ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದು ಶಾಸಕಾಂಗ ಸಭೆಗೂ ಹಾಜರಾಗದ ನಾಲ್ವರು ಕಾಂಗ್ರೆಸ್ ಶಾಸಕ ವಿರುದ್ಧ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ದೂರಿನನ್ವಯ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಮಾರ್ಚ್ 12 (ಮಂಗಳವಾರ) ಕರೆದಿದ್ದ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ಕುರಿತಂತೆ ನಾಲ್ವರು ಅತೃಪ್ತ ಶಾಸಕರಿಗೂ ಸಭಾಧ್ಯಕ್ಷರ ಕಚೇರಿಯಿಂದ ವಿಚಾರಣೆ ಮುಂದೂಡಿಕೆಯಾಗಿರುವ ಬಗ್ಗೆ ಮಾಹಿತಿ ಕಳುಹಿಸಲಾಗಿದೆ. ಆದರೆ, ಮುಂದಿನ ವಿಚಾರಣೆ ಯಾವಾಗ ನಡೆಸಲಾಗುವುದು ಎನ್ನುವ ಬಗ್ಗೆ ಅಧಿಕೃತ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಸಧ್ಯ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ವಿಚಾರಣೆ ನಡೆಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾಧವ್‌ಗೆ ವಿವರಣೆಗೆ ನೊಟೀಸ್
ಈಗಾಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಉಮೇಶ್ ಜಾಧವ್ ಅವರ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ. ಅವರ ರಾಜೀನಾಮೆ ಬಗ್ಗೆ ವಿವರಣೆ ನೀಡುವಂತೆ ಸ್ಪೀಕರ್ ರಮೇಶ್ ಕುಮಾರ್ ಮತ್ತೂಂದು ನೊಟೀಸ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಖುದ್ದು ಭೇಟಿಯಾಗಿ ರಾಜಿನಾಮೆ ನೀಡಿದ್ದಾರೆ. ಆದರೆ, ಅವರು ಒತ್ತಡಕ್ಕೆ ಮಣಿದು, ಹಣ ಪಡೆದುಕೊಂಡು ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟೀಕರಣಕ್ಕಾಗಿ ನೊಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.