದ್ಯದಲ್ಲಿ ಸಾಹ ಅವರ ಶತಕ, ಧರ್ಮಶಾಲಾದಲ್ಲಿ ಸಾಹ-ಜಡೇಜಾ ಪಾಲುದಾರಿಕೆಯು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2021 ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿ ಪ್ರಾರಂಭವಾದಾಗಿನಿಂದ, ಭಾರತದ ಕೆಳ ಕ್ರಮಾಂಕವು ತವರು ಟೆಸ್ಟ್‌ ಗಳಲ್ಲಿ ಮತ್ತೊಂದು ಹಂತಕ್ಕೆ ಹೋಗಿದೆ. ಜಡೇಜಾ ಗಾಯದಿಂದ ಹೊರಗುಳಿದಾಗ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ ತಮ್ಮ ಛಾಪು ಮೂಡಿಸಿದರು. ಇದಕ್ಕೂ ಮೊದಲು ಆಸೀಸ್ ಪ್ರವಾಸದ ಗಬ್ಬಾ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.

ಭಾರತವು ಸದ್ಯ ತವರು ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್‌ ನ ಬಗ್ಗೆ ಚಿಂತಿಸದೆ ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಪಟೇಲ್ ರನ್ನು ತುಂಬಾ ಸುಲಭವಾಗಿ ಆಯ್ಕೆ ಮಾಡುತ್ತಿದೆ.

ಈ ಎಲ್ಲಾ ಕೆಳ ಕ್ರಮಾಂಕದ ಕೊಡುಗೆಗಳು ಮತ್ತೊಂದು ಪರಿಣಾಮವನ್ನು ಬೀರಿವೆ. ಬಾಲಂಗೋಚಿಗಳ ಪ್ರದರ್ಶನದ ಕಾರಣದಿಂದ ಭಾರತದ ಉನ್ನತ-ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗಳು ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. 2021 ರ ಆರಂಭದಿಂದಲೂ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 20 ರ ಅಂಚಿನಲ್ಲಿ ಸರಾಸರಿಯನ್ನು ಹೊಂದಿದ್ದಾರೆ. ಅಲ್ಲದೆ ಕೆಎಲ್ ರಾಹುಲ್ ಕೂಡಾ ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದರ ಹೊಡೆತ ಹೆಚ್ಚಾಗಿ ಬೀಳದಂತೆ ಈ ಬಾಲಂಗೋಚಿಗಳು ನೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next