Advertisement

ಪಾಟರಿ ಟೌನ್‌ ಗಣಪನಿಗೆ ಈ ವರ್ಷ ಡಿಮಾಂಡ್‌

11:30 AM Aug 16, 2017 | Team Udayavani |

ಬೆಂಗಳೂರು: ಈ ಬಾರಿಯ ಗೌರಿ-ಗಣೇಶ ಹಬ್ಬ ಪ್ರಯುಕ್ತ ನಗರದೆಲ್ಲಡೆ ಗೌರಿ-ಗಣಪ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ಈ ಬಾರಿ ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರೀಸ್‌) ಮೂರ್ತಿಗಳ ನಿಷೇಧ ಹಿನ್ನೆಲೆಯಲ್ಲಿ ನಗರದ  ಪರಿಯಾರ್‌ ನಗರ ಸರ್ಕಲ್‌ ಬಳಿ ಇರುವ ಪಾಟರಿ ಟೌನ್‌ನಲ್ಲಿ ಕುಂಬಾರರ ಕೈಯಲ್ಲಿ ತಯಾರಾಗುತ್ತಿರುವ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. 

Advertisement

ಪಾಟರಿಟೌನ್‌ ಮೊದಲಿನಿಂದಲೂ ಮಣ್ಣಿನ ಮಡಕೆ ಸೇರಿದಂತೆ ಗಣಪ ಸೇರಿ ವಿವಿಧ ದೇವರ ಮೂರ್ತಿಗಳ ತಯಾರಿಕೆಗೆ ಖ್ಯಾತಿ ಪಡೆದಿದೆ. ಆದರೆ,  ಈ ಬಾರಿ ಪಿಒಪಿ ಗಣಪ-ಗೌರಿ ಮೂರ್ತಿಗಳಿಗೆ ನಿಷೇಧ ಇರುವುದರಿಂದ ಇಲ್ಲಿನ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬಂದಿದೆ. 

ಗಣೇಶ  ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಇಲ್ಲಿ ಗೌರಿ-ಗಣಪ ಮೂರ್ತಿಗಳ ತಯಾರಿಕೆ ಕಾರ್ಯ ಆರಂಭವಾಗುತ್ತದೆ. ಕುಂಬಾರರ ಕುಟುಂಬ ಸದಸ್ಯರೆಲ್ಲಾ ಸೇರಿ ಮಣ್ಣಿನ ಗೌರಿ-ಗಣಪ ಮೂರ್ತಿ ತಯಾರಿಸಲು ಮುಂದಾಗುತ್ತಾರೆ. ಸಂಪೂರ್ಣವಾಗಿ ಮಣ್ಣಿನಿಂದ ಮಾಡುವ ಮೂರ್ತಿ ಒಣಗಲು ಸಮಯ ಬೇಕಾಗುತ್ತದೆ. ಮೂರ್ತಿಗಳಿಗೆ ಬಣ್ಣ ಹಚ್ಚುವುದು ಮಾತ್ರ ಹಬ್ಬಕ್ಕೆ ಎರಡು ಮೂರು ದಿನಗಳ ಮುಂಚೆ. ಗೌರಿ-ಗಣಪ ಮೂರ್ತಿಗಳಿಗೆ ಬೇಡಿಕೆ ಆಧಾರದ ಮೇಲೆ ಬಣ್ಣ ಹಚ್ಚಿ ಮಾರುಕಟ್ಟೆಗೆ ಪೂರೈಕೆ ಮಾಡುತ್ತಾರೆ.

ಮಣ್ಣಿನಿಂದ ಮಾಡುವ ಮೂರ್ತಿಗಳ ತೂಕ ಸಾಮಾನ್ಯವಾಗಿ ಹೆಚ್ಚು. ಹಾಗಾಗಿಯೇ ಇವರು 2ರಿಂದ 3 ಅಡಿಯ ಗಣಪತಿ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದಾರೆ. ಅದಕ್ಕೂ ಹೆಚ್ಚಿನ ಎತ್ತರದ ಮೂರ್ತಿಗಳು ಬೇಕಾಕೆನ್ನುವವರು ಪಾಂಡೀಚೆರಿ ಮೂಲದ ಪೇಪರ್‌ ಗಣಪತಿ ಮೂರ್ತಿಗಳನ್ನೇ ಜನರು ಕೊಂಡುಕೊಳ್ಳಬೇಕು ಎನ್ನುತ್ತಾರೆ ವ್ಯಾಪಾರಿ ಮೂರಳಿ ಬೋಜಿ. 

ಬ್ರಿಟಿಷರ ಕಾಲದಿಂದಲೂ ತಯಾರಿಕೆ
ಸ್ವಾತಂತ್ರ್ಯಕ್ಕೂ ಮುನ್ನ ತಮಿಳು ನಾಡು, ಆಂಧ್ರ ದಿಂದ ಇಲ್ಲಿಗೆ ವಲಸೆ ಬಂದಿರುವ ಈ ಕುಂಬಾರರಿಗೆ ಬ್ರಿಟಿಷ್‌ ಅಧಿಕಾರಿಗಳು ಅಂದು ಕುದುರೆ ಕಟ್ಟುತ್ತಿದ್ದ ಜಾಗವನ್ನು ಬಿಟ್ಟು ಕೊಟ್ಟಿದ್ದರು. 150 ವರ್ಷಗಳಿಂದಲೂ ವಂಶ ಪಾರಂಪರ್ಯವಾಗಿ ಇಲ್ಲಿ ಮಣ್ಣಿನ ಮಡಿಕೆ, ದೇವರ ಮೂರ್ತಿಗಳನ್ನು ತಯಾರಿ ಸಲಾಗುತ್ತಿದೆ. ಜೇಡಿ ಮಣ್ಣನ್ನು ಬೆಂಗಳೂರಿನ ಸುತ್ತ ಮುತ್ತಲಿನ ಹಳ್ಳಿಗಳಿಂದ ಲಾರಿ ಲೋಡಿಗೆ 3ರಿಂದ 4 ಸಾವಿರ ಕೊಟ್ಟು ತರಲಾಗುತ್ತದೆ.

Advertisement

ಮಳೆಗಾಲದಲ್ಲಿ ಜೇಡಿ ಮಣ್ಣು ಸಿಗುವುದು ಕಷ್ಟ. ಈ ಬಾರಿ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿರುವುದರಿಂದ ನಮ್ಮ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಈ ಬಾರಿ ಯಾದರು ಉತ್ತಮ ವ್ಯಾಪಾರವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮೂರ್ತಿ ತಯಾರಕ ಜಿ. ಪ್ರಕಾಶ್‌.  

ಬಣ್ಣವಿಲ್ಲದ ಸಾದಾ ಮೂರ್ತಿಗಳಿಗೆ ಬೇಡಿಕೆ ಇದೆ. ಜನ ಕೇಳಿದರೆ ಮಾತ್ರ ಬಣ್ಣ ಹಚ್ಚಿಕೊಡುತ್ತೇವೆ. 
-ಮೂರಳಿ ಬೋಜಿ, ವ್ಯಾಪಾರಿ. 

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next