Advertisement
ಆ ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರಾ? ಅದರಲ್ಲಿ ನೈಜತೆ ಇದೆಯಾ ಎಂಬುದನ್ನು ಸಭಾಧ್ಯಕ್ಷರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಸದನದ ಸದಸ್ಯರಾಗಿರುವ ಅವರು ವಿಶ್ವಾಸಮತದಂತಹ ಮಹತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಪರಿಪೂರ್ಣವಾಗಲು ಸಾಧ್ಯವಿಲ್ಲ ಎಂದು ವಾದಿಸಿದರು. ಸಾಕಷ್ಟು ಪುರಾವೆಗಳಿವೆ: ಮುಂಬೈನಲ್ಲಿರುವ ಶಾಸಕರಿಗೂ, ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ.
Related Articles
Advertisement
ಬಿಜೆಪಿ ನಾಯಕರು ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆದಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದೆಲ್ಲವೂ “ಆಪರೇಷನ್ ಕಮಲ’ ಕಾರ್ಯಾಚರಣೆ ಅಲ್ಲವೇ ಎಂದು ಕೇಳಿದರು. 2009ರಲ್ಲಿ ತುರುವೆಕೆರೆ ಜಗ್ಗೇಶ್, ಗೋವಿಂದರಾಜನಗರದ ವಿ.ಸೋಮಣ್ಣ, ಅರಬಾವಿ ಬಾಲಚಂದ್ರ ಜಾರಕಿಹೊಳಿ, ಚನ್ನಪಟ್ಟಣ ಅಶ್ವಥ್ ಇವರನ್ನೆಲ್ಲಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದು “ಆಪರೇಷನ್ ಕಮಲ’ ಅಲ್ಲವೇ ಎಂದರು.
ಆಗ, ಮಧ್ಯಪ್ರವೇಶಿಸಿದ ವಿ.ಸೋಮಣ್ಣ, ಕೃಷ್ಣಬೈರೇಗೌಡರೂ ಜನತಾದಳದಿಂದ ಕಾಂಗ್ರೆಸ್‌ಗೆ ಬಂದವರೇ, ಹಿಂದೆ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದವರೇ. ಶಾಸಕನಾದವನಿಗೆ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ ಎಂದಾಗ ಬೇಸರಗೊಂಡು ರಾಜೀನಾಮೆ ನೀಡುವುದು ಸಹಜ. ರಾಜೀನಾಮೆ ನೀಡಿದ ನಂತರ ಯಾವುದೇ ಪಕ್ಷ ಸೇರಲು ಅವರು ಸ್ವತಂತ್ರರು ಎಂದು ಹೇಳಿದರು.
ಗರಂ ಆದ ಯಡಿಯೂರಪ್ಪ: ಬಿಜೆಪಿಯ ಮಾಧುಸ್ವಾಮಿ, ಶಾಸಕರ ರಾಜೀನಾಮೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಶಾಸಕರ ಮೇಲಿನ ಆರೋಪ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಸದನದಲ್ಲಿ ಆ ಬಗ್ಗೆ ಚರ್ಚೆ ಮಾಡುವುದು ಎಷ್ಟು ಸರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಉಮೇಶ್ ಜಾಧವ್ ಅವರನ್ನು “ಆಪರೇಷನ್ ಕಮಲ’ ಕಾರ್ಯಾಚರಣೆಯಡಿ ಸೆಳೆಯಲಾಯಿತು ಎಂಬ ಕೃಷ್ಣಬೈರೇಗೌಡರ ಆರೋಪಕ್ಕೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗರಂ ಆದರು.
ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಸ್ಪೀಕರ್ ಅವರು ಅಂಗೀಕಾರ ಮಾಡಿದ್ದಾರೆ. ನಂತರ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಸಂಸದರೂ ಆಗಿದ್ದಾರೆ. ಈಗ್ಯಾಕೆ ಆ ವಿಚಾರ ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಅವರು, ಯಾರದೇ ಆಗಲಿ ರಾಜೀನಾಮೆ ನೀಡಿ ಅದು ಅಂಗೀಕಾರವಾದ ನಂತರ ಯಾವ ಪಕ್ಷ ಸೇರಬೇಕು ಎಂದು ತೀರ್ಮಾನಿಸಲು ಅವರು ಸ್ವತಂತ್ರರು. ಜೀವನ ಪೂರ್ತಿ ಒಂದೇ ಪಕ್ಷದ ಜೀತದಾಳುಗಳಾಗಿ ಇರುತ್ತಾರಾ ಎಂದು ಪ್ರಶ್ನಿಸಿದರು.
ಅಧಿಕಾರ ಉಳಿಸಿಕೊಳ್ಳಲು ನಾನು ಮಾತನಾಡುತ್ತಿಲ್ಲ. ಸಚಿವಗಿರಿ ನನಗೆ ಅನಿವಾರ್ಯವಲ್ಲ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕಾಗಿದೆ. ಬಿಜೆಪಿಯವರು ದೇಶದಲ್ಲಿ ಯಾವುದೇ ಪಕ್ಷಗಳು ಇರಬಾರದು. ನಾವೇ ಇರಬೇಕು ಎಂಬ ಭಾವನೆ ಹೊಂದಿದ್ದಾರೆ. ಇದು ಸರಿಯಲ್ಲ, ತೆಲಂಗಾಣ, ಆಂಧ್ರ, ಗೋವಾ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಇದಕ್ಕೆಲ್ಲಾ ಕಾರಣ ಬಿಜೆಪಿಯೇ ಆಗಿದೆ.-ಕೃಷ್ಣ ಬೈರೇಗೌಡ. ಸಚಿವ