Advertisement

ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ವಿದ್ಯುತ್‌ ಕಟ್‌

06:23 PM Jan 31, 2022 | Team Udayavani |

ಶಿರಹಟ್ಟಿ: ಶಿರಹಟ್ಟಿಯ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಹಲವಾರು ವರ್ಷಗಳಿಂದ ವಹಿವಾಟು ನಡೆಸುತ್ತಿದೆ. ನಿತ್ಯವೂ 14-15 ಜಿಲ್ಲೆಗಳಿಂದ ರೈತರು ತಾವು ಬೆಳೆದಂತಹ ರೇಷ್ಮೆ ಗೂಡನ್ನು  ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ಹೀಗೆ ಬರುವಂತಹ ರೈತರಿಗೆ ಸದಾ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದ್ದು, ಇದೀಗ ಸರಕಾರಿ ಸಾಮೂಹಿಕ ರೇಷ್ಮೆ ನೂಲು ಬಿಚ್ಚುವ ಘಟಕಗಳ ಪವರ್‌ ಕಟ್‌ ಆಗಿರುವುದರಿಂದ ಸರಕಾರದಿಂದ ಪರವಾನಗಿ ಪಡೆದ ರೀಲರ್‌ ಗಳು ರೇಷ್ಮೆ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ವಿದ್ಯುತ್‌ ಬಿಲ್‌ ಪಾವತಿಸದ್ದಕ್ಕೆ ಪವರ್‌ ಕಟ್‌:
ಶಿರಹಟ್ಟಿ ರೇಷ್ಮೆ ಇಲಾಖೆಯ ಸರಕಾರಿ ಸಾಮೂಹಿಕ ರೇಷ್ಮೆ ನೂಲು ಬಿಚ್ಚುವ ಘಟಕಗಳಲ್ಲಿ ಸುಮಾರು 10-11ಜನ ಸರಕಾರದಿಂದ ಪರವಾನಗಿ ಪಡೆದ ಫಲಾನುಭವಿಗಳು ರೇಷ್ಮೆ ರೀಲಿಂಗ್‌ ನಡೆಸುತ್ತಿದ್ದು, ಈ ಘಟಕಗಳಿಗೆ ರೀಲರ್‌ಗಳು ವಿದ್ಯುತ್‌ ಬಿಲ್‌ ತುಂಬುತ್ತಾರೆ. ರೇಷ್ಮೆ ಇಲಾಖೆಯಿಂದ ಪಾವತಿಸಬೇಕಾದ ಬೋರ್‌ವೆಲ್‌ ಹಾಗೂ ಹಾಟ್‌ ಅಂಡ್‌ ಡ್ರೆ„ ಘಟಕಗಳ ವಿದ್ಯುತ್‌ ಬಿಲ್‌ ಬಾಕಿ ಇರುವುದರಿಂದ ಇಡೀ ಸಂಕೀರ್ಣದ ವಿದ್ಯುತ್‌ ಸರಬರಾಜು ಕಡಿತಗೊಂಡಿದೆ. ಇದರಿಂದ ಸಹಜವಾಗಿಯೇ ರೇಷ್ಮೆ ನೂಲು ಬಿಚ್ಚುವ ರೀಲರ್‌ಗಳು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಷ್ಟ ಭರಿಸೋರು ಯಾರು?: ರೇಷ್ಮೆ ಗೂಡು ಖರೀದಿ ಮಾಡಿದ ನಂತರ ಸಮಯಕ್ಕೆ ಸರಿಯಾಗಿ ಗೂಡು ಬಿಚ್ಚಾಣಿಕೆ ಮಾಡದೇ ಹೋದರೆ ಗೂಡಿನಲ್ಲಿ ಚಿಟ್ಟೆ ಹೊರಬರುವ ಸಾಧ್ಯತೆ ಇರುತ್ತದೆ. ಇದರಿಂದಾಗುವ ನಷ್ಟವನ್ನು ನಮಗೆ ಯಾರು ಭರಿಸಿಕೊಡುತ್ತಾರೆ. ಘಟಕಗಳ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳು ವಾರಕ್ಕೆ ಒಮ್ಮೆಯಾದರೂ ಭೇಟಿ ನೀಡದೇ ಇದ್ದುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಇಲ್ಲಿಯ ಬಹುತೇಕ ರೀಲರ್‌ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರೈತರಿಗೂ ತೊಂದರೆ: ನೂಲು ಬಿಚ್ಚುವ ಘಟಕಗಳಲ್ಲಿ ಪವರ್‌ ಕಟ್‌ ಆಗಿರುವುದರಿಂದ ಕಳೆದ 4-5 ದಿನಗಳಿಂದ ದೂರದ ಜಿಲ್ಲೆಗಳಿಂದ ರೇಷ್ಮೆ ಗೂಡು ಮಾರುಕಟ್ಟೆಗೆ ರೈತರು ಆಗಮಿಸುತ್ತಿದ್ದು, ರೇಷ್ಮೆ ಗೂಡು ಖರೀದಿಸಲು ರೀಲರ್‌ಗಳು ಸಹ ಮುಂದೆ ಬರುತ್ತಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಇಲ್ಲಿಯ ಅವ್ಯವಸ್ಥೆಗೆ ಹಿಡಿಶಾಪ ಹಾಕಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೇರೆ ಕಡೆಗೆ ತೆರಳುತ್ತಿದ್ದಾರೆ.

ಸರಕಾರ ಸಮಸ್ಯೆ ನಿವಾರಿಸಲಿ: ಅಕ್ಕಿ ಈ ಕುರಿತು ಪ್ರತಿಕ್ರಿಯಿಸಿದ ರೀಲರ್‌ ಸಂಘದ ಅಧ್ಯಕ್ಷ ಚಂದ್ರಕಾಂತ ಅಕ್ಕಿ, ರೇಷ್ಮೆ ಇಲಾಖೆ ಅಧಿಕಾರಿಗಳು ನೂಲು ಬಿಚ್ಚುವ ಘಟಕಗಳಿಗೆ ಸರಿಯಾಗಿ ಭೇಟಿ ನೀಡದೇ ಇದ್ದುದರಿಂದ ಅವರ ನಿರ್ಲಕ್ಷ್ಯ ಹಾಗೂ ವಿದ್ಯುತ್‌ ಬಿಲ್‌ ಪಾವತಿ ಮಾಡದ್ದರಿಂದ ರೀಲರ್‌ಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ರೈತರಿಗೂ ತೊಂದರೆಯಾಗುತ್ತಿದೆ. ಸರಕಾರ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

Advertisement

ಬೇಡಿಕೆಯ ಶೇ.50ರಷ್ಟು ಅನುದಾನ ವಿಳಂಬವಾಗಿ ಬಂದಿದೆ. ಈಗಾಗಲೇ ಹೆಸ್ಕಾಂಗೆ ಬಿಲ್‌ ಭರಣಾ ಮಾಡಲಾಗಿದೆ. ನಾಳೆಯೇ ಖುದ್ದಾಗಿ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಚರ್ಚಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. 4 ಕಡೆ ಚಾರ್ಜ್‌ ಇರುವುದರಿಂದ ಅವಶ್ಯಕತೆಗನುಗುಣವಾಗಿ ಭೇಟಿ ನೀಡಲಾಗುತ್ತಿದೆ.
ಬಿ.ಆರ್‌.ಅಂಗಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next