ಬೆಂಗಳೂರು: ಬಿಜೆಪಿಯು ಜೆಡಿಎಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂದಾಗಿದ್ದಾರೆ.
ಮಂಗಳವಾರ ಪದ್ಮನಾಭನಗರ ನಿವಾಸದಲ್ಲಿ ಇಡೀ ದಿನ ಎಲ್ಲ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯಾರೂ ಪಕ್ಷ ಬಿಟ್ಟು ಹೋಗದಂತೆ ತಿಳಿಸಿದರು. ನಾಲ್ಕು ವರ್ಷ ನಮ್ಮ ಸರ್ಕಾರ ಇರಲಿದ್ದು ಎಲ್ಲರಿಗೂ ಅಧಿಕಾರ ಸಿಗಲಿದೆ. ಯಾವುದೇ ಆಮಿಷಗಳಿಗೆ ಮಣಿಯಬೇಡಿ ಎಂದು ಹೇಳಿದರು.
ಸರ್ಕಾರಕ್ಕೆ ಎರಡು ಅಥವಾ ಎರಡೂವರೆ ವರ್ಷ ತುಂಬಿದ ನಂತರ ಈಗ ಸಂಪುಟದಲ್ಲಿ ಜೆಡಿಎಸ್ ಕೋಟಾದಡಿ ಸಚಿವರಾಗಿರುವವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ ಉಳಿದವರಿಗೆ ಸಚಿವ ಸ್ಥಾನ ನೀಡಲಾಗುವುದು. ಜೆಡಿಎಸ್‌ನಲ್ಲಿ ಶಾಸಕರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲರಿಗೂ ಅಧಿಕಾರ ಸಿಗಲಿದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಿ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಸಿದ್ದು ಜತೆ ಎಚ್‌ಡಿಕೆ ಚರ್ಚೆ: ಈ ಮಧ್ಯೆ, ಅಮೆರಿಕದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಜೆಡಿಎಸ್ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರು ಬಿಜೆಪಿ ಸೇರಲಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಅವರನ್ನೂ ಸಂಪರ್ಕಿಸಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಮಂಗಳವಾರವೂ ಕುಮಾರಸ್ವಾಮಿಯವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಆ ವೇಳೆ, ಏನೂ ಸಮಸ್ಯೆಯಾಗದು. ನಾವೆಲ್ಲಾ ಶಾಸಕರ ಜತೆ ಸಂಪರ್ಕದಲ್ಲಿದ್ದೇವೆ. ನೀವು ಪ್ರವಾಸ ಮುಗಿಸಿ ಬನ್ನಿ ಎಂದು ಹೇಳಿದರು ಎನ್ನಲಾಗಿದೆ.