ಹೊಸದಿಲ್ಲಿ: ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟ 4ನೇ ಪ್ಯಾರಾ ಏಷ್ಯಾಡ್ ಪಂದ್ಯಾವಳಿಯ ಪರಿಷ್ಕೃತ ದಿನಾಂಕ ಪ್ರಕಟಗೊಂಡಿದೆ. ಇದು 2023ರ ಅಕ್ಟೋಬರ್ 22ರಿಂದ 28ರ ತನಕ ಚೀನದ ಹಾಂಗ್‌ಝೂನಲ್ಲಿ ನಡೆಯಲಿದೆ ಎಂಬುದಾಗಿ ಏಷ್ಯನ್ ಪ್ಯಾರಾಲಿಂಪಿಕ್ ಕಮಿಟಿ (ಎಪಿಸಿ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಪ್ಯಾರಾ ಏಷ್ಯಾಡ್ ಈ ವರ್ಷದ ಅಕ್ಟೋಬರ್ 9ರಿಂದ 15ರ ತನಕ ಹಾಂಗ್‌ಝೂನಲ್ಲಿ ಏರ್ಪಡಬೇಕಿತ್ತು. ಆದರೆ ಚೀನದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿರುವುದನ್ನು ಗಮನಿಸಿ ಇದನ್ನು ಮುಂದೂಡಲು ನಿರ್ಧರಿಸಲಾಯಿತು.
ಚೀನ ಆತಿಥ್ಯದಲ್ಲಿ ನಡೆಯಲಿರುವ ದ್ವಿತೀಯ ಪ್ಯಾರಾ ಏಷ್ಯಾಡ್ ಪಂದ್ಯಾವಳಿ ಇದಾಗಿದೆ. 2010ರ ಮೊದಲ ಆವೃತ್ತಿ ಗ್ವಾಂಗ್‌ಝೂನಲ್ಲಿ ನಡೆದಿತ್ತು.
ಜುಲೈಯಲ್ಲಿ ನಡೆದ “ದಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ’ (ಒಸಿಎ) ಸಭೆಯಲ್ಲಿ ಏಷ್ಯನ್ ಗೇಮ್ಸ್‌ನ ನೂತನ ದಿನಾಂಕವನ್ನು ಪ್ರಕಟಿಸಲಾಗಿತ್ತು. ಈ ಪ್ರತಿಷ್ಠಿತ ಕ್ರೀಡಾಕೂಟ ಮುಂದಿನ ವರ್ಷದ ಸೆ. 23ರಿಂದ ಅ. 8ರ ತನಕ ನಡೆಯಲಿದೆ. ಇದರ ತಾಣ ಕೂಡ ಹಾಂಗ್‌ಝೂ.