Advertisement
4 ತಿಂಗಳ ಬಳಿಕ ಕ್ರಮಕುಟ್ರಾಪ್ಪಾಡಿ ಗ್ರಾಮದ ಸರ್ವೆ ನಂ. 40ರಲ್ಲಿ ಇರುವ ಹಳೆ ಸ್ಟೇಶನ್‌ನ ಪೊಟ್ಟುಕೆರೆಯನ್ನು ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಇದೀಗ ಸರಕಾರಿ ಜಾಗ ಎಂದು ದಾಖಲಿಸಲಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಅಕ್ರಮ ತಿದ್ದುಪಡಿಯ ಹಿಂದೆ ಕೆರೆಯನ್ನು ಆತಿಕ್ರಮಣಗೊಳಿಸುವ ಹುನ್ನಾರ ಇರುವುದನ್ನು ಮನಗಂಡು ಅಕ್ರಮ ತಿದ್ದುಪಡಿಯನ್ನು ಸರಿಪಡಿಸಿ ಸದ್ರಿ ಪ್ರದೇಶವನ್ನು ಮತ್ತೆ ಕೆರೆ ಪರಂಬೋಕು ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ಪಂ. ವತಿಯಿಂದ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಹಾಗೂ ಕಡಬ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ನಾಲ್ಕು ತಿಂಗಳ ಬಳಿಕ ಪಹಣಿ ಪತ್ರದಲ್ಲಿನ ತಪ್ಪನ್ನು ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿದೆ.
ಹಳೆಯ ಕಡತಗಳಲ್ಲಿ ಹಾಗೂ ಪಹಣಿಪತ್ರಗಳಲ್ಲಿ ಕೆರೆ ಪರಂಬೋಕು ಎಂದೇ ದಾಖಲಾಗಿದ್ದ ಈ ಭೂಮಿಯನ್ನು ಕೆಲವು ವರ್ಷಗಳ ಹಿಂದೆ ಏಕಾಏಕಿ ಸರಕಾರಿ ಜಮೀನು ಎಂದು ಪಹಣಿಯಲ್ಲಿ ದಾಖಲಿಸಿರುವುದರ ಹಿಂದೆ ಕೆರೆಯನ್ನು ಕಬಳಿಸುವ ಉದ್ದೇಶ ಇದೆ ಎಂದು ಸ್ಥಳೀಯರು ಆರೋಪಿಸಿದ್ದರು. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಯ ಜಮೀನನ್ನು ಸರಕಾರಿ ಎಂದು ನಮೂದಿಸಲಾಗಿದೆ. ಒಂದು ಭಾಗದಲ್ಲಿ ಕಲ್ಲು, ಮಣ್ಣು ತುಂಬಿರುವುದರಿಂದ ಕೆರೆಯ ಗಾತ್ರ ಸಾಕಷ್ಟು ಕಿರಿದಾಗಿದೆ. ಕೆರೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಆದೇಶ ಹೊರಡಿಸಿರುವ ಸರಕಾರ ಸದ್ರಿ ಕೆರೆಯ ಅತಿಕ್ರಮಣದ ಸಂಚನ್ನು ವಿಫಲಗೊಳಿಸಿ ಕೆರೆಯನ್ನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಉದಯವಾಣಿ ‘ಸುದಿನ’ ಈ ಕುರಿತು ಎರಡು ಸಚಿತ್ರ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಿತ್ತು. ಪ್ರಸ್ತಾವನೆಗೆ ಸೂಚನೆ
ಸುದಿನ ವರದಿಗಳು ಹಾಗೂ ಪಂಚಾಯತ್ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಕಡಬ ವಿಶೇಷ ತಹಶೀಲ್ದಾರರಿಗೆ ಪತ್ರ ಬರೆದು ಅಕ್ರಮ ತಿದ್ದುಪಡಿಯ ಬಗ್ಗೆ ಪರಿಶೀಲನೆ ನಡೆಸಿ ವಿವರವಾದ ವರದಿಯೊಂದಿಗೆ ಪಹಣಿ ತಿದ್ದುಪಡಿ ಬಗ್ಗೆ ಆರ್.ಆರ್.ಟಿ. ಶಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.
Related Articles
ಹಳೆಯ ಕೈಬರಹದ ಪಹಣಿಪತ್ರ ಅಕ್ರಮವಾಗಿ ತಿದ್ದಿ ಸರಕಾರಿ ಜಮೀನು ಎಂದು ತಿದ್ದುಪಡಿಗೊಳಿಸಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ ಹಾಗೂ ಕಡಬ ತಹಶೀಲ್ದಾರರಿಗೆ ಪತ್ರ ಬರೆದು ತಪ್ಪನ್ನು ಸರಿಪಡಿಸುವಂತೆ ಒತ್ತಾಯಿಸಿದ್ದೆವು. ಗ್ರಾಮದ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಏರಿಕೆಯಾಗಲು ಪ್ರಯತ್ನಿಸಬೇಕೆನ್ನುವ ಸೂಚನೆ ಸರಕಾರದಿಂದ ಇದೆ. ನಮ್ಮ ದೂರಿಗೆ ಸ್ಪಂದಿಸಿರುವ ಕಂದಾಯ ಇಲಾಖೆ ಇದೀಗ ತಪ್ಪನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ.
-ವಿ ಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕುಟ್ರಾಪ್ಪಾಡಿ ಪಿಡಿಒ
Advertisement
— ನಾಗರಾಜ್ ಎನ್.ಕೆ.