Advertisement

ಕನಿಷ್ಟ ವೇತನಕ್ಕೆ ವಿದ್ಯುತ್‌ ಗುತ್ತಿಗೆ ನೌಕರರ ಆಗ್ರಹ

05:21 PM Dec 01, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ವಿದ್ಯುತ್‌ ಗುತ್ತಿಗೆ ನೌಕರರಗೆ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿದ್ಯುತ್‌ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಗುತ್ತಿಗೆ ನೌಕರರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯುತ್‌ ಗುತ್ತಿಗೆ ನೌಕರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ವಿದ್ಯುತ್‌ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಯು. ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ಹೆಸ್ಕಾಂ, ಕರ್ನಾಟಕ ವಿದ್ಯುತ್‌ ಶಕ್ತಿ ನಿಗಮ ಸೇರಿದಂತೆ ವಿದ್ಯುತ್‌ ವಿಭಾಗದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಒಂದು ವರ್ಷವಾದರೂ ಕನಿಷ್ಠ ವೇತನಜಾರಿಯಾಗಿಲ್ಲ. ಇದರಿಂದ ನೌಕರರು, ಜೀವನ ನಡೆಸುವುದು ಕಷ್ಟವಾಗಿದೆ. ಈ ಕುರಿತು ಕಳೆದ 2019ರ ಡಿಸೆಂಬರ್‌ 26ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ನೀಡಿದಾಗ, ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆನೀಡಲಾಗಿತ್ತು. ಈಗ ಒಂದು ವರ್ಷ ಕಳೆಯುತ್ತ ಬಂದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ಗುತ್ತಿಗೆ ನೌಕರರ ಇಪಿಎಫ್‌ಒ ಮತ್ತು ಇಎಸ್‌ಐ ಖಾತೆಹೊಂದಿಲ್ಲ. ಹೊಸ ಖಾತೆ ತೆರೆದು, ಇಪಿಎಫ್‌ಓ ಮತ್ತು ಇಎಸ್‌ಐ ಪಾವತಿಸಬೇಕು. ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ಬೇರೆ ನೌಕರರನ್ನು ಬದಲಾವಣೆ ಅಥವಾ ವರ್ಗಾವಣೆ ಮಾಡಬಾರದು. ಕೂಡಲಸಂಗಮದ 33 ಹಾಗೂ110 ಕೆ.ವಿ ವಿದ್ಯುತ್‌ ವಿತರಣೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಗುತ್ತಿಗೆ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕೆ ಕೆಲಸದಿಂದ ತೆಗೆದು ಹಾಕಲಾಗಿದೆ.ಇದರಿಂದ ಬಡ ಗುತ್ತಿಗೆ ನೌಕರರು ಬೀದಿಗೆ ಬಂದಿದ್ದಾರೆ. ಅಲ್ಲದೇ ಗುತ್ತಿಗೆದಾರರ ಷರತ್ತುಗಳ ಕ್ರಮ ಸಂಖ್ಯೆ 36(ಎ), (ಬಿ), (ಸಿ) ಅನ್ವಯ ಗುತ್ತಿಗೆ ನೌಕರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸರ್ಕಾರದ ನಿಮಯಾವಳಿ ಪ್ರಕಾರ, ಗುತ್ತಿಗೆದಾರರಿಂದ ನೌಕರರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್‌ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಳೆದ ಒಂದುವರ್ಷದಿಂದ ಅಧಿಕಾರಿಗಳ ಭರವಸೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದು,ಕುಟುಂಬ ನಿರ್ವಹಣೆ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾಡಳಿತಅಗತ್ಯ ಕ್ರಮ ಕೈಗೊಳ್ಳದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆನೀಡಿದರು.

Advertisement

ಕರ್ನಾಟಕ ರಾಜ್ಯ ವಿದ್ಯುತ್‌ ಗುತ್ತಿಗೆ ನೌಕರರ ಸಂಘದ ಗೌರವಅಧ್ಯಕ್ಷ ಎಚ್‌. ಜಗದೀಶ, ಪ್ರಧಾನ ಕಾರ್ಯದರ್ಶಿ ಬಿ. ರಮೇಶ, ಖಜಾಂಚಿ ಬಿ. ವಿಜಯ, ಸಂಘಟನಾಕಾರ್ಯದರ್ಶಿ ಎಚ್‌. ರಮೇಶ, ತಾಲೂಕು ಅಧ್ಯಕ್ಷ ಲಕ್ಷ್ಮಣ ಮಾದರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ದಲಿತ ಸೇನಾ ಸಮಿತಿ ಬೆಂಬಲ: ವಿದ್ಯುತ್‌ ಗುತ್ತಿಗೆ ನೌಕರರ ಹೋರಾಟಕ್ಕೆ ಕರ್ನಾಟಕ ದಲಿತ ಸೇನಾ ಸಮಿತಿಯ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಸಮಿತಿಯ ಜಿಲ್ಲಾಅಧ್ಯಕ್ಷ ಸತೀಶ ಮಾದರ, ಮಾದಿಗಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಸೋಮು ಚೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next