ಚಿಕ್ಕವರಿದ್ದಾಗ ನಮ್ಮ ಬೇಸಿಗೆ ರಜೆಗಳೆಲ್ಲ ಕಳೆಯುತ್ತಿದ್ದುದು ಅಜ್ಜನ ಮನೆಯಲ್ಲೇ. ನಾವು ಮಕ್ಕಳೆಲ್ಲ ಸೇರಿ ಆಡುವ ಆಟಗಳಿಗೆ ಎಣೆಯೇ ಇರುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಚೆಂದದ ಬೋರ್ಡಿನಲ್ಲಿ ತರ ತರ ಬಣ್ಣದ ಕಾಯಿನ್‌ಗಳಲ್ಲಿ ಸಿಗುವ ಲೂಡೋ ಆಟವನ್ನು ಅಂದು ನಾವು ಬಳೇವೋಡು ಆಟ (ವೋಡು = ಚೂರು) ಎಂದು ಕರೆಯುತ್ತಿದ್ದೆವು. ನಮಗೆಲ್ಲಿಯ ಬೋರ್ಡು, ಕಾಯಿನ್ಸ್ ? ಚೆನ್ನಾಗಿ ಸಗಣಿಯಲ್ಲಿ ಸಾರಿಸಿದ ಅಟ್ಟದ ಮೇಲೆ ಸೀಮೆಸುಣ್ಣದಲ್ಲಿ ಲೂಡೋ ನಕ್ಷೆ ಮನೆ ಬರೆದು… ನಮ್ಮದೇ ಒಡೆದ ಬಳೆಗಳ ಚೂರುಗಳನ್ನಾಯ್ದು… ಒಂದೇ ಬಣ್ಣದ ನಾಲುಕು ಬಳೇವೋಡು (ಬಳೆ ಚೂರು)ಗಳನ್ನು ಆರಿಸಿಕೊಂಡು, ಕವಡೆಗಳನ್ನು ಉಪಯೋಗಿಸಿಕೊಂಡು ಪಗಡೆಯಾಡುತ್ತಿದ್ದೆವು. ಎಲ್ಲಾ ಕವಡೆಗಳೂ ಹಿಮ್ಮುಖವಾಗಿ ಬಿದ್ದರೆ ಆರು, ಮೇಲ್ಮುಖವಾಗಿ ಬಿದ್ದರೆ ನಾಲ್ಕು… ಹೀಗೆ ಸಾಗುತ್ತಿದ್ದವು ಅಂಕಗಳು. ಆಟದಲ್ಲೊಮ್ಮೆ ನಾಲ್ಕೈದು ಬಾರಿ ಸೋತಾಕ್ಷಣ, ಹತಾಶಳಾಗಿ ನಾನು ಅಳುತ್ತಾ ಅಪ್ಪನ ಬಳಿ ಬಂದು ನನ್ನ ಪುಕಾರು ಹೇಳಿದ್ದೆ. “”ಅಪ್ಪ ನಾನಿನ್ನು ಈ ಆಟ ಆಡೋದಿಲ್ಲ… ಅವೆಲ್ಲಾ ಮೋಸದಾಟ ಆಡ್ತಿರ್ತಾರೆ… ಪ್ರತಿ ಸಲ ಸೋಲೋದು ನಾನೇ.. ನಂಗೆ ಈ ಆಟ ಬರುವುದಿಲ್ಲ…” ಎಂದು ಅತ್ತಿದ್ದೆ. ಆಗ ಅಪ್ಪಸಮಾಧಾನ ಮಾಡುತ್ತಾ… ಪಗಡೆಯಾಟದ ವಿಧಾನವನ್ನು, ಅದರ ಚಾಕಚಕ್ಯತೆಯನ್ನು ಕಲಿಸಿದ್ದಳು. “”ಕಳೆದುಕೊಂಡಲ್ಲೇ ಎಷ್ಟೋ ಸಲ ನಾವು ದುಪ್ಪಟ್ಟು ಪಡೆಯುವೆವು. ಸೋಲು ಅನ್ನೋದು ನೀನು ಸೋತೆ ಅಂದಾಗ ಮಾತ್ರ ಕಾಣಿಸಿಕೊಳ್ಳುವುದು. ಗೆಲುವನ್ನು ಅಲ್ಲೇ ಪಡೆಯಲು ನೋಡು…” ಎಂದೆಲ್ಲ ಹೇಳಿ ಹುರಿದುಂಬಿಸಿದ್ದರು. ಹೀಗೆ ಕ್ರಮೇಣ ನಾನೂ ಆ ಆಟದಲ್ಲಿ ಪರಿಣಿತಿ ಪಡೆದು ಗೆಲ್ಲತೊಡಗಿದ್ದೆ.
ಅಪ್ಪಸದಾ ಹೇಳುತ್ತಿರುತ್ತಾರೆ, “”ಪ್ರಜ್ಞಾಪೂರ್ವಕವಾಗಿ ಯಾರಿಗೂ ಅನ್ಯಾಯ ಮಾಡಬೇಡ, ನಿನ್ನೊಂದಿಗೆ ಅನ್ಯಾಯವಾಗುತ್ತಿರುವುದನ್ನು ಕಂಡೂ ಸುಮ್ಮನಿರಬೇಡ. ನಿನ್ನ ಹಕ್ಕಿಗೆ ನಿನ್ನ ಕೈಲಾದಷ್ಟು ಹೋರಾಡು” ಅಪ್ಪಹೀಗೆ ಸುಮ್ಮನೇ ಹೇಳಿಕೊಟ್ಟಿಲ್ಲ. ಸ್ವಯಂಬದುಕಿ ತೋರಿಸಿದ್ದಾರೆ ಮತ್ತು ನಾನು ನನ್ನ ಹಕ್ಕನ್ನು ಬಿಟ್ಟುಕೊಡದೇ, ಹಠ ಮತ್ತು ಛಲವ ತುಂಬಿಕೊಳ್ಳಲು ಪ್ರೇರೇಪಿಸುತ್ತಲೇ ಬಂದಿದ್ದಾರೆ. ತೀರಾ ಎಳವೆಯಲ್ಲೇ ಮನದೊಳಗೆ ಮೊಳೆ ಹೊಡೆದು ಕುಳಿತು, ಈಗಲೂ ನನ್ನೊಳಗೆ ಉಸಿರಾಡುತ್ತಿರುವ, ಹಲವು ಘಟನೆಗಳಲ್ಲಿ ಈ ಕೆಳಗಿನದೂ ಒಂದು! ನನ್ನ ಹಕ್ಕನ್ನು ನನಗೆ ದೊರಕಿಸಿದಂಥ ಘಟನೆಯದು.
ಹತ್ತಿರದಲ್ಲಿದ್ದ ಬಾಲವಾಡಿಯಲ್ಲಿ ಕಲಿತ ನಂತರ, ಒಂದನೆಯ ತರಗತಿಗೆ ದಾಖಲಾತಿ ಮಾಡಿಸಲು ಸಮೀಪದ ಸರ್ಕಾರಿ ಶಾಲೆಯೊಂದಕ್ಕೆ ಅಮ್ಮ ನನ್ನನ್ನು ಕರೆದುಕೊಂಡು ಹೋಗಿದ್ದಳು. ಅಪ್ಪಕಾಲೇಜಿನ ತುರ್ತು ಕೆಲಸದ ಮೇಲೆ ಹೋಗಿದ್ದರು. ಬೇರೇನೂ ನೆನಪಿಲ್ಲ. ಅಮ್ಮ ಅಳುತ್ತಿರುವುದು… ಪ್ರಿನ್ಸಿಪಾಲರ ಏನೋ ಸೂಚನೆ… ಯಾವುದೋ ಟೀಚರ್ ಅಮ್ಮನ ಸಮಾಧಾನಿಸುತ್ತಿರುವುದು… ಇವಿಷ್ಟೇ ಕಣ್ಣಿಗೆ ಇಂದೂ ಕಟ್ಟಿದಂತಿದೆ. ನನಗೆ ಅಮ್ಮನ ಅಳುವಿಗೆ ಕಾರಣ ಗೊತ್ತಾಗಿದ್ದೇ ಮೂರನೆಯ ತರಗತಿಗೆ ಬಂದ ಮೇಲೆ.. ಅದೂ ನಾನೇ ಖುದ್ದಾಗಿ ಕೇಳಲು ಸ್ಪಷ್ಟಪಡಿಸಿದ್ದು. ಆಗಿದ್ದಿಷ್ಟೇ… ಪ್ರಿನ್ಸಿಪಾಲರು ನನಗೆ ದಾಖಲಾತಿ ನೀಡಲು ನಿರಾಕರಿಸಿದ್ದರು. ಕಾರಣ ನನ್ನ ಅಂಗವಿಕಲತೆ! ಬೌದ್ಧಿಕವಾಗಿ ನಾನು ಎಲ್ಲಾ ಸಾಮಾನ್ಯ ಮಕ್ಕಳಷ್ಟೇ ಸಾಮರ್ಥಯವನ್ನು ಹೊಂದಿದ್ದರೂ, ಅವರಿಗೆ ನನ್ನ ಮೇಲೆ ವಿಶ್ವಾಸವಿರಲಿಲ್ಲ. ಅದೂ ಅಲ್ಲದೇ ನನ್ನಿಂದ ಶಿಕ್ಷಕರಿಗೆ ಹಾಗೂ ಇತರ ಮಕ್ಕಳಿಗೆ ಅನಗತ್ಯ ತೊಂದರೆ ಆಗಬಹುದೆಂಬ ಆತಂಕ ಬೇರೆ ಅವರಲ್ಲಿ ಕಾಡುತ್ತಿತ್ತು. ಮನೆಗೆ ಬಂದ ಅಪ್ಪ ವಿಷಯ ತಿಳಿದವರೇ, ಮರುದಿವಸ ನನ್ನನ್ನು ತಾನೇ ಕರೆದುಕೊಂಡು ಹೋಗಿ, ಅವರಿಗೆ ಸರಿಯಾಗಿ ಕಾನೂನನ್ನು ವಿವರಿಸಿ, ಖಡಕ್ಕಾಗಿ ಹೇಳಿದ್ದೇ, ಅಂದೇ ನಾನು ಒಂದನೆಯ ತರಗತಿಗೆ ಸೇರ್ಪಡೆಗೊಂಡಿದ್ದೆ ! ಆದರೆ ಅಪ್ಪ ಆ ಒಂದೇ ವರುಷ ಮಾತ್ರ ನನ್ನ ಅಲ್ಲಿ ಬಿಟ್ಟಿದ್ದು. ಮರುವರ್ಷವೇ ಕೆನರಾ ಪ್ರೈಮರಿಗೆ ಸೇರಿಸಿಬಿಟ್ಟಿದ್ದರು. “”ಒಂದೇ ವರುಷದ ಮಟ್ಟಿಗಾದರೂ ಸರಿಯೇ. ಅಲ್ಲಿನ ಮ್ಯಾನೇಜೆಟಿಗೆ ಅವರೆಷ್ಟು ತಪ್ಪು$ನಿರ್ಧಾರಕ್ಕೆ ತೊಡಗಿದ್ದರು ಎಂಬುದನ್ನು ತೋರಿಸಿದೆ. ಮತ್ತು ಬೇರೊಬ್ಬರಿಗೆ ನಮಗಾದ ರೀತಿಯ ಅನುಭವ ಆಗದಂತೇ ಮಾಡಿದೆ” ಎಂದು ಹೇಳಿದ್ದರು ಅಪ್ಪ. ನಾನೇನೂ ಇತರರಿಗಿಂತ ತೀರಾ ಭಿನ್ನ ಎಂದು ತುಂಬಾ ಚಿಂತಿಸದೇ ಮುಂದೆ ಹೋಗಲು, ಅಪ್ಪನ ಆ ಒಂದು ನಿರ್ಧಾರವೇ ನನ್ನೊಳಗೆ ಸ್ಫೂರ್ತಿ ತುಂಬಿದ್ದು. ಸರ್ಕಾರಿ ಶಾಲೆಯಲ್ಲಿದ್ದಾಗ, ನನ್ನ ಕ್ಲಾಸ್ ಟೀಚರ್ ಆಗಿದ್ದ ಲಿಂಗು ಮೇಡಮ್ ನನಗೆ ಆ ಒಂದು ವರ್ಷ ತೋರಿದ್ದ ಪ್ರೀತಿ, ಆತ್ಮೀಯತೆ ಮಾತ್ರ ಸದಾ ಸ್ಮರಣೀಯ.
ಅಮ್ಮ ಬಾಲವಾಡಿಯಿಂದಲೇ ನನ್ನನ್ನು ಸ್ಟೇಜ್ ಹತ್ತಿಸಿದ್ದಳು. ಭಾಷಣ, ಸಂಗೀತ, ಪ್ರಬಂಧ- ಹೀಗೆ ನನ್ನಿಂದ ಸಾಧ್ಯವಾಗುವ ಎಲ್ಲಾ ಸ್ಪರ್ಧೆಗಳಿಗೂ ನನ್ನ ಪ್ರೇರೇಪಿಸಿ ನಿಲ್ಲಿಸುತ್ತಿದ್ದಳು. ಭಾಷಣ ಸ್ಪರ್ಧೆ ನನ್ನಚ್ಚುಮೆಚ್ಚಿನ ಸ್ಪರ್ಧೆಯಾಗಿ ಬಿಟ್ಟಿತ್ತು. ಪ್ರತಿ ವರುಷವೂ ನಾನು ಬಹುಮಾನಗಳನ್ನು ಪಡೆಯುತ್ತಾ ಹೋದಂತೇ ಹೆಚ್ಚೆಚ್ಚು ಆತ್ಮವಿಶ್ವಾಸವೂ ನನ್ನೊಳಗೆ ಜಮೆಯಾಗತೊಡಗಿತ್ತು. ವೇದಿಕೆಯನ್ನೇರಿ ಕುಳಿತು ಸಭಿಕರನ್ನು ದಿಟ್ಟಿಸುತ್ತಲೇ ನಾನು ಸಮಾಜವನ್ನು ಎದುರಿಸುವ ಧೈರ್ಯವನ್ನು ಒಗ್ಗೂಡಿಸಿಕೊಂಡಿದ್ದು.
ನಮ್ಮ ಮನಸೇ ನಮಗೆ ಬಹು ದೊಡ್ಡ ಮಿತ್ರ ಮತ್ತು ಶತ್ರು! ಎಷ್ಟೋ ಸಲ ನಮಗೆ ನಾವೇ ಸಂಕೋಲೆಗಳನ್ನು, ಸಂಕೋಚದ ಬೇಲಿಗಳನ್ನು ಕಟ್ಟಿಕೊಂಡು ಬಿಡುತ್ತೇವೆ. ಅವರಿವರು ಏನೆನ್ನುವರೋ. ನಮ್ಮ ನೋಡಿ ಅಪಹಾಸ್ಯ ಮಾಡುವರೇನೋ ಎಂದು ಭಾವಿಸಿಕೊಂಡೇ ಮುಕ್ಕಾಲು ಪಾಲು ಜೀವನವನ್ನು ಸೆರೆಮನೆಯೊಳಗೇ ವಾಸಿಸಿಬಿಡುತ್ತೇವೆ. ಇದನ್ನು ನಿರ್ಲಕ್ಷಿಸಿ… ನಮ್ಮ ಅಂತರಾತ್ಮಕ್ಕೆ ನಾವು ಪ್ರಾಮಾಣಿಕರಾಗಿದ್ದರೆ ಸಾಕು ಎಂದುಕೊಂಡು ಹೊರಟರೆ, ಸ್ಪಷ್ಟ ದಾರಿ ನಿಚ್ಚಳವಾಗುವುದು. ಆದರೆ ಇದು ಸುಲಭವಲ್ಲ. ಅದರಲ್ಲೂ ಅಂಗವಿಕಲರನ್ನು, ಅನಗತ್ಯ/ಅತಿಯಾದ ಅನುಕಂಪದಲ್ಲೇ ನೋಡುವುದೋ, ಕೀಳರಿಮೆ ಬಿತ್ತುವ ಚುಚ್ಚು ಮಾತುಗಳನ್ನಾಡುವುದೋ… ಅಯ್ಯೋ ಪ್ರಾರಬ್ಧ ಕರ್ಮವೇ ಇದು ಎಂದು ನಮಗೇ ಇಲ್ಲದ ದುಃಖವನ್ನು ತಾವು ತಂದು ಗೋಳಾಡುವುದೋ- ಹೀಗೆ ಇಂಥಾ ಅಜ್ಞಾnನಿಗಳು, ಮೂರ್ಖರು ಹಲವರಿರುತ್ತಾರೆ. ಇಂಥವರ ನಡುವೆಯೇ… ಇಂಥಹ ಸಲ್ಲದ, ಕೆಟ್ಟ ಕುತೂಹಲದ ಪ್ರಶ್ನೆಗಳಿಗೆ ಕಿವುಡಾಗುತ್ತಲೇ ಮುಂದೆ ಸಾಗಬೇಕಾಗುತ್ತದೆ. ಅಂಥ ಸಮಯದಲ್ಲಿ ಹೆಜ್ಜೆ ಹೆಜ್ಜೆಗೂ ಬದುಕು ಸವಾಲಾಗಿ ಬಿಡುತ್ತದೆ. ಇದೊಂದು ನಿಲ್ಲದ ಪಯಣ… ನಿರಂತರ ಹೋರಾಟ. ಸ್ವತಂತ್ರವಾಗಿ ಜೀವಿಸುವ ಹಕ್ಕು ಎಲ್ಲಾ ಜೀವಿಗಳದ್ದೂ ಹೌದು. ನಮ್ಮ ಸಹಜೀವಿಗೆ ಕೈಲಾದಷ್ಟು ಸಹಕಾರ, ಜೊತೆಗೆ ಮಾನವೀಯತೆ ತುಂಬಿದ ಸಹೃದಯತೆ ಹೊಂದಿದ್ದರೆ ಸಾಕು, ಬೆಟ್ಟದಂಥ ಕಷ್ಟವೂ ಹತ್ತಿಯಂತೆ ಭಾಸವಾಗಿಬಿಡುತ್ತದೆ. ಅಂಥಾ ಅನೇಕಾನೇಕ ಸ್ನೇಹಪೂರ್ಣ ಕೈಗಳು, ಪ್ರೀತ್ಯಾದರ ತುಂಬಿದ ಮನಸುಗಳು ಜೀವನದುದ್ದಕ್ಕೂ ನನಗೆ ಲಭಿಸಿವೆ. ನೋವು ಕೊಟ್ಟ ಇದೇ ಸಮಾಜವೇ ಎಷ್ಟೋ ಸಲ ಚಿಕಿತ್ಸೆಯನ್ನೂ ನೀಡಿ, ತಂಪು ಕೊಟ್ಟಿದೆ. ಇದಕ್ಕಾಗಿ ನಾನು ನನ್ನ ದೈವಕ್ಕೆ ಚಿರ ಋಣಿ.
ಎನ್. ಎಸ್, ಲಕ್ಷ್ಮೀನಾರಾಯಣ ಭಟ್ಟರ ಕವಿತೆಯ ಸಾಲುಗಳು ನೆನಪಾಗುತ್ತಿವೆ…
ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ
ತೇಜಸ್ವಿನಿ ಹೆಗಡೆ