ಹೊಸಪೇಟೆ: ವಿದೇಶಗಳಲ್ಲಿ ಕನ್ನಡದ ಬೀಜ ಬಿತ್ತಿ ಬೆಳೆಸುವ ಕೆಲಸ ಮಾಡಿದವರು ಯಾರು ಎಂದರೆ, ಅದು ಡಾ| ಚಂದ್ರಶೇಖರ ಕಂಬಾರರು ಎಂದು ಧಾರವಾಡದ ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ, ನಾಡೋಜ ಡಾ| ಚಂದ್ರಶೇಖರ ಕಂಬಾರ ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಸಾಹಿತ್ಯ ಸಂವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಾ| ಚಂದ್ರಶೇಖರ ಕಂಬಾರ ಅವರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಗೌರವ ಬಂದಿದೆ. ಕನ್ನಡ ವಿಶ್ವವಿದ್ಯಾಲಯದ ಮೂಲಕ ಕನ್ನಡ ಕುಲಕೋಟಿ ಕಟ್ಟಿದ್ದಾರೆ. ನಾಟಕ ಎಂದರೆ ನೆನಪಾಗುವುದು ಪ್ರತಿಯೊಂದು ಕಿವಿ ಕಣ್ಣಿಗೆ ಕಂಬಾರರ ನಾಟಕಗಳು. ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡ ನಾಟಕಗಳನ್ನು ಕಲ್ಪನಾಶಕ್ತಿ ಮತ್ತು ನಿರ್ಧಾರಗಳಿಂದ ಬರೆದಿದ್ದಾರೆ ಎಂದರು.
ಬಸವರಾಜ ಕಟ್ಟಿಮನಿ ಮತ್ತು ಅಡಿಗರು ಕಂಬಾರರ ಆಪ್ತ ಗೆಳೆಯರು. ಕಂಬಾರರ ಸಂಪೂರ್ಣ ವ್ಯಕ್ತಿತ್ವ ಬಿಂಬಿಸುವ ಕೃತಿ ಎಂದರೆ ಮುಗುಳು. ಇದರಲ್ಲಿ ಅದ್ಭುತ ಭಾಷಾ ಪ್ರೌಢಿಮೆ ಇದೆ. ಅಲ್ಪ ಅಹಂಕಾರ ಮತ್ತು ಅತ್ಯಂತ ಸ್ವಾಭಿಮಾನ ಕಂಬಾರರನ್ನು ಬೆಳೆಸಲು ಕಾರಣವಾಯಿತು ಎಂದು ತಿಳಿಸಿದರು. ಭೂಸನೂರ ಮಠ ಮತ್ತು ಸಾವಳಗಿ ಮಠ ಕಂಬಾರರ ಇಷ್ಟ ದೈವಗಳು. ಶಿವರಾತ್ರಿ ಕೃತಿಯಲ್ಲಿ ಶರಣ ಸಂಸ್ಕೃತಿಯನ್ನು ಬೇರೆ ಬೇರೆ ರೀತಿಯಲ್ಲಿ ಪರೀಕ್ಷಿಸುವ ಪಾತ್ರಗಳಿವೆ. ಮಹಮ್ಮದ್ ಗವಾನ ಕೃತಿಯಲ್ಲಿ ವಯಸ್ಸಿನೊಂದಿಗೆ ಚಿಂತನೆ ಪರಿಪಕ್ವಗೊಳಿಸುವ ಪಾತ್ರಗಳಿವೆ.
ಇವರು ಆಶಾವಾದಿ ಹಾಗೂ ಖಚಿತ ನಿಲುವಿನ ವ್ಯಕ್ತಿ. ಇವರ ಬರವಣಿಗೆಗೆ ವಿಶ್ರಾಂತಿ ಇಲ್ಲ. ಕಾಯಕದ ಮೂಲಕ ವಿಮುಖತೆ ಹುಟ್ಟಿಸುವ ಪ್ರಯತ್ನ ಇವರ ಕೃತಿಗಳಲ್ಲಿವೆ ಎಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಚಂದ್ರಶೇಖರ ಕಂಬಾರ, ಕನ್ನಡ ವಿಶ್ವವಿದ್ಯಾಲಯಕ್ಕೆ ಬಿಬಿಸಿಯವರು ಇದೊಂದು ವಿಶಿಷ್ಟ ವಿಶ್ವವಿದ್ಯಾಲಯ ಎಂದು ಪರಿಗಣಿಸಿ ಇಲ್ಲಿಗೆ ಬಂದು ಚಿತ್ರೀಕರಣ ಮಾಡಿಕೊಂಡಿದ್ದರು. ರವೀಂದ್ರನಾಥ್ ಠಾಕೂರ್ ಅವರು ಹಂಪಿ ಕನ್ನಡ ವಿವಿಯ ಶಾಂತಿ ನಿಕೇತನವಾಗಿದೆ ಎಂದು ಬರೆದಿಟ್ಟಿದ್ದಾರೆ ಎಂದರು. ಕುಲಪತಿ ಡಾ| ಮಲ್ಲಿಕಾ ಎಸ್. ಘಂಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕನ್ನಡ ವಿಶ್ವವಿದ್ಯಾಲಯದಿಂದ ಡಾ| ಚಂದ್ರಶೇಖರ ಕಂಬಾರ ದಂಪತಿ ಸನ್ಮಾನಿಸಲಾಯಿತು. ಕುಲಸಚಿವ ಡಾ| ಮಂಜುನಾಥ ಬೇವಿನಕಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.