Advertisement

ಸೊರಗಿತು ಪೋತುರಾಜನ ಬಾರ್ಕೋಲಿನ ಆರ್ಭಟ

12:22 PM May 06, 2022 | Team Udayavani |

ವಾಡಿ: ಹಳ್ಳಿಯ ಬೀದಿಗಳಲ್ಲಿ ಬಾರ್ಕೋಲು ಬಾರಿಸುತ್ತ ಭಯ ಹುಟ್ಟಿಸುವ ಆರ್ಭಟದ ಕೂಗು ಮೊಳಗಿಸುತ್ತ ಮನೆಯಂಗಳಕ್ಕೆ ಬಂದು ಅಬ್ಬರಿಸುತ್ತಿದ್ದ ಪೋತುರಾಜರು ಇತ್ತೀಚೆಗೆ ತೀರಾ ಕಡಿಮೆ ಕಾಣುತ್ತಿದ್ದಾರೆ.

Advertisement

ತಲೆ ಮೇಲೆ ಮರಗಮ್ಮನನ್ನು ಮೂರ್ತಿ ಹೊತ್ತು ತಲೆತಲಾಂತರದ ಹರಕೆಯ ಹುರಿಯೊಳಗೆ ಬೆಂದು ಊರೂರು ಅಲೆಯುತ್ತಿದ್ದ ಮರಗಮ್ಮನ ಆಡಿಸುವವರ ಕಲೆ ಕಣ್ಮರೆಯಾಗುತ್ತಿದೆ. ಮೈಕೈ ರಕ್ತಗಾಯ ಮಾಡಿಕೊಂಡು ಗೆಜ್ಜೆನಾದದ ಸದ್ದಿಗೆ ಹೆಜ್ಜೆಯಿಡುತ್ತ ಮನರಂಜನೆ ನೀಡುತ್ತಿದ್ದ ಪೋತುರಾಜರು ಇತಿಹಾಸದ ಪುಟ ಸೇರಿಕೊಳ್ಳುತ್ತಿದ್ದಾರೆ.

ಮೊನ್ನೆಯಷ್ಟೇ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಾಜಿಸರ್ವರ್‌ ಜಾತ್ರೆಯಲ್ಲಿ ಕಣ್ಣಿಗೆ ಬಿದ್ದ ಈ ಪೋತುರಾಜ ಬಾರ್ಕೋಲು ಹಿಡಿದು ಹೆಜ್ಜೆ ಹಾಕುತ್ತಿದ್ದನಾದರೂ ಆತನ ಆರ್ಭಟ ಹಿಂದಿನಂತಿರಲಿಲ್ಲ. ಕೊರಳಿಗೆ ಡೋಲು ಹಾಕಿಕೊಂಡು ಬುರ್‌ಬುರ್‌ ಸಂಗೀತ ಹೊರಡಿಸುತ್ತಲೇ ಸುಣ್ಣದೆಲೆ ಜಿಗಿಯುತ್ತ ಬಾಯಿ ಕೆಂಪಾಗಿಸಿಕೊಂಡ ಹೆಂಗಸೊಬ್ಬಳ ತಲೆಯ ಮೇಲೆ ಮರಗಮ್ಮ ದೇವಿಯ ಮೂರ್ತಿ ಪೋತುರಾಜನ ಆರ್ಭಟಕ್ಕೆ ಕಾರಣವಾಗಿರುತ್ತಿತ್ತು.

ಅರೆಬೆತ್ತಲೆಯ ಪೋತುರಾಜ ಬಾರ್ಕೋಲು ಬೀಸಿ ಮೈ ದಂಡಿಸಿಕೊಳ್ಳುತ್ತ ಯಾರನ್ನೋ ಹುಡುಕುತ್ತ ಉಗ್ರ ರೂಪದಲ್ಲಿರುತ್ತಿದ್ದ. ಎದುರಿಗೆ ಬಂದವರು ಆತನ ಉಗ್ರಪ್ರತಾಪಕ್ಕೆ ಬೆಚ್ಚಿಬೀಳುತ್ತಿದ್ದರು. ಹರಿತವಾದ ಬ್ಲೇಡ್‌ನಿಂದ ಕೈಗೆ ಗಾಯಮಾಡಿಕೊಳ್ಳುವ ಆತನ ನೆತ್ತರ ದೇಹ ಕಂಡು ಗ್ರಾಮಸ್ಥರು ಭಿಕ್ಷೆ ನೀಡುತ್ತಿದ್ದರು. ಆತನ ಕಣ್ತಪ್ತಿಸಿಕೊಂಡು ಹೋಗುವವರನ್ನು ಅಡ್ಡಗಟ್ಟಿ ಅಬ್ಬರಿಸುವ ಆತನ ಪರಿ ನೋಡುಗರ ಎದೆ ಝಲ್‌ ಎನ್ನುವಂತಿರುತ್ತಿತ್ತು.

ಕಲ್ಯಾಣ ಕರ್ನಾಟಕದಲ್ಲಿ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದ್ದ ಪೋತುರಾಜರ ಆರ್ಭಟ ಇತ್ತೀಚೆಗೆ ತೆರೆಗೆ ಸರಿಯುತ್ತಿದೆ. ಊರೂರು ಸುತ್ತಿ ಕಲೆಯನ್ನು ಮೆರೆಸುತ್ತಿದ್ದವರು ಕಾಲನ ತೆಕ್ಕೆಗೆ ಸಿಲುಕಿ ಕಣ್ಮರೆಯಾಗುತ್ತಿದ್ದಾರೆ. ಇವರು ಹೊತ್ತು ತಿರುಗುತ್ತಿದ್ದ ಮಾರಮ್ಮ, ಮರಗಮ್ಮ, ದುರುಗಿ ಮುರುಗಿಯರು ಇವರ ಹಣೆಬರಹದಲ್ಲಿ ಭಿಕ್ಷಾಟನೆ ಬರೆದರಾದರೂ, ಪೋತುರಾಜರು ಬದುಕಲು ಸಾಧ್ಯವಾಗದೇ ಕಲೆಯನ್ನು ಸಹ ಪೋಷಣೆ ಮಾಡದೇ ಇರುವಂತ ಸ್ಥಿತಿಯಲ್ಲಿದ್ದಾರೆ.

Advertisement

ಮರುಗಮ್ಮನನ್ನು ಹೊತ್ತು ತಿರುಗುತ್ತಿದ್ದ ಈ ಅಲೆಮಾರಿ ಜನರು ಪೋತುರಾಜನ ಪೌರಾಣಿಕ ಕಥೆಯನ್ನು ಜೀವಂತವಾಗಿಟ್ಟಿದ್ದರು. ಮರುಗಮ್ಮನ ಸ್ಥುತಿ ಹಾಡುತ್ತ ಗಂಡಸರು ಚಾವಟಿಯಿಂದ ಬರಿ ಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಿದ್ದರು. ಈಗ ಈ ಕಲಾವಿದರ ಬದುಕು ಮಗ್ಗಲು ಬದಲಿಸಿದೆ. ಭಿಕ್ಷಾಟನೆಯಿಂದ ಹೊರಬಂದ ಕಾರಣ ಪೋತುರಾಜನ ವೇಷದ ಕಲೆ ಅಳಿಯಲು ಶುರುವಾಗಿದೆ. ರಂಗಾಯಣ ಮತ್ತು ಸಾಂಸ್ಕೃತಿಕ ಇಲಾಖೆಗಳು ಪೋತುರಾಜನ ಕಲೆ ಉಳಿಸಲು ರಂಗ ಸಿದ್ಧಗೊಳಿಸಬೇಕು ಎಂಬುದು ಜನಪದರ ಒತ್ತಾಸೆಯಾಗಿದೆ.

ಭಯ ಹುಟ್ಟಿಸುವ ಪೋತುರಾಜನ ವೇಷ-ಭೂಷಣ ಪೋತುರಾಜರ ವೇಷ ಭೂಷಣ ನೋಡಲು ಭಯಂಕರವಾಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಮುಖಕ್ಕೆ ಅರಿಶಿಣ, ಹಣೆಗೆ ದೊಡ್ಡ ವೃತ್ತಾಕಾರದ ಕುಂಕುಮ, ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿಣ ಮತ್ತು ಕುಂಕುಮ ಭಂಡಾರದ ಲೇಪನ, ಕೈ ರಟ್ಟೆಗೆ ಬೆಳ್ಳಿ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಗೆಜ್ಜೆ ಸರ, ನೀರಿಗೆಯಾಗಿ ಕಟ್ಟಿದ ಸೀರೆಯೇ ಉಡುಪು, ಕೈಯಲ್ಲಿ ಚಾವಟಿ.

ಆತನ ಜತೆಗೆ ಬರುವ ಹೆಣ್ಣಿನದ್ದು (ಆತನ ಹೆಂಡತಿ) ಬೇರೆಯದ್ದೇ ವೇಷ. ಮಾಮೂಲಿ ಹೆಂಗಸಿನ ವೇಷವಾದರೂ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ವಿವಿಧ ಬೆಳ್ಳಿಯ ಒಡೆವೆಗಳಿರುತ್ತವೆ. ನಡುವಿನಲ್ಲಿ ಒಂದು ಕಡೆ ಬಟ್ಟೆಯಲ್ಲಿ ತೂಗು ಹಾಕಿಕೊಂಡ ಮಗು, ಇನ್ನೊಂದು ಕಡೆ ಭಿಕ್ಷೆ ಸಂಗ್ರಹಿಸುವ ಸೆರಗಿನ ಚೀಲ, ಕುತ್ತಿಗೆಗೆ ನೇತು ಬಿದ್ದ ಉರುಮೆ ವಾದ್ಯ, ಈ ವಾದ್ಯದ ಒಂದು ಕಡೆಯಿಂದ ಬಡೆಯುತ್ತ ಇನ್ನೊಂದು ಕಡೆಯಿಂದ ಜಜ್ಜುತ್ತಾರೆ. ಇದೊಂಥರ ಪೋತುರಾಜನಿಗಾಗಿಯೇ ವಿಶಿಷ್ಟ ಸಂಗೀತ ನೀಡುವ ವಾದ್ಯ ಎಂದು ಗುರುತಿಸಬಹುದಾಗಿದೆ.

ಈ ಸದ್ದು ಕೇಳಿದರೆ ಸಾಕು ಪೋತುರಾಜ ಬಂದನೆಂದೇ ಅರ್ಥ. ಇವರು ತೊಡುವ ವೇಷ ಭೂಷಣ ವಿಚಿತ್ರವಾಗಿದ್ದರೂ ಪ್ರದರ್ಶಿಸುವ ಕಲೆ ಮಾತ್ರ ಜನಪದರ ಶ್ರೇಷ್ಠತೆ ಸಾರುತ್ತದೆ. ಆದರೆ ಈ ಕಲೆ ಈಗ ಅಪರೂಪ ಎಂಬಂತೆ ಆಗಾಗ ಕಣ್ಣಿಗೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಈ ಪೋತುರಾಜರು ದಂತಕಥೆಯಾಗುವುದರಲ್ಲಿ ಅನುಮಾನವಿಲ್ಲ.

ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next