ಇಂಡಿ: ಪಟ್ಟಣದಿಂದ ಅಗರಖೇಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಅದರಲ್ಲಿ ಮೊಳಕಾಲವರೆಗೆ ಚರಂಡಿ ನೀರು ಸಂಗ್ರಹವಾಗಿದ್ದು ವಾಹನ ಸವಾರರು ಎಷ್ಟೋ ಬಾರಿ ಕೈ ಕಾಲು ಮುರಿದುಕೊಂಡ ಘಟನೆಗಳು ನಡೆದಿದೆ.
ಕಳೆದ ಎರಡು ತಿಂಗಳಿಂದ ತಗ್ಗಿನಲ್ಲಿ ನೀರು ಸಂಗ್ರಹವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇದುವರೆಗೂ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಅಗರಖೇಡ ರಸ್ತೆ ಪಟ್ಟಣದಿಂದ ಒಂದು ಕಿ.ಮೀ. ವರೆಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಪುರಸಭೆಯವರು ದುರಸ್ತಿ ಮಾಡಬೇಕು. ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದುರಸ್ತಿ ಮಾಡಬೇಕು ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಾದ.
ಆ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಈಗಾಗಲೇ ಹತ್ತಾರು ವಾಹನಗಳು ಗುಂಡಿಯಲ್ಲಿ ಬಿದ್ದು ಕೈ ಕಾಲು ಕೆತ್ತಿಕೊಂಡ ಉದಾಹರಣೆಗಳು ಬಹಳಷ್ಟಿವೆ. ಇನ್ನೂ ಕೆಲವು ದಿನ ಬಿಟ್ಟರೆ ಬಹುತೇಕ ಪ್ರಯಾಣಿಕರು ಅಥವಾ ವಾಹನ ಸವಾರರು ಆ ಗುಂಡಿಗಳಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ರಾತ್ರಿ ಹೊತ್ತಿನಲ್ಲಿ ಸರಿಯಾಗಿ ರಸ್ತೆ ಕಾಣಲ್ಲ. ಅಲ್ಲದೆ ಆ ರಸ್ತೆಗೆ ಹೊಸದಾಗಿ ಯಾರಾದರೂ ವಾಹನ ಸವಾರರು ಬಂದರೆ ಗುಂಡಿಗಳ ಆಳ ತಿಳಿಯದೇ ಗುಂಡಿಯಲ್ಲಿ ಬೀಳಬಹುದಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಗುಂಡಿಯನ್ನು ಮುಚ್ಚಿ ಅನಾಹುತವನ್ನು ತಪ್ಪಿಸಬೇಕು ಎಂಬುವುದು ನಾಗರಿಕರ ಆಗ್ರಹವಾಗಿದೆ.
ಬಹಳ ದಿನಗಳಿಂದ ನೀರು ಸಂಗ್ರಹವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆ ಪಕ್ಕದಲ್ಲಿ ಚರಂಡಿ ನೀರು ಹೋಗಲು ಚರಂಡಿ ತೆಗೆಯಬೇಕು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ಅನವು ಮಾಡಿಕೊಡಬೇಕೆಂಬುವುದು ನಾಗರಿಕರ ಆಗ್ರಹವಾಗಿದೆ.
ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹವಾಗಿ ಗಬ್ಬು ವಾಸನೆ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪುರಸಭೆಯವರಿಗೆ ರಸ್ತೆ ಅಥವಾ ದುರಸ್ತಿ ಮಾಡುವಂತೆ ಪತ್ರ ಬರೆದಿದ್ದೇವೆ. ನಾಳೆ ಖುದ್ದಾಗಿ ಸ್ಥಳಕ್ಕೆ ಭೆಟಿಯಾಗಿ ಸಮಸ್ಯೆ ಬಗೆಹರಿಸುತ್ತೇನೆ.
-ವಿವೇಕ್ ಮಠ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಅಭಿಯಂತರು