ಕಾಸರಗೋಡು: ನೆರಳು ನೀಡುವ ಮರದಲ್ಲಿ ಗೂಡು ಕಟ್ಟಿರುವ ನೂರಕ್ಕೂ ಅಧಿಕ ಹಕ್ಕಿಗಳನ್ನು ಸಂರಕ್ಷಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು 25 ದಿನಗಳ ಕಾಲ ಮುಂದೂಡಿದೆ.
ಚೆರ್ಕಳ ಜಂಕ್ಷನ್‌ನಲ್ಲಿ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿರುವ ಬೃಹತ್ ಮರದಲ್ಲಿ ಕೊಕ್ಕರೆಗಳ 18 ಗೂಡು, ನೀರು ಕಾಗೆಗಳ 10 ಗೂಡುಗಳಿವೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳ ಅಂಗವಾಗಿ ಕಳೆದ ಶುಕ್ರವಾರ ಈ ಮರದ ಮೇಲೆ ಹಾದು ಹೋಗುವ ಎಚ್.ಟಿ. ವಿದ್ಯುತ್ ಲೈನ್ ಅನ್ನು ಬದಲಿಸಲು ಮೆಗಾ ಕನ್‌ಸ್ಟ್ರಕ್ಷನ್ ಕಂಪೆನಿಯ ಇಲೆಕ್ಟ್ರಿಕಲ್ ವಿಭಾಗ ಜನರಲ್ ಮ್ಯಾನೇಜರ್ ಕೆ.ರಮಣ ಸ್ಥಳಕ್ಕೆ ಭೇಟಿ ನೀಡಿದಾಗ ಹಕ್ಕಿಗಳ ಗೂಡುಗಳು ಕಂಡು ಬಂದಿದೆ. ಈ ಮರ 12 ಮೀ. ಎತ್ತರದಲ್ಲಿ, 10 ಮೀ. ವ್ಯಾಪ್ತಿಯಲ್ಲಿ ವ್ಯಾಪಿಸಿದೆ.
ಮರದಲ್ಲಿ ಗೂಡುಗಳು ಕಂಡು ಬಂದ ಕಾರಣ ಈ ಬಗ್ಗೆ ಕಂಪೆನಿಯ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದರು. ಇವರು ಗೂಡುಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಯ ಸಹಾಯದೊಂದಿಗೆ ಫಾರೆಸ್ಟ್ರಿ ಡೆಪ್ಯೂಟಿ ಕನ್ಸರ್ವೇಟರ್ ಪಿ.ಧನೇಶ್ ಕುಮಾರ್ ಹಾಗೂ ಹಕ್ಕಿ ವೀಕ್ಷಕ ರಾಜು ಕಿದೂರು ಮರ ಹಾಗು ಗೂಡನ್ನು ಪರಿಶೀಲಿಸಿದಾಗ ಜುಲೈಯಿಂದ ಅಕ್ಟೋಬರ್ ವರೆಗೆ ಇಲ್ಲಿರುವ ಹಕ್ಕಿಗಳ ಸಂತಾನೋತ್ಪತ್ತಿ ಕಾಲವಾದ ಕಾರಣ ಇಲ್ಲಿಂದ ಬದಲಿಸಿದರೆ ಸತ್ತು ಹೋದಿತೆಂದು ವಿವರಿಸಿದರು.
ಹಕ್ಕಿಗಳನ್ನು ತೆಗದು ಇನ್ನೊಂದೆಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಮರವನ್ನು ಬಿಟ್ಟು ಹೋಗುವವರೆಗೆ ಸಂರಕ್ಷಿಸಬೇಕು. ಇದರಂತೆ 25 ದಿನಗಳ ವರೆಗೆ ಗೂಡುಗಳನ್ನು ವೀಕ್ಷಿಸಿ ಇವುಗಳು ಹಾರಿ ಹೋಗಿದ್ದರೆ ಮರವನ್ನು ಕಡಿಯಲು ನಿರ್ದೇಶಿಸಲಾಯಿತು.